ವಿಧಾನಸೌಧದಲ್ಲಿ ಸವದಿ ವಿಡಿಯೋ ನೋಡಿದ್ದು ದೇಶ ದ್ರೋಹದ ಕೆಲಸವಲ್ಲ: ಮಾಧುಸ್ವಾಮಿ

Public TV
1 Min Read

ತುಮಕೂರು: ಲಕ್ಷ್ಮಣ ಸವದಿಗೆ ಡಿಸಿಎಂ ಸ್ಥಾನ ಕೊಟ್ಟಿರುವುದನ್ನು ವಿರೋಧಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೊದಲು ತಾವು ಮಾಡಿದ ತಪ್ಪನ್ನು ಮೆಲುಕು ಹಾಕಲಿ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ವಿಡಿಯೋ ನೋಡಿದ್ದು ನೈತಿಕ ತಪ್ಪು, ಆ ತಪ್ಪಿಗೆ ತಕ್ಕ ಶಾಸ್ತಿಯಾಗಿದೆ. ಹಾಗಂತ ಅದು ದೇಶ ದ್ರೋಹದ ಕೆಲಸವಲ್ಲ. ಸಿದ್ದರಾಮಯ್ಯನವರು ಇದನ್ನೇ ಇಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ನಾವೆಲ್ಲಾ ದೇವಸ್ಥಾನ ಎಂದು ಭಾವಿಸುವ ವಿಧಾನಸೌಧದ ಪ್ರಮುಖ ದ್ವಾರದ ಬಾಗಿಲನ್ನು ಕಾಲಿನಿಂದ ಒದಿಯುವ ಮೂಲಕ ಸಿದ್ದರಾಮಯ್ಯನವರು ಪವಿತ್ರ ಸ್ಥಳಕ್ಕೆ ಅಪಚಾರ ಮಾಡಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಅಂದಿನ ಪೊಲೀಸ್ ಆಯುಕ್ತರಾಗಿದ್ದ ಶಂಕರ್ ಬಿದರಿ ಅವರ ಕಾಲರ್ ಗೆ ಕೈ ಹಾಕಿ ದರ್ಪ ಮೆರೆದಿದ್ದರು. ಅಂಥವರು ಮುಖ್ಯಮಂತ್ರಿ ಆಗಲಿಲ್ಲವೇ. ಹೀಗಿರುವಾಗ ಸವದಿ ಅವರಿಗೆ ಡಿಸಿಎಂ ಸ್ಥಾನ ನೀಡಿದ್ದರ ಕುರಿತು ಮಾತನಾಡುವ ನೈತಿಕತೆ ಸಿದ್ದರಾಮಯ್ಯರಿಗಿಲ್ಲ. ಚುನಾವಣೆಯಲ್ಲಿ ಸೋತವರಿಗೆ ಡಿಸಿಎಂ ಸ್ಥಾನ ಕೊಟ್ಟ ವಿಚಾರದಲ್ಲಿ ವಿಪಕ್ಷದವರು ಸುಖಾಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾಧುಸ್ವಾಮಿ ಆರೋಪಿಸಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಎರಡು ಬಾರಿ ಯಾವ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಬಂದಿದ್ದರು ಎಂದು ಕಾಂಗ್ರೆಸ್‍ನವರೇ ಉತ್ತರಿಸಬೇಕು. ದೇಶದ ಪ್ರಧಾನಿಯೇ ಚುನಾವಣೆಯಲ್ಲಿ ಗೆದ್ದು ಬರದೆ 10 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಹೀಗಿರುವಾಗ ರಾಜ್ಯದ ಡಿಸಿಎಂ ಆಗಿದಕ್ಕೆ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ ಎಂದು ವಿಪಕ್ಷದ ವಿರುದ್ದ ಹರಿಹಾಯ್ದರು.

Share This Article
Leave a Comment

Leave a Reply

Your email address will not be published. Required fields are marked *