ಚಿಕ್ಕಮಗಳೂರು: 10 ವರ್ಷದ ಬಳಿಕ ಕೆರೆ ತುಂಬಿದೆ ಎಂದು ಗ್ರಾಮಸ್ಥರು ಖುಷಿಪಡುವಷ್ಟರಲ್ಲಿ ಕೆರೆಯ ನೀರು ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿರುವುದು ಗ್ರಾಮಸ್ಥರನ್ನು ತಲೆ ಮೇಲೆ ಕೈಹೊದ್ದು ಕೂರುವಂತೆ ಮಾಡಿದೆ.
ತಾಲೂಕಿನ ಆರದವಳ್ಳಿ ಕೆರೆ ಕಳೆದ 10 ವರ್ಷಗಳಿಂದ ತುಂಬಿರಲಿಲ್ಲ. ಈ ವರ್ಷ ತುಂಬಿದರಿಂದ ಜಾನುವಾರುಗಳು ಹಾಗೂ ಕೃಷಿಗೆ ಸಮೃದ್ಧ ನೀರು ದೊರೆಯಿತು ಎಂದು ಖುಷಿ ಪಟ್ಟಿದ್ದರು. ಆದರೆ ಕೆರೆಗೆ ರಾಸಾಯನಿ ಮಿಶ್ರಣವಾಗಿರುವುದರಿಂದ ಕೆರೆಯ ಬಣ್ಣ ಹಸಿರು ಬಣ್ಣಕ್ಕೆ ತಿರುಗಿರುವುದು ಸ್ಥಳಿಯರನ್ನು ಆತಂಕಕ್ಕೆ ದೂಡಿದೆ. ಅಲ್ಲದೆ ಕೆರೆ ತನ್ನ ರೂಪವನ್ನು ಬದಲಿಸಿಕೊಳ್ಳುತ್ತಿದ್ದಂತೆ ಊರಿನ ತುಂಬಾ ದುರ್ನಾತ ಬೀರಲಾರಂಭಿಸಿದೆ. ದಾರಿಹೊಕ್ಕರು ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿ, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಕೆರೆಯ ಬಣ್ಣ ಬದಲಾಗುತ್ತಿದ್ದಂತೆ ಕೆರೆಯಲ್ಲಿದ್ದ ಮೀನು-ಏಡಿ ಸೇರಿದಂತೆ ಜಲಚರಗಳು ಸಾವಿಗೀಡಾಗಿವೆ. ಸದ್ಯ ಈ ನೀರನ್ನು ಯಾವುದಕ್ಕೂ ಬಳಸಲಾರದಂತಾಗಿದೆ. ಕೆರೆಯಲ್ಲಿ ಮೀನು ಸಾಕಾಣಿಕೆಗೆ ಗುತ್ತಿಗೆ ಪಡೆದವರು ಮೀನಿನ ಬೆಳವಣಿಗೆಗೆ ಅಥವಾ ಬೇರೆ ಯಾವುದೋ ಕಾರಣಕ್ಕೆ ರಾಸಾಯನಿಕ ಬಳಸಿರಬಹುದು. ಆದ್ದರಿಂದ ಕೆರೆ ನೀರು ಹಸಿರು ಬಣ್ಣಕ್ಕೆ ತಿರುಗಿದೆ ಎಂದು ಶಂಕಿಸಲಾಗಿದೆ.
ಕೆರೆಯ ಪಕ್ಕದಲ್ಲೇ ಶಾಲೆ-ಅಂಗನವಾಡಿ ಇದ್ದು ಮಕ್ಕಳು ಮೂಗು ಮುಚ್ಚಿಕೊಂಡೇ ಓಡಾಡುತ್ತಿದ್ದಾರೆ. ಕೆರೆಯ ಪಕ್ಕದಲ್ಲೇ ಇರುವ ದೇವಸ್ಥಾನಕ್ಕೆ ಬರುವ ಭಕ್ತರು ಕೂಡ ಕೆರೆಯ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಸಂಚರಿಸುತ್ತಿದ್ದಾರೆ. ಈ ನೀರನ್ನು ಈಗ ಜಾನುವಾರು ಕೂಡ ಕುಡಿಯುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಘಟನೆಗೆ ಸೂಕ್ತ ಕಾರಣ ತಿಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.