ಕಾಫಿ ಕೊಯ್ಯಲು ಕಾರ್ಮಿಕರಿಲ್ಲ – ಆತಂಕದಲ್ಲಿ ಬೆಳೆಗಾರರು

Public TV
2 Min Read

ಚಿಕ್ಕಮಗಳೂರು : ಕಾಫಿ ಬೆಳೆಯನ್ನು ಹೇರಳವಾಗಿ ಬೆಳೆಯಲಾಗುವ ಮಲೆನಾಡು ಭಾಗಗಳಲ್ಲಿ ಕಾಫಿ ಕೊಯ್ಯಲು ಕಾರ್ಮಿಕರಿಲ್ಲದೇ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ಈ ವರ್ಷ ಕಾಫಿ ಚೆನ್ನಾಗಿ ಫಸಲು ನೀಡಿದ್ದರೂ ಕೊಯ್ಯಲು ಕಾರ್ಮಿಕರಿಲ್ಲದೇ ಗಿಡದಲ್ಲೇ ಕೊಳೆತು ಹೋಗುತ್ತಿರುವ ಕಾರಣ ಬೆಳೆಗಾರರು ಕಂಗಾಲಾಗಿದ್ದಾರೆ.

ಪ್ರತಿ ವರ್ಷ ಈ ವೇಳೆಗೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಶೇ.50-60 ರಷ್ಟು ಕಾಫಿ ಹಣ್ಣನ್ನ ಕೊಯ್ಯಲಾಗುತ್ತದೆ. ಆದರೆ ಈ ಬಾರಿ ಕೇವಲ ಶೇ.20-30 ರಷ್ಟು ಕಾಫಿಯನ್ನು ಕೊಯ್ಯಲಾಗಿದೆ. ಪ್ರತಿ ವರ್ಷ ಹೊರ ಜಿಲ್ಲೆ, ಹೊರರಾಜ್ಯಗಳಿಂದ ಸಾವಿರಾರು ಕಾರ್ಮಿಕರು ಕಾಫಿ ಕೊಯ್ಯುವ ವೇಳೆ ಕೆಲಸಕ್ಕೆ ಬರುತ್ತಿದ್ದರು. ಆದರೆ ಈ ವರ್ಷ ಕೊರೊನಾದ ಮೂರನೇ ಅಲೆಯಿಂದ ಪ್ರವಾಸಿಗರು ಬರಲು ಸಾಧ್ಯವಾಗಿಲ್ಲ. ಇದರಿಂದ ಕಾಫಿ ಕೊಯ್ಯಲು ಕಾರ್ಮಿಕರ ಕೊರತೆ ಉಂಟಾಗಿದೆ. ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ಇನ್ನಿಲ್ಲ

ಕಳೆದ ಮೂರು ವರ್ಷಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಬಹುತೇಕ ಕಾಫಿ ಬೆಳೆ ಮಣ್ಣು ಪಾಲಾಗಿತ್ತು. 2021ರಲ್ಲೂ ವರ್ಷವಿಡೀ ಮಳೆ ಸುರಿದಿದ್ದರಿಂದ ಬಹುತೇಕ ಕಾಫಿ ನಷ್ಟವಾಗಿತ್ತು. ಆದರೆ ಈ ವರ್ಷ ಮಳೆಗಾಳಿಯಿಂದ ಅಳಿದುಳಿದ ಕಾಫಿಯನ್ನು ಕೊಯ್ಯುವುದಕ್ಕೆ ಜನ ಸಿಗದೆ ಬೆಳೆಗಾರರು ಆಂತಕಕ್ಕೀಡಾಗಿದ್ದಾರೆ.

ಮಲೆನಾಡಿನ ತೋಟಗಳಲ್ಲಿ ಕಾಫಿ ಚೆನ್ನಾಗಿ ಫಸಲು ನೀಡಿದೆ. ಜಿಲ್ಲೆಯಲ್ಲಿ ಸರಿಸುಮಾರು ಒಂದು ಲಕ್ಷ ಹೆಕ್ಟೆರ್ ಜಾಗದಲ್ಲಿ ಅರೇಬಿಕಾ ಹಾಗೂ ರೋಬೋಸ್ಟಾ ಕಾಫಿಯನ್ನು ಬೆಳೆಯಲಾಗಿದೆ. ಆದರೆ ಕಾಫಿ ಕೊಯ್ಲಿಗೆ ಕಾರ್ಮಿಕರೇ ಇಲ್ಲದಂತಾಗಿದೆ. ಹತ್ತಾರು ಎಕರೆ ಕಾಫಿ ತೋಟಗಳಲ್ಲಿ ಕೇವಲ ನಾಲ್ಕೈದು ಕಾರ್ಮಿಕರಷ್ಟೇ ಕೆಲಸ ಮಾಡುವಂತಾಗಿದೆ. ಕೆಲವೆಡೆ ಮನೆಯವರೇ ಕೊಯ್ಯುವಂತಹಾ ಸ್ಥಿತಿಯೂ ನಿರ್ಮಾಣವಾಗಿದೆ. ಇದನ್ನೂ ಓದಿ: ಡಿಕೆಶಿ Vs ಸಿದ್ದು ಬಣಗಳ ಕಿತ್ತಾಟ: ಲಾಭ ಪಡೆಯಲು ಮುಂದಾದ ಹಿರಿಯ ನಾಯಕರು

2021ರಲ್ಲೂ ಮಳೆ-ಗಾಳಿಗೆ ಉದುರಿ ಗಿಡಕ್ಕೆ ಗೊಬ್ಬರವಾದ ಕಾಫಿಯೇ ಹೆಚ್ಚು. ಆದರೆ ಇದೀಗ ಕಾರ್ಮಿಕರ ಕೊರತೆಯಿಂದ ಉಳಿಸಿಕೊಂಡಿದ್ದ ಬೆಳೆಯನ್ನೂ ಕೊಯ್ಲು ಮಾಡಲಾಗದಂತಹಾ ಪರಿಸ್ಥಿತಿ ಎದುರಾಗಿದೆ. ಕೆಲ ಸಣ್ಣ ಹಾಗೂ ಮಧ್ಯಮ ವರ್ಗದ ಬೆಳೆಗಾರರು ನಮ್ಮ ತೋಟಕ್ಕೆ ನೀವು ಬನ್ನಿ ನಿಮ್ಮ ತೋಟಕ್ಕೆ ನಾವು ಬರ್ತೀವಿ ಎಂದು ಒಬ್ಬರ ತೋಟದಲ್ಲೊಬ್ಬರು ಕಾಫಿಯನ್ನು ಕೊಯ್ಯುವಂತಾಗಿದೆ.

2021ರಲ್ಲಿ ವರ್ಷವಿಡೀ ಮಳೆಯಾಗಿದ್ದರಿಂದ ನವೆಂಬರ್‌ನಲ್ಲಿ ಕಾಫಿ ಫಸಲು ಬಂದಿದೆ. ಈ ವೇಳೆಗೆ ಶೇ.80 ರಷ್ಟು ಕೊಯ್ಲು ಆಗಬೇಕಿತ್ತು. ಕಾಫಿಯನ್ನು ಸೂಕ್ತ ಸಮಯದಲ್ಲಿ ಕೊಯ್ಯದಿರುವುದರಿಂದ ಮತ್ತೆ ಉದುರುವುದಕ್ಕೆ ಪ್ರಾರಂಭವಾಗಿದೆ. ಇನ್ನೊಂದೆಡೆ ಕಾರ್ಮಿಕರ ಕೊರತೆಯಿಂದ ಇರುವ ಬೆಳೆಯನ್ನೂ ಕೊಯ್ಲು ಮಾಡದ ಸಂಕಷ್ಟ ಬೆಳೆಗಾರರದ್ದಾಗಿದೆ. ಇದನ್ನೂ ಓದಿ: ಪೊಲೀಸ್ ಠಾಣೆಯಿಂದಲೇ ಜೀಪ್ ಕದ್ದ ಕಳ್ಳ

ಮಾರುಕಟ್ಟೆಯಲ್ಲಿ ಕಾಫಿಗೆ ಉತ್ತಮ ಬೆಲೆ ಇದೆ. ಆದರೆ ಬೆಳೆ ಇಲ್ಲ. ಇದ್ದರೂ ಸಮರ್ಪಕವಾಗಿ ಕೊಯ್ಯಲು ಸಾಧ್ಯವಾಗುತ್ತಿಲ್ಲ. ಇರುವ ಫಸಲು ಕೊಯ್ಯಲು ಆಗದಿರುವುದು ಬೆಳೆಗಾರರಿಗೆ ಬಿಸಿತುಪ್ಪವಾಗಿದೆ. ಈ ಮಧ್ಯೆ ಆಗಾಗ ಒಂದಷ್ಟು ಮಳೆ ಬಂದು ಹೋಗುತ್ತಿರುವುದು ಕೂಡ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *