ರಾಜ್ಯದ ಶಾಖೋತ್ಪನ್ನ ಕೇಂದ್ರಗಳಲ್ಲಿ ಕಲ್ಲಿದ್ದಲು ಕೊರತೆ – ವಿದ್ಯುತ್ ಅಭಾವದ ಆತಂಕ

Public TV
1 Min Read

ರಾಯಚೂರು: ರಾಜ್ಯಕ್ಕೆ ವಿದ್ಯುತ್ ಕ್ಷಾಮ ಎದುರಾಗುವ ಸಾಧ್ಯತೆಗಳು ದಟ್ಟವಾಗಿವೆ. ರಾಜ್ಯದ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ಕಲ್ಲಿದ್ದಲಿನ ಕೊರತೆ ಉಂಟಾಗಿದ್ದು, ರಾಜ್ಯದಲ್ಲಿ ವಿದ್ಯುತ್ ಅಭಾವ ಉಂಟಾಗುವ ಸಾಧ್ಯತೆಗಳಿವೆ.

ರಾಜ್ಯಕ್ಕೆ ಶೇ.45 ರಷ್ಟು ವಿದ್ಯುತ್ ನೀಡುವ ರಾಯಚೂರಿನ ಶಕ್ತಿನಗರದ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್.ಟಿ.ಪಿ.ಎಸ್ ನ ಎಂಟು ಘಟಕಗಳಲ್ಲಿ ನಾಲ್ಕು ಘಟಕಗಳು ಕಲ್ಲಿದ್ದಲು ಕೊರತೆಯಿಂದ ಈಗಾಗಲೇ ವಿದ್ಯುತ್ ಉತ್ಪಾದನೆ ನಿಲ್ಲಿಸಿವೆ. 1720 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮಥ್ರ್ಯ ಆರ್.ಟಿ.ಪಿ.ಎಸ್ ಈಗ ಕೇವಲ ಸುಮಾರು 500 ಮೆಗಾವ್ಯಾಟ್ ನಷ್ಟು ವಿದ್ಯುತ್ ಉತ್ಪಾದಿಸುತ್ತಿದೆ. ಇದನ್ನೂ ಓದಿ: ಕೊರೊನಾ ನಡುವೆ ಸಾವಿರಾರು ಬೆಂಬಲಿಗರೊಂದಿಗೆ ಎಂಎಲ್‍ಸಿ ಅದ್ದೂರಿ ಹುಟ್ಟುಹಬ್ಬ

ಆರ್.ಟಿ.ಪಿ.ಎಸ್ ನಲ್ಲಿ ಸದ್ಯ 12,010 ಮೆಟ್ರಿಕ್ ಟನ್ ಕಲ್ಲಿದ್ದಲು ಮಾತ್ರ ಸಂಗ್ರಹವಿದೆ. ನಾಲ್ಕು ಘಟಕಗಳಿಗೆ ಒಂದು ದಿನಕ್ಕೆ ಮಾತ್ರ ಇಷ್ಟು ಕಲ್ಲಿದ್ದಲು ಸಾಕಾಗುತ್ತದೆ. ಎಂಟು ಘಟಕಗಳಿಗೆ ಒಂದು ದಿನಕ್ಕೆ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಬೇಕು. ಸಿಂಗರೇಣಿ, ಮಹಾನದಿ ಮತ್ತು ವೆಸ್ಟರ್ನ್ ಕೋಲ್ ಗಣಿಯಿಂದ ದಿನಕ್ಕೆ 8 ರಿಂದ 9 ರೇಕು ಕಲ್ಲಿದ್ದಲು ಬರುತ್ತಿತ್ತು. ಈಗ ಕೇವಲ 3 ರಿಂದ 4 ರೇಕು ಕಲ್ಲಿದ್ದಲು ಬರುತ್ತಿದೆ. ರಾಷ್ಟ್ರಮಟ್ಟದಲ್ಲಿ ಕಲ್ಲಿದ್ದಲು ಹಂಚಿಕೆ, ಮಳೆಯ ಪರಿಣಾಮ ಸೇರಿದಂತೆ ನಾನಾ ತಾಂತ್ರಿಕ ಕಾರಣದಿಂದಾಗಿ ಕಲ್ಲಿದ್ದಲು ಕೊರತೆ ಎದುರಾಗಿದೆ.

ಕಲ್ಲಿದ್ದಲು ಕೊರತೆಯಿಂದಾಗಿ ಆರ್.ಟಿ.ಪಿ.ಎಸ್ ನ ಉಳಿದ 4 ಘಟಕಗಳು ಸಹ ಬಂದ್ ಆಗುವ ಆತಂಕ ಎದುರಾಗಿದೆ. ಇನ್ನೂ ಜಿಲ್ಲೆಯ ಯರಮರಸ್ ನಲ್ಲಿರುವ ಒಟ್ಟು 1,600 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮಥ್ರ್ಯದ ವೈಟಿಪಿಎಸ್ ನ ಎರಡು ಘಟಕಗಳಲ್ಲಿ ಒಂದು ಘಟಕ ಮಾತ್ರ 648 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ವೈಟಿಪಿಎಸ್ ನಲ್ಲಿ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹವಿದ್ದು, ಎರಡುದಿನಕ್ಕೆ ಮಾತ್ರ ಸಾಕಾಗಲಿದೆ. ಇದನ್ನೂ ಓದಿ: ನವರಾತ್ರಿಯ ಮೊದಲದಿನ ಶೈಲಪುತ್ರಿಯ ಆರಾಧನೆ

ಇನ್ನೂ ರಾಜ್ಯದ ಎಲ್ಲ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಪರಸ್ಥಿತಿಯೂ ಹೀಗೆ ಇದೆ. ಸದ್ಯ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲ ವಿದ್ಯುತ್ ಸ್ಥಾವರಗಳ ಮೇಲೆ ಅವಲಂಬನೆ ಹೆಚ್ಚಾಗಿದೆ.

Share This Article
Leave a Comment

Leave a Reply

Your email address will not be published. Required fields are marked *