ಅನೀಶ್ ನಟನೆಯ ‘ಮಾಯಾನಗರಿ’ ಚಿತ್ರದ ಲಚ್ಚಿ ಸಾಂಗ್ ರಿಲೀಸ್

Public TV
2 Min Read

ವಿಭಿನ್ನ ಶೈಲಿಯ ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಮಾಯಾನಗರಿ (Mayanagari) ಚಿತ್ರದ ಲಚ್ಚಿ ಲಚ್ಚಿ ಹಾಡಿನ (Song) ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ರೀಲ್ಸ್ ನಲ್ಲೇ ಫೇಮಸ್ ಆಗಿ, ಲಕ್ಷಾಂತರ ಫಾಲೋವರ್ಸ್ ಹೊಂದಿರುವ  5 ವರ್ಷದ ಮಗು  ನಿಶಿತಾ ಕೈಲಿ ಲಚ್ಚಿ ಹಾಡನ್ನು ಬಿಡುಗಡೆಗೊಳಿಸಲಾಯಿತು.

ಅನೀಶ್ ತೇಜೇಶ್ವರ್ (Anish Tejeshwar), ತೇಜು ಹಾಗೂ ಶ್ರಾವ್ಯರಾವ್ (Shravya Rao) ಪ್ರಮುಖ  ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ  ಶಂಕರ್ ಆರಾಧ್ಯ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರರಂಗದಲ್ಲಿ ನಡೆಯುವ ಒಂದಷ್ಟು ಸತ್ಯ ಘಟನೆಗಳನ್ನಿಟ್ಟುಕೊಂಡು ಶಂಕರ್ ಆರಾಧ್ಯ ಈ ಚಿತ್ರವನ್ನು ನಿರೂಪಿಸಿದ್ದಾರೆ. ಮಾಯಾನಗರಿ ಇದೀಗ ಬಿಡುಗಡೆಗೆ ಸಿದ್ದವಾಗಿದ್ದು ಇತ್ತೀಚೆಗಷ್ಟೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ವೈರಲ್ ಆಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಶಂಕರ್, ಈ ಹಾಡು ನಮ್ಮ ಚಿತ್ರಕ್ಕೆ ಟ್ರಂಪ್ ಕಾರ್ಡ್ ಆಗುತ್ತೆ ಅಂತ ಕಲರ್ ಫುಲ್ ಆಗಿಯೇ ಶೂಟ್  ಮಾಡಿದ್ದೇವೆ. ಕಂಠೀರವ ಸ್ಟುಡಿಯೋ ಹಾಗೂ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ 6 ದಿನ ಇದನ್ನು ಚಿತ್ರೀಕರಿಸಿದ್ದೇವೆ. ಹಾರರ್, ಆ್ಯಕ್ಷನ್, ಫ್ಯಾಮಿಲಿ ಸೆಂಟಿಮೆಂಟ್ ಕಥೆ ಇದಾಗಿದ್ದು, ಚಿತ್ರದಲ್ಲಿ ನಾಯಕ ಶಂಕರ್ ನಾಗ್  ಅಭಿಮಾನಿ, ಚಿತ್ರರಂಗದಲ್ಲಿ ದೊಡ್ಡ ನಿರ್ದೇಶಕನಾಗಬೇಕೆಂದು ಹೋರಾಟ ನಡೆಸುವ ಆತನಿಗೆ ಕೊನೆಗೂ ಒಂದು ಅವಕಾಶ ಸಿಕ್ಕಿ, ಮಾಯಾನಗರಿ ಎಂಬ ಸ್ಥಳಕ್ಕೆ ಹೋಗಬೆಕಾಗುತ್ತದೆ. ಆ ಊರಿಗೆ ಬರುವ ಆತ ಅಲ್ಲಿ ತಾನೇ ಪಾತ್ರವಾಗಬೇಕಾಗುತ್ತದೆ. ಹೀಗೆ ಕುತೂಹಲಕಾರಿಯಾಗಿ ಸಾಗುವ ಈ ಚಿತ್ರಕ್ಕೆ ಬೆಂಗಳೂರು, ಶಿವಮೊಗ್ಗ, ಸಾಗರ, ಚಿಕ್ಕಮಗಳೂರು, ಭದ್ರಾವತಿ ಸುತ್ತಮುತ್ತ ಸುಮಾರು 65 ದಿನಗಳ‌ ಕಾಲ ಚಿತ್ರೀಕರಣ ಮಾಡಿದ್ದೇವೆ. ವಿಶೇಷವಾಗಿ ಹಿರಿಯ ನಟ ದ್ವಾರಕೀಶ್ ಅವರು ರಿಯಲ್ ಲೈಫ್ ಪಾತ್ರವನ್ನೇ ಮಾಡಿದ್ದಾರೆ ಎಂದು ಹೇಳಿದರು.

ನಾಯಕ  ಅನೀಶ್ ಮಾತನಾಡುತ್ತ ನಾನು ತುಂಬಾ ಇಷ್ಟಪಟ್ಟು ಮಾಡಿದಂಥ ಪಾತ್ರವಿದು. ದ್ವಾರಕೀಶ್ ರಂಥ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿದ್ದು ನನ್ನ ಅದೃಷ್ಟ. ಡೈರೆಕ್ಟರ್ ಆಗಬೇಕೆಂದು ಕನಸು ಕಾಣೋ ಹುಡುಗನ ಪಾತ್ರ ಮಾಡಿದ್ದೇನೆ ಎಂದರು.

ನಟಿ ಶ್ರಾವ್ಯ ರಾವ್ ಮಾತನಾಡಿ ಚಿತ್ರದಲ್ಲಿ ನಾನು ಮಲ್ಲಿಕಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ನನ್ನ‌ ಕರಿಯರ್ ನಲ್ಲೇ ಒಂದು ಬೆಸ್ಟ್ ಪಾತ್ರ. ತುಂಬಾ ಶೇಡ್ಸ್ ಇದೆ ಎಂದರು. ಮತ್ತೊಬ್ಬ‌ ನಟ ಭರತ್ ಮಾತನಾಡಿ ತನ್ನ ಪಾತ್ರ ಪರಿಚಯಿಸಿಕೊಂಡರು. ಚಿತ್ರದಲ್ಲಿ ಇನ್ನೂ ಹಲವಾರು ವಿಶೇಷತೆಗಳಿದ್ದು, ಅದನ್ನು ಹಂತ ಹಂತವಾಗಿ ಪರಿಚಯಿಸುವ ಆಲೋಚನೆ ಶಂಕರ್ ಅವರಿಗಿದೆ. ಸ್ಯಾಂಡಲ್ ವುಡ್ ಪಿಕ್ಚರ್ಸ್ ಬ್ಯಾನರ್ ಅಡಿ, ನಿರ್ಮಾಣವಾಗಿರುವ ಈ ಚಿತ್ರಕ್ಕೆ ಶ್ವೇತಾ ಶಂಕರ್ ಸಹ ನಿರ್ಮಾಣವಿದೆ.

 

ತಾಂತ್ರಿಕವಾಗಿ  ಅದ್ಧೂರಿಯಾಗಿ ಮೂಡಿ ಬಂದಿರುವ ಈ ಚಿತ್ರಕ್ಕೆ  ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಕ್ರಮ್ ಮೋರ್  ಫೈಟ್ ಕಂಪೋಸ್ ಮಾಡಿದ್ದಾರೆ. ಮದನ್ – ಹರಿಣಿ ಹಾಗೂ ಮುರಳಿ ನೃತ್ಯ ನಿರ್ದೇಶನ, ವಿಜಯ್ ಎಂ ಕುಮಾರ್ ಸಂಕಲನ, ಶ್ರೀನಿವಾಸ್ ಕ್ಯಾಮೆರಾ ಕೈಚಳಕ ಈ ಚಿತ್ರಕ್ಕಿದೆ. ಶರತ್ ಲೋಹಿತಾಶ್ವ, ಅವಿನಾಶ್, ಸುಚೇಂದ್ರ ಪ್ರಸಾದ್, ಎಡಕಲ್ಲು ಗುಡ್ಡದ ಚಂದ್ರಶೇಖರ್, ಚಿಕ್ಕಣ್ಣ, ಗಿರಿ ದಿನೇಶ್ ಹಾಗೂ ನಿಹಾರಿಕಾ  ಚಿತ್ರದ ತಾರಬಳಗದಲ್ಲಿದ್ದಾರೆ.

Share This Article