ಮನೆಯ ಸುತ್ತ ಕಂದಕ ತೋಡಿ ಕಾರ್ಮಿಕನಿಗೆ ಹಿಂಸೆ – ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ

Public TV
2 Min Read

ಮಡಿಕೇರಿ: ಮನೆಯ ಸುತ್ತಲೂ ಕಂದಕ ತೋಡಿ ಕಾರ್ಮಿಕನಿಗೆ ಹಿಂಸೆ ನೀಡುತ್ತಿರುವ ತೋಟದ ಮಾಲೀಕರ ಕ್ರಮದಿಂದ ಬೇಸತ್ತು ಕಾರ್ಮಿಕನ ಕುಟುಂಬದ ಸದಸ್ಯರು ದಯಾಮರಣ ನೀಡಬೇಕೆಂದು ರಾಷ್ಟ್ರಪತಿಗೆ ಪತ್ರ ಬರೆದಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

ಹೌದು, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಗ್ರಾಮದಲ್ಲಿ ದುಬಾರಿ ಗ್ರೂಪ್‌ಗೆ ಸೇರಿದ ಮಸ್ಕಲ್ ಕಾಫಿ ತೋಟದಲ್ಲಿ ವಾಸವಿರುವ ಕಾರ್ಮಿಕ ಸುಬ್ರಮಣಿ ಎಸ್ ಕಳೆದ 25 ವರ್ಷದಿಂದ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದರು. 2016ರಲ್ಲಿ ಯಾವುದೇ ನೋಟೀಸ್ ನೀಡದೇ ತೋಟದ ಮಾಲೀಕರು ಸುಬ್ರಮಣಿಯನ್ನು ಕೆಲಸದಿಂದ ತೆಗೆದುಹಾಕಿದ್ದರು. ಈ ಬಗ್ಗೆ ಜಿಲ್ಲಾ ಕಾರ್ಮಿಕ ನ್ಯಾಯಾಲಯದಲ್ಲಿ ದೂರು ನೀಡಿದ್ದರು.

ನ್ಯಾಯಾಲಯದ ತೀರ್ಪು ಬರುವವರೆಗೂ ಕಾಫಿ ತೋಟದ ಮನೆಯಲ್ಲೇ ವಾಸವಿದ್ದ ಸುಬ್ರಮಣಿ ಕುಟುಂಬಕ್ಕೆ ಇದೀಗ ಮಾಲೀಕರು ತೊಂದರೆ ನೀಡುತ್ತಿದ್ದಾರೆ. ತೋಟದ ಮನೆಯಿಂದ ಕಾರ್ಮಿಕ ಹಾಗೂ ಅವರ ಕುಟುಂಬ ಹೊರಬರದಂತೆ ಮನೆಯ ಸುತ್ತಲೂ ಕಂದಕ ತೋಡಿದ್ದಾರೆ. ಈ ಬಗ್ಗೆ ಸುಬ್ರಮಣಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮನನೊಂದ ಕಾರ್ಮಿಕ ರಾಷ್ಟ್ರಪತಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಪತನ – ಪೈಲಟ್‌ಗಳ ಸ್ಥಿತಿ ಚಿಂತಾಜನಕ

ಕಾರ್ಮಿಕ ಸುಬ್ರಮಣಿಗೆ ತೋಟದ ವತಿಯಿಂದ ನೀಡಿದ್ದ ಮನೆಯಲ್ಲಿ ಪತ್ನಿ, ಮಗಳೊಂದಿಗೆ ವಾಸವಾಗಿದ್ದಾರೆ. ಮೊದಲ ಮಹಡಿಯಲ್ಲಿ ಮನೆ ಇದ್ದು, ಕೆಳಭಾಗದಲ್ಲಿ ತೋಟದ ಸಾಮಗ್ರಿಗಳ ಕೊಠಡಿ ಇದೆ. ತೋಟದ ಮನೆಯನ್ನು ಬಿಟ್ಟು ತೆರಳಬೇಕೆಂದು ತೋಟದ ಮಾಲೀಕರು ಹಾಗೂ ವ್ಯವಸ್ಥಾಪಕರು ಆಗಿಂದಾಗ್ಗೆ ಕಿರುಕುಳ ನೀಡುತ್ತಿದ್ದರು ಎಂದು ಸುಬ್ರಮಣಿ ಆರೋಪಿಸಿದ್ದಾರೆ.

ಸುಬ್ರಮಣಿ ಹಾಗೂ ಅವರ ಕುಟುಂಬ ಮನೆ ಖಾಲಿ ಮಾಡದ ಹಿನ್ನೆಲೆಯಲ್ಲಿ ಮಾಲೀಕರು 2 ಹಿಟಾಚಿ ಹಾಗೂ 2 ಜೆಸಿಬಿ ಬಳಸಿ ಮನೆಯ ಸುತ್ತಲೂ ಕಂದಕ ನಿರ್ಮಾಣ ಮಾಡಿದ್ದಾರೆ. ಇದೀಗ ಸುಬ್ರಮಣಿ ಮನೆಗೆ ತೆರಳುವ ರಸ್ತೆಯಲ್ಲಿ ಗುಂಡಿ ತೋಡಲಾಗಿದ್ದು, ಮನೆಯಿಂದ ಹೊರಬರಲು ಹಾಗೂ ಒಳಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ: ಹೃದಯ ಸಂಬಂಧಿ ಸಮಸ್ಯೆಯಿಂದ ತೆಲಂಗಾಣ ಸಿಎಂ ಆಸ್ಪತ್ರೆಗೆ ದಾಖಲು

ಈ ಬಗ್ಗೆ ಜಿಲ್ಲಾಧಿಕಾರಿ, ಮುಖ್ಯಮಂತ್ರಿ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಸುಬ್ರಮಣಿ ಮನವಿ ಸಲ್ಲಿಸಿದ್ದರು. ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ನೀಡಿದ ದೂರಿನನ್ವಯ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಮನೆಯ ಸುಮಾರು 15 ಅಡಿ ಕೆಳಕ್ಕೆ ಕಂದಕ ನಿರ್ಮಾಣ ಮಾಡಿರುವ ಕಾರಣ ಮನೆಗೆ ತೆರಳಲು ಹಾಗೂ ಮನೆಯಿಂದ ಹೊರಹೋಗಲು ಸುಬ್ರಮಣಿ ಕುಟುಂಬಕ್ಕೆ ಸಾಧ್ಯವಾಗದೇ ಗೃಹಬಂಧನದಲ್ಲಿ ಇದ್ದಾರೆ. ಇದೀಗ ಏಣಿಯ ಸಹಾಯದಿಂದ ಸುಬ್ರಮಣಿ ಹಾಗೂ ಮಗಳು ಅಗತ್ಯ ಸಾಮಗ್ರಿಗಳ ಖರೀದಿಗೆ ತೆರಳುತ್ತಿದ್ದಾರೆ. ಆದರೆ ಗ್ಯಾಸ್ ಸೇರಿದಂತೆ ಭಾರವಾದ ವಸ್ತುಗಳನ್ನು ಮನೆಗೆ ಸಾಗಿಸುವುದು ಅಸಾಧ್ಯವಾಗಿದೆ. ಇದನ್ನೂ ಓದಿ: ಕೋವಿಡ್ ರೋಗಿಗಳಿಂದ ಪಡೆದ ಹೆಚ್ಚುವರಿ ಶುಲ್ಕ ಮರು ಪಾವತಿಗೆ ಜಿಲ್ಲಾಧಿಕಾರಿ ಆದೇಶ

ಇನ್ನೂ ತನಗೆ ಸಿಗಬೇಕಾದ ಬೋನಸ್, ವೇತನ ಸೇರಿದಂತೆ ಅಂದಾಜು 19 ಲಕ್ಷ ರೂ. ಹಣ ತೋಟದ ಮಾಲೀಕರಿಂದ ಸಿಗಬೇಕು. ನ್ಯಾಯಾಲಯದಲ್ಲಿ ಈ ಬಗ್ಗೆ ದಾವೆ ಕೂಡ ಹೂಡಲಾಗಿದೆ. ಹೀಗಿರುವಾಗ ಏಕಾಏಕಿ ಮನೆಯ ಸುತ್ತಲೂ ಕಂದಕ ನಿರ್ಮಿಸಿ ನಿತ್ಯ ಕಿರುಕುಳ ನೀಡುತ್ತಿದ್ದಾರೆ. ಅನಾರೋಗ್ಯದಲ್ಲಿರುವ ಪತ್ನಿ, ಮಗಳ ಮುಖ ನೋಡಿ ಆತ್ಮಹತ್ಯೆಗೂ ಮನಸ್ಸು ಬರುತ್ತಿಲ್ಲ. ಹೀಗಾಗಿ ದಯಾಮರಣ ನೀಡಬೇಕೆಂದು ರಾಷ್ಟ್ರಪತಿಗಳಿಗೆ ಈ ಕುಟುಂಬ ಮನವಿ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *