ಕಡೆಯ ಕ್ಷಣದಲ್ಲಿ ರಾಮನಗರದಲ್ಲಿ ಬಿಜೆಪಿಗೆ ಆಪರೇಷನ್ ನಡೆದಿದ್ದು ಹೇಗೆ?

Public TV
2 Min Read

ಬೆಂಗಳೂರು: ರಾಜ್ಯ ಉಪಚುನಾವಣೆ ಘೋಷಣೆ ಆಗುತ್ತಿದಂತೆ ಮತ್ತೆ ಅಧಿಕಾರ ಪಡೆಯುವ ಕನಸು ಕಂಡಿದ್ದ ಬಿಜೆಪಿ ನಾಯಕರಿಗೆ ಪಕ್ಷದ ರಾಮನಗರ ಕ್ಷೇತ್ರದ ಅಭ್ಯರ್ಥಿ ಎಲ್ ಚಂದ್ರಶೇಖರ್ ಕಾಂಗ್ರೆಸ್‍ಗೆ `ಘರ್‌ವಾಪಸಿ’ ಆಗಿದ್ದಾರೆ. ಚುನಾವಣೆಯ ಕೊನೆಯ ಹಂತದಲ್ಲಿ ಬಿಜೆಪಿಗೆ ಅಭ್ಯರ್ಥಿಯನ್ನೇ ವಾಪಸ್ ಕರೆತರುವ ಮೂಲಕ ಡಿಕೆ ಸಹೋದರರು ಶಾಕ್ ನೀಡಿದ್ದು, ಈ ಆಪರೇಷನ್ ಬಿಜೆಪಿಯಲ್ಲಿ ತಳಮಳವನ್ನು ಉಂಟುಮಾಡಿದೆ.

ರಾಮನಗರದಲ್ಲಿ ಪಕ್ಷದ ವಿರುದ್ಧ ಸಿಡಿದೆದ್ದ ಎಲ್ ಚಂದ್ರಶೇಖರ್ ಅವರು ಬಿಜೆಪಿ ಮಾಜಿ ಶಾಸಕ ಸಿಪಿ ಯೋಗೇಶ್ವರ್ ಅವರ ಮುಂದಾಳತ್ವದಲ್ಲಿ ಯಡಿಯೂರಪ್ಪನವವರನ್ನು ಭೇಟಿ ಮಾಡಿ ಪಕ್ಷ ಸೇರಿದ್ದರು. ಆದರೆ ಚುನಾವಣೆಯಲ್ಲಿ ಚಂದ್ರಶೇಖರ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಬಳಿಕ ಪಕ್ಷದ ಪರ ಪ್ರಚಾರಕ್ಕೆ ರಾಮನಗರಕ್ಕೆ ಬಿಜೆಪಿ ನಾಯಕರು ಆಗಮಿಸಿರಲಿಲ್ಲ. ಇದರಿಂದ ಕಂಗೆಟ್ಟ ಚಂದ್ರಶೇಖರ್ ರಾತ್ರೋ ರಾತ್ರಿ ರಸ್ತೆ ಮಧ್ಯೆ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂಬಂಧ ಬುಧವಾರ ರಾತ್ರಿ 11.30ಕ್ಕೆ ಡಿಕೆ ಸುರೇಶ್‍ಗೆ ಫೋನ್ ಮಾಡಿದ ಚಂದ್ರಶೇಖರ್ ಮಾತುಕತೆ ನಡೆಸಲು ಅವಕಾಶ ಕೋರಿದ್ದರು.

ಇತ್ತ ಚಂದ್ರಶೇಖರ್ ಮನವಿ ಮೇರೆಗೆ ಮಾತುಕತೆ ನಡೆಸಲು ಸಮ್ಮತಿ ಸೂಚಿಸಿದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು ನಗರದ ಕೆಂಗೇರಿ ಬಳಿ ಭೇಟಿ ಮಾಡಿದ್ದರು. ಇಬ್ಬರ ನಡುವೆಯೂ ಸುಮಾರು 4 ಗಂಟೆಯಷ್ಟು ಕಾಲ ಮಾತುಕತೆ ನಡೆದ ಬಳಿಕ ಮತ್ತೆ ಕಾಂಗ್ರೆಸ್ ಸೇರ್ಪಡೆ ಆಗುವ ಕುರಿತು ಚಂದ್ರಶೇಖರ್ ಅವರಿಗೆ ಡಿಕೆ ಸುರೇಶ್ ಆಫರ್ ನೀಡಿದ್ದರು. ಈ ಮಾತಿಗೆ ಒಪ್ಪಿಗೆ ಸೂಚಿಸಿದ ಚಂದ್ರಶೇಖರ್ ಅವರು ಬಿಜೆಪಿಯಲ್ಲಿದ್ದು ಸೋತು ಮೂಲೆಗುಂಪು ಆಗುವುದರ ಬದಲು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದೇ ಉತ್ತಮ ಎಂದು ತಿಳಿಸಿ ಮರಳಿ ಕಾಂಗ್ರೆಸ್ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿಕೆ ಸುರೇಶ್ ಅವರ ಸಮ್ಮುಖದಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಂದ್ರಶೇಖರ್ ಅವರು ಬಿಜೆಪಿ ನಾಯಕರ ವಿರುದ್ಧ ಆರೋಪಗಳ ಸುರಿಮಳೆಗೈದು, 15 ದಿನಗಳಲ್ಲೇ ಬಿಜೆಪಿ ಪಕ್ಷದಲ್ಲಿನ ಒಳಜಗಳಗಳಿಂದ ತಮಗೆ ಬೇಸರ ಉಂಟಾಗಿದೆ ಎಂದು ಹೇಳಿದ್ದರು. ಅಲ್ಲದೇ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಈ ನಿರ್ಣಯಕೈಗೊಂಡಿದ್ದಾಗಿ ಸ್ಪಷ್ಟನೆ ನೀಡಿದ್ದರು.

ಇತ್ತ ಎಲ್ ಚಂದ್ರಶೇಖರ್ ಸೇರ್ಪಡೆ ವೇಳೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ ಎಂಬ ಮಾಹಿತಿ ಲಭಿಸಿದ್ದು, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವುದು ಹಾಗೂ ಪ್ರಚಾರ ಸಭೆಯಲ್ಲಿ ಭಾಗವಹಿಸುವ ಕುರಿತು ಹೇಳಿದ್ದಾರೆ ಎನ್ನಲಾಗಿದೆ. ಇತ್ತ ಚಂದ್ರಶೇಖರ್ ಅವರು ಕಣದಿಂದ ಹಿಂದೆ ಸರಿದಿರುವ ಪರಿಣಾಮ ರಾಮನಗರದ ಉಪಚುನಾವಣೆ ತನ್ನ ಕುತೂಹಲವನ್ನು ಕಳೆದುಕೊಂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *