ಕೈಯಲ್ಲಿ ಸ್ಪ್ಯಾನರ್ ಹಿಡಿದು ಪಂಕ್ಚರ್ ಹಾಕಿದ್ದ ವಿದ್ಯಾರ್ಥಿನಿ ಈಗ ಪಿಯು ಟಾಪರ್ – ವಿಡಿಯೋ ನೋಡಿ

Public TV
2 Min Read

ಬಳ್ಳಾರಿ: ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ತಂದೆಯ ಜೊತೆ ಪಂಕ್ಚರ್ ಅಂಗಡಿಯಲ್ಲಿ ಕೆಲಸದ ಜೊತೆ ಓದಿದ ಗ್ರಾಮೀಣ ವಿದ್ಯಾರ್ಥಿನಿ ಕುಸುಮ ಕಲಾ ವಿಭಾಗದಲ್ಲಿ ಪಿಯು ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ ಕುಸುಮ ಉಜ್ಜಿನಿ ಕಲಾ ವಿಭಾಗದಲ್ಲಿ 594 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿನಿ ಕುಸುಮ ಅವರ ತಂದೆ ದೇವೇಂದ್ರಪ್ಪ ಕೊಟ್ಟೂರು ಪಟ್ಟಣದಲ್ಲಿ ಪಂಕ್ಚರ್ ಅಂಗಡಿ ಇಟ್ಟುಕೊಂಡಿದ್ದಾರೆ. ವಾಹನಗಳಿಗೆ ಪಂಕ್ಚರ್ ಹಾಕುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ವಿದ್ಯಾರ್ಥಿನಿ ಕುಸುಮ ಕೂಡ ವಿದ್ಯಾಭ್ಯಾಸದ ಜೊತೆ ಅಪ್ಪನ ಕೆಲಸದಲ್ಲಿ ಭಾಗಿಯಾಗಿ ಓದಿನಲ್ಲಿ ವಿಶೇಷ ಸಾಧನೆ ನಿರ್ಮಿಸಿದ್ದಾರೆ. ಮುಂದೆ ಏನಾಗಬೇಕು ಎಂದು ಕೇಳಿದ್ದಕ್ಕೆ, ಐಎಎಸ್ ಅಥವಾ ಕೆಎಎಸ್ ಪರೀಕ್ಷೆ ಬರೆದು ಅಧಿಕಾರಿಯಾಗಬೇಕೆಂದು ಕುಸುಮ ಹೇಳಿದ್ದಾರೆ.

ಕುಸುಮ ಬೈಕ್ ಟಯರ್ ಗೆ ಪಂಕ್ಚರ್ ಹಾಕುವ ವಿಡಿಯೋವೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಪಂಕ್ಚರ್ ಆದ ಗಾಡಿ ಬಂದರೆ ಕೈಯಲ್ಲಿ ಸ್ಪ್ಯಾಪರ್ ಹಿಡಿದು ಯಾರ ಸಹಾಯವಿಲ್ಲದೇ ಬೈಕ್ ಟಯರ್ ಬಿಚ್ಚುತ್ತಾರೆ.

ಕಾಲೇಜಿನಲ್ಲಿ ಶಿಕ್ಷಕರು ಟಾಪರ್ ಬಂದಿರುವ ವಿದ್ಯಾರ್ಥಿಗಳಿಗೆ ಅವರ ಪೋಷಕರ ಮುಂದೆ ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದ್ದಾರೆ. ತಮ್ಮ ಮಗಳ ಸಾಧನೆಯನ್ನು ಕಂಡು ಪೋಷಕರು ಕೂಡ ಹೆಮ್ಮೆ ಪಟ್ಟಿದ್ದಾರೆ.

ಈ ಬಾರಿ ಇಂದೂ ಪಿಯು ಕಾಲೇಜಿನ ಮೊದಲ 10 ಸ್ಥಾನಗಳ ಪೈಕಿ 9 ಸ್ಥಾನಗಳನ್ನು ಇಂದೂ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಕುಸುಮ ಉಜ್ಜಿನಿ ಕಲಾ ವಿಭಾಗದಲ್ಲಿ 594 ಅಂಕ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಕುಸುಮ ಕನ್ನಡ ಮತ್ತು ಸಂಸ್ಕೃತದಲ್ಲಿ 96 ಅಂಕ ಪಡೆದುಕೊಂಡಿದ್ದಾರೆ. ಇನ್ನೂ ಐಚ್ಛಿಕ ಕನ್ನಡ, ಇತಿಹಾಸ ಮತ್ತು ರಾಜಕೀಯ ವಿಜ್ಞಾನ ಮೂರು ವಿಷಯದಲ್ಲೂ 100ಕ್ಕೆ 100 ಅಂಕಗಳನ್ನು ಪಡೆದುಕೊಂಡಿದ್ದಾರೆ. ಕೊನೆಯದಾಗಿ ಶಿಕ್ಷಣದಲ್ಲಿ 99 ಅಂಕವನ್ನು ಪಡೆದುಕೊಂಡಿದ್ದಾರೆ.

ಕಲಾ ವಿಭಾಗದಲ್ಲಿ 2,00,022 ಮಂದಿ ಹಾಜರಾಗಿದ್ದರೆ, 1,01,073 ಮಂದಿ ಪಾಸ್ ಆಗಿದ್ದು, ಶೇ.50.53 ಫಲಿತಾಂಶ ದಾಖಲಾಗಿದೆ. ಕಲಾ ವಿಭಾಗದಲ್ಲಿ ಅತೀ ಹೆಚ್ಚು ಬಳ್ಳಾರಿ ಜಿಲ್ಲೆಯ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *