ಬೆಂಗಳೂರು: ಕುರುಬ ಸಮುದಾಯವನ್ನ (Kuruba Community) ಎಸ್ಟಿಗೆ (ST) ಸೇರ್ಪಡೆ ಮಾಡಬೇಕು ಎಂದು ಮಾಜಿ ಡಿಸಿಎಂ ಈಶ್ವರಪ್ಪ (K.S.Eshwarappa) ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯ ತೀರಾ ಬಡ ಸಮುದಾಯ. ಕುಲ ಶಾಸ್ತ್ರೀಯ ಅಧ್ಯಯನವೂ ಇದನ್ನ ಹೇಳಿದೆ. ನಮ್ಮ ಮೀಸಲಾತಿಗಾಗಿ ಈ ಹಿಂದೆ ದೊಡ್ಡ ಹೋರಾಟ ಮಾಡಿದ್ದೇವೆ. ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ನಾವು ಹೋರಾಟ ಮಾಡಿದ್ವಿ. ಅದರ ಫಲವಾಗಿ ಅಂದಿದ್ದ ಬೊಮ್ಮಾಯಿ ಮತ್ತು ಈಗಿರೋ ಸಿದ್ದರಾಮಯ್ಯ ಸರ್ಕಾರ ಈ ಶಿಫಾರಸನ್ನ ಕೇಂದ್ರಕ್ಕೆ ಕಳುಹಿಸಿದ್ರು. ಕೇಂದ್ರ ಏನು ಮಾಡುತ್ತೆ ಅನ್ನೋದು ಈಗ ವಿಚಾರ. ಅವರು ಇದಕ್ಕೆ ಗಮನ ಕೊಡಬೇಕು ಅಂತ ಬಯಸುತ್ತಿದ್ದೇವೆ ಎಂದರು. ಇದನ್ನೂ ಓದಿ: ಛಲವಾದಿ, ಈಶ್ವರಪ್ಪಗೆ ನೀಡಿದ್ದ ಭದ್ರತೆ ವಾಪಸ್ ಪಡೆದ ಸರ್ಕಾರ
ನಮ್ಮ ಬೇಡಿಕೆ ಹೊಸದಲ್ಲ. ಬಿಟ್ಟು ಹೋಗಿರುವ ನಮ್ಮ ಸಮುದಾಯವನ್ನ ಸೇರಿಸಿ ಅನ್ನೋದು ಮನವಿ. ದೆಹಲಿಯಲ್ಲಿ ನಮ್ಮ ಸ್ವಾಮೀಜಿಗಳ ಜೊತೆ ತೆರಳಿ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೆವು. ಈಗಲೂ ಅದೇ ಮನವಿ ಮಾಡುತ್ತೇವೆ. ಅ.24 ರಂದು ವಿಜಯಪುರದಲ್ಲಿ ಸಭೆ ನಡೆಸಲಿದ್ದೇವೆ. ಸಮುದಾಯದ ಪ್ರಮುಖರು ಅದರಲ್ಲಿ ಭಾಗವಹಿಸಿ ಉಳಿದ ತೀರ್ಮಾನ ತೆಗೆದುಕೊಳ್ತೇವೆ ಎಂದು ತಿಳಿಸಿದರು.
ನಾನು ಎಸ್‌ಟಿ ಹೋರಾಟಕ್ಕೆ ಬೆಂಬಲ ಕೊಡ್ತೀನಿ ಅಥವಾ ಇಲ್ಲ ಅನ್ನೋದನ್ನ ಸಿದ್ದರಾಮಯ್ಯ ಹೇಳಲಿ. ವಿಚಾರದ ಸ್ಪಷ್ಟತೆ ಮುಖ್ಯ. ಕುರುಬ ಸಮುದಾಯ ಇಲ್ಲದಿದ್ದಿದ್ರೆ ಅವರು ಆ ಸ್ಥಾನಕ್ಕೆ ಬರ್ತಿರಲಿಲ್ಲ. ಅವರು 2021 ರಲ್ಲೇ ನಮ್ಮ ಸಮುದಾಯದ ಸ್ವಾಮಿಗಳು ಕರೆದಾಗಲೇ ಹೋರಾಟಕ್ಕೆ ಬರಲ್ಲ ಅಂದಿದ್ರು. ಸಮುದಾಯದ ಜನ ಸಭೆಯಲ್ಲಿ ಭಾಗವಹಿಸುವಂತೆ ಅಪೇಕ್ಷೆ ಮಾಡಿದ್ದಾರೆ. ಮೊನ್ನೆ ಮೊನ್ನೆ ಕಾರ್ಯಕ್ರಮ ಒಂದರಲ್ಲಿ ನಾನು ಕುರುಬ ಮೀಸಲಾತಿ ಹೋರಾಟ ಮಾಡಿಲ್ಲ. ಹೋರಾಟ ಮಾಡಿದ್ದು, ಈಶ್ವರಪ್ಪ ಅಂದ್ರು. ಅವರು ಯಾಕೆ ಹೀಗಂದ್ರು ಅನ್ನೋದನ್ನ ಅವರೇ ಹೇಳಬೇಕು. ಸಿದ್ದರಾಮಯ್ಯ ಈ ಬಗ್ಗೆ ಸ್ಪಷ್ಟತೆ ಕೊಡಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಡಿ.ಕೆ.ಶಿವಕುಮಾರ್‌ಗೆ ಸ್ವಲ್ಪ ದಿನವಾದ್ರೂ ಕಾಂಗ್ರೆಸ್ ಹೈಕಮಾಂಡ್ ಸಿಎಂ ಸ್ಥಾನ ಕೊಡಬೇಕು: ಹೆಚ್.ವಿಶ್ವನಾಥ್
ಮಾಜಿ ಸಚಿವ ಹೆಚ್.ವಿಶ್ವನಾಥ ಮಾತಾಡಿ, ಮೀಸಲಾತಿ ದೇಶ ಹಾಗೂ ರಾಜ್ಯದಲ್ಲಿ ದೊಡ್ಡ ಸಮಸ್ಯೆ ರೀತಿ ಆಗಿದೆ. ಎಲ್ಲರೂ ಮೀಸಲಾತಿ ಕೇಳುವ ಸ್ಥಿತಿ ಎದುರಾಗಿದೆ. ಬ್ರಿಟಿಷರ ಕಾಲದಿಂದಲೂ ಮೀಸಲಾತಿ ಹಲವು ರೀತಿ ಸಿಗುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಕುರುಬ ಸಮುದಾಯದ ನಾವೂ ಮೀಸಲಾತಿಗೆ ಆಗ್ರಹಿಸುತ್ತಿದ್ದೇವೆ. ನಮ್ಮ ಸಮುದಾಯದ ಹಿಂದಿನ ಸ್ಥಿತಿಗತಿಗಳನ್ನ ಈಗಾಗಲೇ ಗುರುತಿಸಲಾಗಿದೆ. ಕೊಡಗಿನಲ್ಲಿ ಕುರುಬರಿಗೆ ಮೀಸಲಾತಿ ದೊರೆಯುತ್ತಿದೆ. ಇದಕ್ಕೆ ಮಿತಿಯನ್ನ ಹಾಕಲಾಗಿದೆ. ಈ ಮಿತಿಯನ್ನ ತೆಗೆದು ರಾಜ್ಯಾದ್ಯಂತ ವಿಸ್ತರಿಸಲು ಮನವಿ ಮಾಡ್ತಿದ್ದೇವೆ ಎಂದು ಹೇಳಿದರು.