ಹೆಗಲಿಗೆ ಹೆಗಲು ಕೊಡಬೇಕಿದ್ದ ದೋಸ್ತಿ ಜೆಡಿಎಸ್ ಈಗ ಫುಲ್ ಸೈಲೆಂಟ್!

Public TV
1 Min Read

ಬೆಂಗಳೂರು: ಲೋಕ ಸಮರದೊಂದಿಗೆ `ದೋಸ್ತಿ’ಗಳ ಜಂಟಿ ಪ್ರಚಾರದ ಉತ್ಸಾಹ ಮುಗಿದು ಹೋಯ್ತಾ ಎನ್ನುವ ಪ್ರಶ್ನೆ ಎದ್ದಿದೆ.

ಸರ್ಕಾರ ಉಳಿಯಬೇಕಾದರೆ ಕುಂದಗೋಳ ಮತ್ತು ಚಿಂಚೋಳಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಕಾಣಬೇಕು. ಆದರೆ ಸರ್ಕಾರದ ಅಸ್ತಿತ್ವಕ್ಕೆ ಸವಾಲಾಗಿರುವ ಉಪಸಮರದ ಬಗ್ಗೆ ದೋಸ್ತಿಗಳಲ್ಲಿ ಮೌನವ್ರತ ಎದ್ದಿದೆ.

ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ಆದರೆ ಕಾಂಗ್ರೆಸ್ಸಿಗೆ ಈಗ ತೆನೆ ಬೆಂಬಲವೇ ನೀಡುತ್ತಿಲ್ಲ. ಲೋಕಸಭಾ ಚುನಾವಣೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟಿದ್ದ ದಳ ನಾಯಕರು ಈ ಚುನಾವಣೆಯಲ್ಲಿ ಮೌನಕ್ಕೆ ಶರಣಾಗಿದ್ದಾರೆ.

ಈ ಎರಡು ಸ್ಥಾನಗಳನ್ನು ಬಿಜೆಪಿ ಗೆದ್ದರೆ ಸಮ್ಮಿಶ್ರ ಸರ್ಕಾರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಈ ವಿಚಾರ ಗೊತ್ತಿದ್ದರೂ ಉಪಸಮರದ ವಿಷಯದಲ್ಲಿ ದೋಸ್ತಿಗಳ ನಡುವೆ ಒಗ್ಗಟ್ಟು ಮೂಡುತ್ತಿಲ್ಲ. ಉಪಸಮರಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಜೆಡಿಎಸ್ ಅಂತರ ಕಾಯ್ದುಕೊಳ್ಳುತ್ತಿದೆ.

ಮೈಸೂರಿನಲ್ಲಿ ಜೆಡಿಎಸ್ ಮತಗಳು ಕಾಂಗ್ರೆಸ್ಸಿಗೆ ಬಿದ್ದಿಲ್ಲ ಎಂದು ಸಚಿವ ಜಿಟಿ ದೇವೇಗೌಡ ಹೇಳಿದ ಬೆನ್ನಲ್ಲೇ ಮಂಡ್ಯದ ರೆಬೆಲ್ ಕಾಂಗ್ರೆಸ್ ನಾಯಕರು ಸುಮಲತಾ ಜೊತೆಗೆ ಭೋಜನ ಕೂಟದಲ್ಲಿ ಭಾಗಿಯಾಗಿದ್ದ ವಿಡಿಯೋ ಪ್ರಕಟವಾಗಿತ್ತು. ಈ ಎರಡು ವಿಚಾರದ ಬಗ್ಗೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಲೋಕ ಚುನಾವಣೆ ಮುಗಿದ ಬೆನ್ನಲ್ಲೇ ಒಗ್ಗಟ್ಟು ಪ್ರದರ್ಶಿಸಿ ಮತಯಾಚನೆ ಮಾಡಬೇಕಿದ್ದ ತೆನೆ ನಾಯಕರು ನಮಗೂ ಉಪ ಚುನಾವಣೆಗೂ ಸಂಬಂಧ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ.

ಚಿಂಚೋಳಿ ಕ್ಷೇತ್ರದಲ್ಲಿ ಉಮೇಶ್ ಜಾಧವ್ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರಿಂದ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಸಚಿವರಾಗಿದ್ದ ಶಿವಳ್ಳಿ ಅವರ ಹಠಾತ್ ನಿಧನದಿಂದ ಕುಂದಗೊಳ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಎರಡು ಕ್ಷೇತ್ರಗಳಿಗೆ ಮೆ 19 ರಂದು ಚುನಾವಣೆ ನಡೆಯಲಿದ್ದು ಮೇ 23 ರಂದು ಫಲಿತಾಂಶ ಪ್ರಕಟವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *