ದೇಶದಲ್ಲಿ ನಿಮ್ಮನ್ನು ಜನ ಮುಳುಗಿಸುತ್ತಿದ್ದಾರೆ, ರಾಜ್ಯದಲ್ಲಿ ತೇಲಿಕೊಂಡಿದ್ದೀರಿ, ಮುಂದೆ ಇಲ್ಲಿಯೂ ಮುಳುಗಿ ಅಸ್ತಂಗತರಾಗುತ್ತೀರಿ: ಎಚ್‍ಡಿಕೆ

Public TV
2 Min Read

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜೆಡಿಎಸ್ ಜಾತ್ಯತೀತ ಪಕ್ಷವಲ್ಲ ಎಂಬ ಹೇಳಿಕೆಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದು, ಜೆಡಿಎಸ್ ಜಾತ್ಯತೀತ ಪಕ್ಷವಲ್ಲ ಎನ್ನುತ್ತಿರುವ ರಾಹುಲ್ ಗಾಂಧಿ ಅವರು ಮೊದಲು ಕಾಂಗ್ರೆಸ್ ಜ್ಯಾತ್ಯತೀತ ಪಕ್ಷವೇ ಎಂಬುದನ್ನು ಪ್ರಶ್ನಿಸಿಕೊಳ್ಳಲಿ ಎಂದು ಹೇಳಿದ್ದಾರೆ.

ಶನಿವಾರ ರಾಹುಲ್ ಗಾಂಧಿ ಮೈಸೂರು ಪ್ರವಾಸದಲ್ಲಿ ಮಾತನಾಡುವಾಗ, ಜೆಡಿಎಸ್ ಎಂದರೆ ಜನತಾದಳ ‘ಸಂಘ’ ಪಕ್ಷ ಎಂದು ಹೇಳಿದ್ದರು. ಇವರ ಮಾತಿಗೆ ಕುಮಾರಸ್ವಾಮಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿ ವಾಗ್ದಾಳಿ ನಡೆಸಿದ್ದಾರೆ.

ವೀರಶೈವ ಲಿಂಗಾಯತರನ್ನು ಒಡೆದು ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಸವಣ್ಣರ ಹೆಸರನ್ನು, ಬಸವತತ್ವವನ್ನು ದುರ್ಬಳಕೆ ಮಾಡಿಕೊಂಡ ನಿಮ್ಮಂತ ಪಕ್ಷದವರಿಂದ ಬುದ್ಧಿ ಹೇಳಿಸಿಕೊಳ್ಳವಷ್ಟು ದಾರಿದ್ರ್ಯ ನಮ್ಮ ಪಕ್ಷಕ್ಕೆ ಬಂದಿಲ್ಲ. “ಕಾಲಲ್ಲಿ ಕಟ್ಟಿದ ಗುಂಡು, ಕೊರಳಲ್ಲಿ ಕಟ್ಡಿದ ಬೆಂಡು, ತೇಲಲೀಯದು ಗುಂಡು, ಮುಳುಗಲೀಯದು ಬೆಂಡು” ಎಂಬ ವಚನ ಸಾಲಿನಂತಾಗಿದೆ ನಿಮ್ಮ ಪಕ್ಷದ ಸ್ಥಿತಿ. ದೇಶದಲ್ಲಿ ನಿಮ್ಮನ್ನು ಜನ ಮುಳುಗಿಸುತ್ತಿದ್ದಾರೆ. ರಾಜ್ಯದಲ್ಲಿ ತೇಲಿಕೊಂಡಿದ್ದೀರಿ. ಮುಂದೆ ಇಲ್ಲಿಯೂ ಮುಳುಗಲಿದ್ದೀರಿ ಎಚ್ಚರಿಕೆ ನೀಡಿದ್ದಾರೆ.

ತನ್ನ ಧರ್ಮ, ದೈವದ ಮೇಲೆ ಆಳವಾದ ನಂಬಿಕೆ, ಅಪಾರವಾದ ಗೌರವ ಹೊಂದಿದ್ದಾಗ್ಯೂ ಇತರ ಧರ್ಮ, ದೈವದ ಬಗ್ಗೆ ಗೌರವ ಹೊಂದಿರುವುದು. ಎಲ್ಲಾ ಜಾತಿಗಳನ್ನು ಸಮಾನವಾಗಿ ಕಾಣುವುದು ನಾನು ನಂಬಿದ ಜಾತ್ಯತೀತತೆ. ಆದರೆ ನಿಮ್ಮದು? ಮತಕ್ಕಾಗಿ ಅಲ್ಪಸಂಖ್ಯಾತರನ್ನು ಓಲೈಸುತ್ತಾ, ಬಹುಸಂಖ್ಯಾತರು ತಮ್ಮ ಕಿಸೆಯಲ್ಲಿದ್ದಾರೆಂದು ಭಾವಿಸಿಕೊಂಡು ಶತಶತಮಾನಗಳಿಂದಲೂ ಅವರನ್ನು ಕಡೆಗಣಿಸಿಕೊಂಡು ಬಂದಿದ್ದು ನೀವು ಎಂದು ತಿರುಗೇಟು ನೀಡಿದ್ದಾರೆ.

ಬಹುಸಂಖ್ಯಾತರನ್ನು ಕಡೆಗಣಿಸಿದ ನಿಮ್ಮ ನಡವಳಿಕೆಯಿಂದಾಗಿಯೇ ಇಂದು ನಿಮ್ಮ ಪಕ್ಷ ಅಳಿವಿನ ಅಂಚಿನಲ್ಲಿದೆ. ಮುಳುಗುವಾಗ ನಿಮ್ಮ ಪಕ್ಷಕ್ಕೆ ಸಮರ್ಥ ನಾಯಕ ಮತ್ತು ನಿಜ ಜಾತ್ಯತೀತ ನಾಯಕನ ಅಗತ್ಯವಿತ್ತು. ಆದರೆ ಭಾರತದ ಸಾಮಾಜಿಕ, ರಾಜಕೀಯ ವಾಸ್ತವನ್ನರಿಯದ ನಿಮ್ಮಂಥ ಅಪ್ರಬುದ್ಧರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೊರಟ ಬಿಜೆಪಿಗೆ ನಿಮ್ಮಂಥವರು ಸುಲಭ ತುತ್ತಾಗುವುದರಲ್ಲಿ ಅನುಮಾನವಿಲ್ಲ. ನೀವು ನಂಬಿದ್ದ ಡೋಂಗಿ ಜಾತ್ಯತೀತವಾದ ನಿಮಗೆ ಪಾಠ ಕಲಿಸುತ್ತದೆ. ಇಂದು ದೇಗುಲ, ಮಠ ಮಂದಿರಗಳಿಗೆ ಹೋಗುತ್ತಿದ್ದೀರಿ. ಮುಂದೊಂದು ದಿನ ಈ ಕಪಟ ನಡವಳಿಕೆಗಳಿಗೂ ಜನ ಉತ್ತರ ಕೊಡಲಿದ್ದಾರೆ ಎಂದು ಆಕ್ರೋಶದಿಂದ ಹೇಳಿದ್ದಾರೆ.

ಜೆಡಿಎಸ್ ಅನ್ನು ಟೀಕಿಸುವಾಗ ನಿಮ್ಮ ಮಾತುಗಳಲ್ಲಿ ಭಯದ ಭಾವ ಸ್ಪಷ್ಟವಾಗಿ ವ್ಯಕ್ತವಾಗಿದೆ. ಆ ಮಾತನ್ನ ಆಡುವಾಗ ನೀವು ನಿಂತಿದ್ದ ನೆಲ ಮಂಡ್ಯ ಜಿಲ್ಲೆ, ಕಾವೇರಿ ಕಣಿವೆ. ಕಾವೇರಮ್ಮನ ಮಡಿಲಲ್ಲಿ ನಿಮ್ಮ ಪಕ್ಷವನ್ನು ಈ ಬಾರಿ ಜನ ಧೂಳೀಪಟ ಮಾಡಲಿದ್ದಾರೆ. ಮುಂದಿನ ಆ ದುಸ್ವಪ್ನ ಈಗ ನಿಮ್ಮ ಬಾಯಲ್ಲಿ ಅಂಥ ಮಾತಾಡಿಸಿದೆ ಎಂದು ಕಿಡಿಕಾರಿದ್ದಾರೆ.

ಜೆಡಿಎಸ್ ಜಾತ್ಯತೀತ ಪಕ್ಷ ಅಲ್ಲ ಅಲ್ಲವೇ? ಹಾಗಿದ್ದರೆ ನಮ್ಮ ಪಕ್ಷದ ಬೆಂಬಲದೊಂದಿಗೆ ಅಧಿಕಾರ ಹಿಡಿದಿರುವವರಿಂದ ನೈತಿಕತೆ ಹೆಸರಲ್ಲಿ ರಾಜೀನಾಮೆ ಕೊಡಿಸಿ. ಬಿಬಿಎಂಪಿಯಲ್ಲಿ ಜೆಡಿಎಸ್ ಜತೆ ನೀವು ಮಾಡಿಕೊಂಡಿರುವ ಮೈತ್ರಿ ಬಗ್ಗೆ ನಿಮ್ಮ ನಿಲುವು ತಿಳಿಸಿ. ನಮ್ಮ ಬೆಂಬಲದಿಂದ ನಂಜನಗೂಡು ಮತ್ತು ಗುಂಡ್ಲುಪೇಟೆಯನ್ನು ಗೆದ್ದು ಬೀಗಿದಿರಲ್ಲ. ಅಲ್ಲಿನ ಚುನಾಯಿತ ಪ್ರತಿನಿಧಿಗಳಿಂದ ರಾಜೀನಾಮೆ ಕೊಡಿಸಿ ನೋಡೋಣ ಸವಾಲು ಎಸೆದಿದ್ದಾರೆ.

ಜೆಡಿಎಸ್ ಬಸವಣ್ಣನ ಮಾತಿನಂತೆ ನುಡಿದಂತೆ ನಡೆಯಬೇಕು ಎಂದಿದ್ದೀರಿ. ನಾವು ನುಡಿದಂತೇ ನಡೆಯುತ್ತಿದ್ದೇವೆ. ನಮ್ಮ ಪಕ್ಷದ ಕಾಳಜಿ ನಿಮಗೆ ಬೇಕಿಲ್ಲ. ಇಲ್ಲಿ ನುಡಿದಂತೆ ನಡೆ ಎಂದರೆ ಏನು ಅರ್ಥ? ನೀವು ನುಡಿದಂತೆ ನಾವು ನಡೆಯಬೇಕು ಎಂದಾ? ನೀವು ಹೇಳಿದಂತೆ ನಡೆದರೆ ಬಸವಣ್ಣರನ್ನು ಪಾಲಿಸಿದಂತೆ ಎಂದು ನೀವು ತಿಳಿದುಕೊಂಡಿದ್ದರೆ ಅದು ನಿಮ್ಮಮೂರ್ಖತನದ ಪರಮಾವಧಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *