ಬಂಕರ್, ಮೆಟ್ರೋ ಅಂಡರ್‌ಗ್ರೌಂಡ್‌ನಲ್ಲಿ ಆಶ್ರಯ ಪಡೆದಿರೋರನ್ನು ಕಂಡ್ರೆ ಆತಂಕವಾಗುತ್ತೆ: ಹೆಚ್‍ಡಿಕೆ

Public TV
1 Min Read

ಬೆಂಗಳೂರು: ಉಕ್ರೇನ್‍ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳು, ನಾಗರಿಕರನ್ನು ಸುರಕ್ಷಿತವಾಗಿ ಏರ್‍ಲಿಫ್ಟ್ ಮಾಡಿ ರಾಜ್ಯಕ್ಕೆ ಕರೆತೆರಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ನಡೆದ ಜಾತ್ಯತೀತ ಜನತಾದಳ ಪಕ್ಷದ ಕಚೇರಿ ಉದ್ಘಾಟನೆ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಷ್ಯಾ ಆಕ್ರಮಣದಿಂದ ಉಕ್ರೇನ್‍ನಲ್ಲಿರುವ ಕನ್ನಡಿಗರು ಜೀವಭಯದಿಂದ ತತ್ತರಿಸಿದ್ದಾರೆ. ಈ ಕೂಡಲೇ ಅವರನ್ನು ರಕ್ಷಿಸಿ ಕರೆತರುವ ಕೆಲಸ ಆಗಬೇಕು ಎಂದರು. ಇದನ್ನೂ ಓದಿ: Russia-Ukraine War: ಉಕ್ರೇನ್ ಜೊತೆ ಮಾತುಕತೆಗೆ ಒಪ್ಪಿದ ರಷ್ಯಾ

ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಕೇಂದ್ರ ಸರ್ಕಾರ ಎಲ್ಲಾ ರಾಜತಾಂ ತ್ರಿಕ ಮಾರ್ಗಗಳನ್ನು ಹುಡುಕಿ ಕನ್ನಡಿಗರನ್ನು ವಾಪಸ್ ಕರೆತರಬೇಕು ಎಂದಿದ್ದಾರೆ.

ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್‍ನಲ್ಲಿ ರಾಜ್ಯದ ನೂರಾರು ವಿದ್ಯಾರ್ಥಿಗಳು ಸಿಲುಕಿರುವ ಮಾಹಿತಿಯನ್ನು ಸರ್ಕಾರವೇ ನೀಡಿದೆ. ಆ ದೇಶದ ಕೀವ್ ನಗರ ಸೇರಿ ವಿವಿಧೆಡೆ ಕಷ್ಟದಲ್ಲಿರುವ ಕನ್ನಡಿಗರ ರಕ್ಷಣೆಗೆ ಎಲ್ಲಾ ತುರ್ತು ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕು. ಅವರೆಲ್ಲರನ್ನೂ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಕರೆತರಬೇಕು ಎಂದಿದ್ದಾರೆ.

ಶೆಲ್, ಕ್ಷಿಪಣಿ, ಬಾಂಬ್ ದಾಳಿ ಭೀತಿಯಿಂದ ವಿದ್ಯಾರ್ಥಿಗಳು ಬಂಕರ್‍ಗಳಲ್ಲಿ ಹಾಗೂ ಮೆಟ್ರೋ ರೈಲು ಅಂಡರ್ ಗ್ರೌಂಡ್‍ನಲ್ಲಿ ಆಶ್ರಯ ಪಡೆದಿದ್ದಾರೆ. ಆ ದೃಶ್ಯಗಳು ಕಳವಳಕಾರಿಯಾಗಿದೆ. ಸ್ಫೋಟದ ಸದ್ದು ಕೇಳಿಸಿಕೊಂಡು ಕ್ಷಣಕ್ಷಣಕ್ಕೂ ಭಯಭೀತಿಯಲ್ಲಿರುವ ಅವರೆಲ್ಲರನ್ನು ನೋಡಿದರೆ ಯುದ್ಧದ ಭೀಕರತೆ ಎಂಥದ್ದು ಎಂಬುದನ್ನು ಅರಿಯಬಹುದು ಎಂದರು. ಇದನ್ನೂ ಓದಿ: Russia-Ukraine Crisis: 4 ಬಸ್‍ಗಳಲ್ಲಿ 240 ವಿದ್ಯಾರ್ಥಿಗಳು ರೊಮೇನಿಯಾಗೆ ಶಿಫ್ಟ್

ಅಲ್ಲಿ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದರೆ. ಇಲ್ಲಿ ಅವರ ತಂದೆ-ತಾಯಿ ತಮ್ಮ ಮಕ್ಕಳ ಬಗ್ಗೆ ತೀವ್ರ ಆತಂಕದಲ್ಲಿದ್ದಾರೆ. ಉಕ್ರೇನ್‍ನಲ್ಲಿ ಬಾಂಬ್‍ಗಳ ಮೊರೆತಕ್ಕೆ ಅವರು ಮತ್ತಷ್ಟು ಕಂಗಾಲಾಗುತ್ತಿದ್ದಾರೆ. ನಾನು ಕೂಡ ಕನ್ನಡಿಗರ ರಕ್ಷಣೆಗೆ ನೇಮಕಗೊಂಡಿರುವ ಉಸ್ತುವಾರಿ ಅಧಿಕಾರಿ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಕೇಂದ್ರ ಸರ್ಕಾರ ತನ್ನೆಲ್ಲಾ ರಾಜತಾಂತ್ರಿಕ ಮಾರ್ಗಗಳನ್ನು ಬಳಸಿಕೊಂಡು ಉಕ್ರೇನ್‍ನಲ್ಲಿರುವ ಎಲ್ಲಾ ಕನ್ನಡಿಗರನ್ನೂ ಏರ್‍ಲಿಫ್ಟ್ ಮಾಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *