ಯಡಿಯೂರಪ್ಪ ಎಲ್ಲಿದ್ದೀಯಪ್ಪ – ಸಿಎಂಗೆ ಎಚ್‍ಡಿಕೆ ಟಾಂಗ್

Public TV
4 Min Read

– ನಾನು ಕಟುಕ ಅಲ್ಲ, ತಾಯಿ ಹೃದಯ ಇರೋನು
– ಸಿಎಂ ಸ್ಥಾನಕ್ಕೆ ಹೋಗಿ ಶಕ್ತಿಯನ್ನು ಕಳೆದುಕೊಂಡೆ

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಈಗ ನೆರೆ ಬಂದಿದೆ. ಇಷ್ಟು ದಿನ ನಿಖಿಲ್ ಎಲ್ಲಿದ್ದೀಯಪ್ಪ ಎಂದು ಕೇಳುತ್ತಿದೀರಿ. ಈಗ ಯಡಿಯೂರಪ್ಪ ಎಲ್ಲಿದ್ದೀಯಪ್ಪ ಎಂದು ಕೇಳಿ ಎನ್ನುವ ಮೂಲಕ ಸಿಎಂ ಬಿಎಸ್‍ವೈ ಅವರಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಉತ್ತರ ಕರ್ನಾಟಕದಲ್ಲಿ ಪ್ರವಾಹ ಪ್ರಾರಂಭವಾಗಿದೆ. ಎಲ್ಲಿದ್ದೀರಪ್ಪ ಯಡಿಯೂರಪ್ಪನವರೇ? ಮೊದಲು ಎಲ್ಲಿದ್ದೀಯಪ್ಪ ನಿಖಿಲ್ ಎಂದು ಹೇಳುತ್ತಿದ್ದರು. ಈಗ ಅವರೆಲ್ಲಾ ಎಲ್ಲಿಗೆ ಹೋಗಿದ್ದಾರೆ. ಈಗ ನೀವು ಎಲ್ಲಿದ್ದೀಯಪ್ಪ ಯಡಿಯೂರಪ್ಪ ಎಂದು ಹೇಳಿ. ನಾನು ಆ ವರ್ಗದ ಯುವಕರಿಗೆ ಮನವಿ ಮಾಡಿಕೊಳ್ಳುತ್ತೇನೆ. ಜನರು ನನ್ನ ವಿರುದ್ಧ ಇಲ್ಲ. ಎಸಿ ರೂಂನಲ್ಲಿ ಕುಳಿತವರು ನನ್ನ ವಿರುದ್ಧವಾಗಿ ಇದ್ದಾರೆ. ಇಂದು ನನ್ನ ಸರ್ಕಾರ ಇದ್ದಿದ್ದರೆ ಇಷ್ಟೊತ್ತಿಗೆ ಯಾವ್ಯಾವ ರೀತಿಯಲ್ಲಿ ಹರಾಜು ಹಾಕುತ್ತಿದ್ದರೋ ನನಗೆ ಗೊತ್ತಿಲ್ಲ ಎಂದು ಕಿಡಿಕಾರಿದರು.

ಕೊಡಗಿನಲ್ಲಿ ಪ್ರಕೃತಿಯ ವಿಕೋಪದಲ್ಲಿ ಒಂದು ತಿಂಗಳ ಕಾಲ ನಾನು ಜಿಲ್ಲೆ ಬಿಟ್ಟು ಹೊರಗೆ ಬಂದಿಲ್ಲ. ನಾನು ಕೇವಲ ಒಂದು ತಿಂಗಳಿನಲ್ಲಿ 5 ಬಾರಿ ಕೊಡಗಿಗೆ ಭೇಟಿ ನೀಡಿದ್ದೆ. ರಾಜ್ಯದ ಇತಿಹಾಸದಲ್ಲಿ 10 ಲಕ್ಷ ರೂ. ಮನೆಯನ್ನು ಕಟ್ಟುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಈ ಕಾರ್ಯಕ್ರಮ ರಾಜ್ಯದಲ್ಲಿ ಅಲ್ಲ ಇಡೀ ದೇಶದಲ್ಲಿ ಯಾರು ಈ ರೀತಿ ಮಾಡಲಿಲ್ಲ. ಅವರಿಗೆ ಮನೆಯನ್ನು ಕಟ್ಟು ಕೊಡವರೆಗು ಪ್ರತಿ ತಿಂಗಳು ಸರ್ಕಾರದಿಂದ 10 ಸಾವಿರ ರೂ. ಬಾಡಿಗೆ ಕೊಡುತಿತ್ತು. ಕೊಡಗಿನ ಜನತೆಯನ್ನು ಉಳಿಸಲು ಪರಿಹಾರ ಹಣವನ್ನು 6 ಪಟ್ಟು ಹೆಚ್ಚಿಗೆ ಮಾಡಿದೆ. ಆದರೆ ನನ್ನ ಕೆಲಸಕ್ಕೆ ಯಾರು ಕೂಡ ಒಂದು ಮಾತು ಹೇಳಲಿಲ್ಲ. ಇದು ನನ್ನ ನೋವು. ಇದರಿಂದ ನನಗೆ ನಷ್ಟ ಅಲ್ಲ ರಾಜ್ಯದ ಜನತೆಗೆ ನಷ್ಟ ಎಂದು ಹೇಳಿದ್ದಾರೆ.

ನನ್ನ ಸಹೋದರಿ ನನಗೊಂದು ಘಟನೆಯನ್ನು ಹೇಳಿದ್ದರು. ಆ ಘಟನೆ ನನಗೆ ಕಣ್ಣೀರು ತರಿಸಿತು. ನನ್ನ ಮುಂದೆ ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳು ನನ್ನ ಎದುರಿಗೆ ಬಂದಾಗ ಅವರ ತಂದೆ-ತಾಯಿ ಪ್ರತಿದಿನ ಮನೆಯಲ್ಲಿ ಒಂದೊಂದು ಕ್ಷಣವನ್ನು ಯಾವ ರೀತಿ ಕಳೆಯುತ್ತಾರೆ ಎಂದು ಯೋಚನೆ ಮಾಡುತ್ತೇನೆ. ನಾನು ಕಟುಕ ಅಲ್ಲ. ಒಂದು ತಾಯಿ ಹೃದಯ ಇರೋನು ನಾನು. ಕಳೆದ 14 ತಿಂಗಳು ನಾನು ಸಿಎಂ ಆಗಿ ಕಾರ್ಪೋರೇಶನ್ ನಿಗಮಗಳಲ್ಲಿ ಸ್ಥಾನವನ್ನು ಕಲ್ಪಿಸುಕೊಡುತ್ತೇನೆ ಎಂದು ನೀವು ನಿರೀಕ್ಷೆ ಇಟ್ಟಿದ್ರಿ. ಅಂದು ಈ ಸರ್ಕಾರವನ್ನು ಮಾಡುವಾಗ ನನ್ನ ಪರಿಸ್ಥಿತಿ ಹೇಗೆ ಇತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಿ. ನನಗೆ ಸ್ವತಂತ್ರ್ಯವಾಗಿ ಕೆಲಸ ಮಾಡುವ ಪರಿಸ್ಥಿತಿ ಇರಲಿಲ್ಲ ಹಾಗಾಗಿ ನಾನು ಕಾರ್ಯಕರ್ತರಿಗೆ ಕಾಪಾಡಲಿಲ್ಲ. ನೀವು ನನಗೆ ಜೀವ ಕೊಟ್ಟಿದ್ದೀರಿ ಎಂದರು.

ಮಂಡ್ಯದ ಲೋಕಸಭಾ ಚುನಾವಣೆಯಲ್ಲಿ ಹಲವು ಮಂದಿ ಆಸ್ತಿಯನ್ನು ಕಳೆದುಕೊಂಡಿದ್ದಾರೆ ಎಂಬ ವಿಷಯ ತಿಳಿಯಿತು. ಹಲವು ಕಾರ್ಯಕರ್ತರು 100 ಕೋಟಿ ಆಸ್ತಿಗಿಂತಲೂ ಹೆಚ್ಚು ಬೆಟ್ಟಿಂಗ್ ಕಟ್ಟಿ ಬೀದಿಪಾಲಾಗಿದೆ ಎಂಬುದು ನನಗೆ ಗೊತ್ತು. ನಿಖಿಲ್ ಗೆದ್ದೆ ಗೆಲ್ಲುತ್ತಾನೆ ಎಂಬ ವಿಶ್ವಾಸದಲ್ಲಿ ನೀವು ಬೆಟ್ಟಿಂಗ್ ಕಟ್ಟಿದ್ದೀರಿ ಎಂಬುದನ್ನು ನಾನು ಗಮನಿಸಿದ್ದೇನೆ ಎಂದು ಹೇಳಿದರು.

ನಾನು ಈಗ ಅತ್ಯಂತ ಸಂತೋಷವಾಗಿದ್ದೇನೆ. ನಾನು ಅಧಿಕಾರ ಬಿಡುವಾಗ ಕಣ್ಣೀರು ಹಾಕದೇ ಸಂತೋಷದಿಂದ ಹೊರಬಂದಿದ್ದೇನೆ. ಏಕೆಂದರೆ ನನಗೆ ಸಿಎಂ ಸ್ಥಾನ ಅಲ್ಲ ನನ್ನ ಕಾರ್ಯಕರ್ತರು ಬೇಕು. ನಾನು 12 ವರ್ಷಗಳ ಕಾಲ ಹಣವಿಲ್ಲದೇ ರಾಜಕೀಯ ಮಾಡಿದ್ದೇನೆ. ನಾನು ಸುಮಾರು ಜನರಿಗೆ ಸಹಾಯ ಮಾಡಿದ್ದೇನೆ. ಕುಮಾರಣ್ಣ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿ ಎಂದು ಯಾವ ವರ್ಗದ ಜನ ನನ್ನನ್ನು ಪ್ರೀತಿಸಿ ಶಕ್ತಿ ತುಂಬಿದ್ದೀರಿ. ನಾನು ಆ ಸಿಎಂ ಸ್ಥಾನಕ್ಕೆ ಹೋಗಿ ಆ ಶಕ್ತಿಯನ್ನು ಕಳೆದುಕೊಂಡಿದ್ದೇನೆ. ಯಾರು ನನ್ನಿಂದ ದೂರ ಹೋದರು ಈಗ ಅವರು ಅಯ್ಯೋ ಕುಮಾರಣ್ಣನಿಗೆ ಈ ರೀತಿ ಆಗಬಾರದು. ಅನ್ಯಾಯವಾಯಿತು ಎಂದು ಹೇಳುತ್ತಿದ್ದಾರೆ. ನನಗೆ ಬೇಕಾಗಿರುವುದು ಇದು. ಸಿಎಂ ಸ್ಥಾನ ಅಲ್ಲ. ನೀವಿದ್ದರೆ ನಾನು, ನೀವಿದ್ದರೆ ಪಕ್ಷ ಎಂದು ಎಚ್‍ಡಿಕೆ ತಿಳಿಸಿದರು.

ನನಗೆ ಆರೋಗ್ಯದ ತೊಂದರೆ ಆಗಿದೆ. ರಾತ್ರಿ 12.30 ಗಂಟೆಗೆ ನನಗೆ ವೈರಲ್ ಫೀವರ್ ಬಂದು ಡ್ರಿಪ್ ಹಾಕಿದ್ದರು. ಆ ಡ್ರಿಪ್ ಅನ್ನು ಕಿತ್ತಾಕಿ ನಾನು ಈ ಸಭೆಗೆ ಬಂದಿದ್ದೇನೆ. ಏಕೆಂದರೆ ದೂರದ ಊರಿನಿಂದ ನೀವು ಬಂದಿದ್ದೀರಾ. ಅಲ್ಲದೆ ನಾನು ಸಭೆಗೆ ಬರದೇ ಹೋದರೇ ಅದಕ್ಕೆ ಇನ್ನೇನೋ ಅರ್ಥ ಕಲ್ಪಿಸೋ ವಾತಾವರಣ ಇದೆ. ಹಾಗಾಗಿ ನನಗೆ ಸ್ಪಲ್ಪ ಶ್ರಮ ಆದರೂ ಪರವಾಗಿಲ್ಲ, ನನ್ನ ಭಾವನೆಗಳನ್ನು ವ್ಯಕ್ತಪಡಿಸಬೇಕು ಎಂದು ಸಭೆಗೆ ಬಂದಿದ್ದೇನೆ. ವೇದಿಕೆ ಮೇಲೆ ಬಂದ ತಕ್ಷಣ ನನ್ನ ಕಾಯಿಲೆ ಹೋಗೆಬಿಡುತ್ತೆ. ಅದಕ್ಕೆ ನೀವು ಕಾರಣ. ಇಲ್ಲಿ ಬಂದು ಭಾಷಣ ಮಾಡುವ ಮೊದಲು ಮಾತ್ರೆ ಸೇವಿಸಿದೆ. ನನ್ನ ಮೇಲೆ ನಿಮಗೆ ವಿಶ್ವಾಸ ಇದೆ ಗೊತ್ತು ಎಂದರು.

2010ರಲ್ಲಿ ಪ್ರವಾಹ ಬಂದಾಗ ನಾನು ಆ ಭಾಗಕ್ಕೆ ಹೋಗಿದ್ದೆ. ಆ ವೇಳೆ ಅಲ್ಲಿ ದನಗಳು ಸತ್ತು ಬಿದ್ದಿತ್ತು. ನಾನು ಮಾಸ್ಕ್ ಹಾಕದೇ ಹಾಗೇ ಹೋಗಿದೆ. ಆಗ ನನ್ನ ಆರೋಗ್ಯದಲ್ಲಿ ಏರುಪೇರಾಗಿತ್ತು. ಇನ್ನು ಒಂದು ದಿನ ನಾನು ಅಲ್ಲಿ ಇದಿದ್ದರೆ ಶ್ವಾಸಕೋಶಕ್ಕೆ ವೈರಲ್ ಫಿವರ್ ಅಟ್ಯಾಕ್ ಆಗಿದ್ದರೆ, ನಾನು ಅಂದೇ ಇರುತ್ತಿರಲಿಲ್ಲ. 12 ದಿನ ನಾನು ಜಯದೇವ ಆಸ್ಪತ್ರೆಯಲ್ಲಿ ದಾಖಲಾಗಿದೆ. ದಿನಕ್ಕೆ 14 ಇಂಜೆಕ್ಷನ್ ಕೊಡುತ್ತಿದ್ದರು. ಈ ಮಳೆ ನಿಂತ ಮೇಲೆ ಜನರು ಯಾವ ಕಷ್ಟಕ್ಕೆ ಒಳಗಾಗುತ್ತಾರೆ ಎಂಬ ಜವಾಬ್ದಾರಿ ಸರ್ಕಾರಕ್ಕೆ ಇದ್ದೀಯಾ. ಎಲ್ಲಾ ಡಿಸಿಗಳಿಗೆ 20 ಕೋಟಿ ರೂ. ಇಡಲು ಹೇಳಿದ್ದೇನೆ ಎಂದು ಯಡಿಯೂರಪ್ಪ ಅವರು ಹೇಳುತ್ತಾರೆ. ಆದರೆ ಆ ಹಣವನ್ನು ಇಟ್ಟಿರುವುದು ನಾನು ಯಡಿಯೂರಪ್ಪ ಅವರು ಅಲ್ಲ ಎಂದು ಸಿಎಂ ವಿರುದ್ಧ ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *