ಕುಕ್ಕೆ ಸುಬ್ರಹ್ಮಣ್ಯ 3ನೇ ಹಂತದ ಮಾಸ್ಟರ್ ಪ್ಲಾನ್ ಶೀಘ್ರವೇ ಸಚಿವ ಸಂಪುಟದ ಮುಂದೆ: ಶಶಿಕಲಾ ಜೊಲ್ಲೆ

Public TV
3 Min Read

ಮಂಗಳೂರು: ದೈವಸಂಕಲ್ಪ ಯೋಜನೆಯಡಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮೂರನೇ ಹಂತದ ಮಾಸ್ಟರ್ ಪ್ಲಾನ್‍ನ ಪ್ರಾಸ್ತಾವಿತ ಕಾಮಗಾರಿಗಳನ್ನು ಅಂತಿಮಗೊಳಿಸಲಾಗಿದ್ದು ಶೀಘ್ರದಲ್ಲಿ ಸಚಿವ ಸಂಪುಟ ಸಭೆಯ ಮುಂದಿಟ್ಟು ಒಪ್ಪಿಗೆ ಪಡೆಯಲಾಗುವುದು ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ತಿಳಿಸಿದರು.

ದೇವಾಲಯದ ಸಮಗ್ರ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಶಶಿಕಲಾ ಜೊಲ್ಲೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ 300 ಕೋಟಿ ರೂ.ಗಳ ಮೂರನೇ ಹಂತದ ಮಾಸ್ಟರ್ ಪ್ಲಾನ್ ಬಗ್ಗೆ ಪ್ರಸ್ತಾವಿಸಲಾಗಿದೆ. ಈ ಪ್ರಸ್ತಾವಿತ ಮಾಸ್ಟರ್ ಪ್ಲಾನ್‍ನ ಬಗ್ಗೆ ಬೆಂಗಳೂರಿನಲ್ಲಿ ಹಾಗೂ ಕುಕ್ಕೆಯಲ್ಲಿ ಇಂದು ನಡೆದ ಸಭೆಯಲ್ಲಿ ವಿಸ್ಕøತವಾಗಿ ಚರ್ಚಿಸಲಾಗಿದೆ. ಈ ಕಾಮಗಾರಿಗಳನ್ನು ಅಂತಿಮಗೊಳಿಸಿದ್ದು ಶೀಘ್ರದಲ್ಲೇ ಸಚಿವ ಸಂಪುಟ ಸಭೆಯ ಮುಂದಿರಿಸಿ ಒಪ್ಪಿಗೆ ಪಡೆದು ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ 100 ಎಕರೆ ಪ್ರದೇಶದಲ್ಲಿ ಗೋಶಾಲೆಯನ್ನು ನಿರ್ಮಿಸುವ ಯೋಜನೆಗೆ ತಾತ್ವಿಕ ಒಪ್ಪಿಗೆಯನ್ನು ನೀಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯದ ಸ್ನಾನ ಘಟ್ಟದ ಬಳಿ ಅರಣ್ಯಕ್ಕೆ ಸೇರಿದ ಪ್ರದೇಶದಲ್ಲಿ ಯಾವುದೇ ಮರಗಳನ್ನು ಕಡಿಯದೆ ಈ ಗೋಶಾಲೆಯನ್ನು ನಿರ್ಮಿಸಲಾಗುವುದು. ಈ ಬಗ್ಗೆ ವಿಸ್ಕøತ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಇದನ್ನೂ ಓದಿ: ಸಂವಿಧಾನವೇ ನನಗೆ ಭಗವದ್ಗೀತೆ, ಭಾವನೆಗಳ ಆಧಾರದಲ್ಲಿ ಆದೇಶ ಕೊಡಲು ಆಗಲ್ಲ: ಹಿಜಬ್‌ ವಿವಾದ ಕೋರ್ಟ್‌ನಲ್ಲಿ ಏನಾಯ್ತು?

ರಾಜ್ಯದ ಎ ಮತ್ತು ಬಿ ದರ್ಜೆಯ ದೇವಸ್ಥಾನಗಳಿಗೆ ಪ್ರತಿವರ್ಷ ಆಡಿಟ್ ವರದಿ ಸಲ್ಲಿಸುವುದು ಕಡ್ಡಾಯ. ಆದರೆ ಹಲವು ವರ್ಷಗಳಿಂದ ಕೇವಲ ನಾಲ್ಕು ದೇವಸ್ಥಾನಗಳು ಆಡಿಟ್ ವರದಿಯನ್ನು ಸಲ್ಲಿಸುತ್ತಿದ್ದವು. ಬೇರೆ ದೇವಸ್ಥಾನಗಳು ಆಡಿಟ್ ವರದಿಯನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಕಳೆದ ನವೆಂಬರ್‍ನಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿತ್ತು ಎಂದು ತಿಳಿಸಿದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಿಟ್ ವರದಿ 2012-13ನೇ ಸಾಲಿನಿಂದ ನಿಯಮಿತವಾಗಿ ಸರ್ಕಾರಕ್ಕೆ ಸಲ್ಲಿಸಲಾಗಿಲ್ಲ. ನೋಟೀಸ್ ನೀಡಿದ ನಂತರ 3 ವರ್ಷಗಳ ಆಡಿಟ್ ವರದಿಯನ್ನು ಸಲ್ಲಿಸಲಾಗಿದೆ. ಇನ್ನು ಬಾಕಿ ಉಳಿದಿರುವ ವರ್ಷಗಳ ಆಡಿಟ್ ವರದಿಯನ್ನು ಮಾರ್ಚ್ 31 ರ ಒಳಗಾಗಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದರು.

ನ್ಯಾಯಾಲಯದಲ್ಲಿ ವಿವಿಧ ಹಂತದಲ್ಲಿರುವ ಪ್ರಕರಣಗಳನ್ನು ಶೀಘ್ರ ವಿಲೇವಾರಿಗೊಳಿಸಬೇಕು. ಈ ಮೂಲಕ ಅಭಿವೃದ್ದಿಗೆ ಅಡ್ಡಿಯಾಗಿರುವ ಆತಂಕಗಳನ್ನು ನಿವಾರಿಸಿಕೊಳ್ಳಬೇಕು. ಆಶ್ಲೇಷ ಬಲಿ ಹಾಗೂ ಸರ್ಪಸಂಸ್ಕಾರದ ಸ್ಲಾಟ್‍ಗಳನ್ನು ಹೆಚ್ಚಿಸುವ ದೃಷ್ಟಿಯಿಂದ ಚಿಂತನೆ ನಡೆಸಬೇಕು ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಒಂದು ಕಡೆ ಹಿಜಬ್ ಕಿಡಿ ಇನ್ನೊಂದೆಡೆ ಕೇಸರಿ, ನೀಲಿ ಶಾಲು ಸಂಘರ್ಷ!

ದೇವಸ್ಥಾನದ ಸುರಕ್ಷತೆಗಾಗಿ 60 ಹೋಮ್ ಗಾರ್ಡ್‍ಗಳನ್ನು ನಿಯಮಿತವಾಗಿ ನೇಮಕ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಬಗ್ಗೆ ಸಂಬಂಧಪಟ್ಟ ಮಂತ್ರಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಮತಿ ದೊರಕಿಸಿಕೊಡಲಾಗುವುದು ಎಂದು ಹೇಳಿದರು.

ಇಂದಿನ ಅವಶ್ಯಕತೆಗೆ ತಕ್ಕಂತೆ ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳುವುದು ಸರಿಯಲ್ಲ. ಮುಂದಿನ 35 ವರ್ಷಗಳ ನಂತರವೂ ಈ ಅಭಿವೃದ್ದಿ ಕಾರ್ಯ ಪ್ರಸ್ತುತವಾಗಿರಬೇಕು. ದೇವಸ್ಥಾನದ ಸುತ್ತಮುತ್ತಲಿರುವ ಹಸಿರನ್ನು ಕಾಪಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: Karnataka Hijab Row: ಹೈಸ್ಕೂಲ್‌, ಕಾಲೇಜುಗಳಿಗೆ 3 ದಿನ ರಜೆ

ದೈವ ಸಂಕಲ್ಪ ಯೋಜನೆಯ ಅಡಿಯಲ್ಲಿ ಮೊದಲ ಹಂತವಾಗಿ ರಾಜ್ಯದ 25 ದೇವಸ್ಥಾನಗಳನ್ನು ಸಮಗ್ರ ಅಭಿವೃದ್ದಿಗೊಳಿಸುವ ಯೋಜನೆಯನ್ನು ಪ್ರಾರಂಭಿಸಿದ್ದು, ರಾಜ್ಯದ ದೇವಸ್ಥಾನಗಳನ್ನು ಸಮಗ್ರ ಅಭಿವೃದ್ದಿಗೊಳಿಸುವುದು ಹಾಗೂ ಭಕ್ತರಿಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ದೇವಸ್ಥಾನದ ಕಾರ್ಯನಿರ್ವಹಕ ಅಧಿಕಾರಿ ಡಾ. ನಿಂಗಯ್ಯ ಉಪಸ್ಥಿತರಿದ್ದರು. ಇದನ್ನೂ ಓದಿ: ಶಿವಮೊಗ್ಗ ಕಾಲೇಜಿನಲ್ಲಿ ಕೇಸರಿ ಧ್ವಜ ಹಾರಾಟ, ಕಲ್ಲು ತೂರಾಟ – ನಿಷೇಧಾಜ್ಞೆ ಜಾರಿ

ಇದಕ್ಕೂ ಮುನ್ನ ಸಚಿವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತಮ್ಮ ಭೇಟಿಯ ನೆನೆಪಿಗಾಗಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ನಡೆಸಲಾಗುತ್ತಿರುವ ಕಾರ್ಯಕ್ರಮದ ಅಂಗವಾಗಿ ನಾಗಸಂಪಿಗೆ ಗಿಡವನ್ನು ನೆಟ್ಟರು.

Share This Article
Leave a Comment

Leave a Reply

Your email address will not be published. Required fields are marked *