ಫ್ಯಾಮಿಲಿ ಪ್ಲ್ಯಾನಿಂಗ್ ಅಳವಡಿಸಿಕೊಂಡ ಸಿಬ್ಬಂದಿಗೆ ಸಾರಿಗೆ ಇಲಾಖೆಯಿಂದ ಗಿಫ್ಟ್ – ಸುತ್ತೋಲೆಯಲ್ಲಿ ಏನಿದೆ?

Public TV
1 Min Read

ಬೆಂಗಳೂರು: ದೇಶದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಫ್ಯಾಮಿಲಿ ಪ್ಲ್ಯಾನಿಂಗ್ ಅಳವಡಿಸಿಕೊಂಡ ಸಿಬ್ಬಂದಿಗೆ ವಿಶೇಷ ವೇತನ ನೀಡಲು ಕೆಎಸ್‍ಆರ್‍ಟಿಸಿ ಮುಂದಾಗಿದೆ.

ಎರಡು ಮಕ್ಕಳನ್ನು ಹೊಂದಿದ್ರೆ ಸಿಬ್ಬಂದಿಗೆ ವಾರ್ಷಿಕ ವಿಶೇಷ ವೇತನ ಭಡ್ತಿ ನೀಡುವುದಾಗಿ ಕೆಎಸ್‍ಆರ್‍ಟಿಸಿ ಹೇಳಿದೆ. ವೈದ್ಯರಿಂದ ದೃಢೀಕರಿಸಿದ ದಾಖಲೆ ನೀಡಿದರೆ ಪೂರ್ಣ ಸೇವಾವಧಿಗೆ ನೀಡಲು ಚಿಂತನೆ ನಡೆಸಿದೆ.

ಈ ಆಫರ್ ಪಡೆಯಬೇಕಾದರೆ ನೌಕರ ಅಥವಾ ಆತನ ಪತ್ನಿ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡ ದೃಢೀಕರಣ ಪತ್ರ ನೀಡುವುದು ಕಡ್ಡಾಯವಾಗಿದೆ. ಈ ಮೂಲಕ ಎರಡು ಮಕ್ಕಳು ಸಾಕು ಎನ್ನುವ ಸರ್ಕಾರದ ಯೋಜನೆಗೆ ಸಾರಿಗೆ ನಿಗಮ ಕೈ ಜೋಡಿಸಿದೆ.

ತರಬೇತಿ ನೌಕರರಿಗೂ ಈ ನಿಯಮ ಅನ್ವಯವಾಗಲಿದ್ದು, -ಕೆಎಸ್‍ಆರ್‍ಟಿಸಿ ಎಂಡಿ ಶಿವಯೋಗಿ ಕಳಸದ್ ಅವರು ಜುಲೈ 27 ರಂದು ಸುತ್ತೋಲೆ ಹೊರಡಿಸಿದ್ದಾರೆ.

ಸುತ್ತೋಲೆಯಲ್ಲಿ ಏನಿದೆ?
1 ಅಥವಾ 2 ಜೀವಂತ ಮಕ್ಕಳನ್ನು ಹೊಂದಿದ್ದು, ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಸಂಸ್ಥೆಯ ನೌಕರರು ಅಥವಾ ಪತಿ/ಪತ್ನಿ, ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ದಿನಾಂಕದಂದು ಅವರ ಹುದ್ದೆ ವೇತನ ಶ್ರೇಣಿಯ ವಾರ್ಷಿಕ ಬಡ್ತಿಯನ್ನು ವೈಯಕ್ತಿಕ ವೇತನವನ್ನಾಗಿ ಅವರ ಪೂರ್ಣ ಸೇವಾವಧಿ ಪಡೆಯಲು ಅರ್ಹರಿರುತ್ತಾರೆ.

ಸರ್ಕಾರಿ ಆದೇಶದ ಅನ್ವಯ ಕುಟುಂಬ ಯೋಜನೆಯಡಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿರುವ ಕುರಿತಂತೆ, ನೌಕರರು(ತರಬೇತಿ ನೌಕರರು ಸೇರಿದಂತೆ) ‘ವಿಶೇಷ ವೇತನ ಬಡ್ತಿ’ಗಾಗಿ ಸಂತಾನ ಹರಣ ಚಿಕಿತ್ಸೆ ಮಾಡಿಸಿದ ದಿನಾಂಕದಿಂದ ಎರಡು ವರ್ಷದೊಳಗೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ಇಲ್ಲವಾದಲ್ಲಿ ‘ವಿಶೇಷ ವೇತನ ಬಡ್ತಿ’ ಗೆ ಅರ್ಹರಾಗಿರುವುದಿಲ್ಲ ಎಂದು ನಿರ್ಣಯಿಸಲಾಗಿದೆ. ಸಂಬಂಧ ಪಟ್ಟವರು ಈ ಅಂಶವನ್ನು ಮನದಟ್ಟು ಮಾಡಿಕೊಂಡು ಅದರಂತೆ ಕ್ರಮ ಕೈಗೊಳ್ಳಬೇಕು. ಉಲ್ಲೇಖಿತ ಸುತ್ತೋಲೆಯಲ್ಲಿನ ನಿರ್ದೇಶನಗಳಲ್ಲಿ ಬದಲಾವಣೆಗಳು ಇರುವುದಿಲ್ಲ. ಸುತ್ತೋಲೆ ಹೊರಡಿಸಿದ ದಿನಾಂಕದಿಂದ ಜಾರಿಯಲ್ಲಿರುತ್ತದೆ.

Share This Article
Leave a Comment

Leave a Reply

Your email address will not be published. Required fields are marked *