ಬೆಂಗಳೂರು: ಬ್ರೇಕ್ ಫೈಲ್ಯೂರ್ ಮತ್ತು ಸ್ಟೇರಿಂಗ್ ಲಾಕ್ ಆದ ಕಾರಣ ನಿಯಂತ್ರಣ ತಪ್ಪಿ ಕೆಎಸ್‍ಆರ್ ಟಿಸಿ ಬಸ್ಸೊಂದು ಪೆಟ್ರೋಲ್ ಬಂಕ್ ಒಳಗೆ ನುಗ್ಗಿರುವ ಘಟನೆ ನಗರದಲ್ಲಿ ಸಂಭವಿಸಿದೆ.
ಗೊರಗುಂಟೆ ಪಾಳ್ಯ ಎಚ್‍ಪಿ ಪೆಟ್ರೋಲ್ ಬಂಕ್ ಬಳಿ ಈ ಅಪಘಾತ ಸಂಭವಿಸಿದ್ದು, ಕೆಎಸ್‍ಆರ್ ಟಿಸಿ ಬಸ್ ಹಾಸನದಿಂದ ಬೆಂಗಳೂರಿಗೆ ಬರುತ್ತಿತ್ತು. ಬಸ್ ಗೊರಗುಂಟೆಪಾಳ್ಯ ಸಿಗ್ನಲ್ ದಾಟಿದ ನಂತರ ಬ್ರೇಕ್ ವೈಫಲ್ಯವಾಗಿದ್ದ ಕಾರಣ ಸ್ಟೇರಿಂಗ್ ಲಾಕ್ ಆಗಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ನೇರವಾಗಿ ಎಚ್‍ಪಿ ಪೆಟ್ರೋಲ್ ಬಂಕ್ ಒಳಗೆ ನುಗ್ಗಿದೆ.
ಬಸ್ಸಿನಲ್ಲಿ ಒಟ್ಟು 11 ಮಂದಿ ಪ್ರಯಾಣಿಕರಿದ್ದರು. ಸದ್ಯ ಈ ಅವಘಡದಿಂದ ಯಾವುದೇ ರೀತಿಯ ಪ್ರಾಣಪಾಯ ಸಂಭವಿಸಿಲ್ಲ. ಆದರೆ ಪೆಟ್ರೋಲ್ ಹಾಕುವ ಕ್ಯಾಬಿನ್ ಪೈಪ್ ಲೈನ್, ಕಾಂಪೌಂಡ್ ಮತ್ತು ಎರಡು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ.
ಈ ಕುರಿತು ಆರ್‍ಎಂಸಿ ಪೊಲೀಸ್ ಠಾಣೆಯಲ್ಲಿ ಪೆಟ್ರೋಲ್ ಬಂಕ್ ಮಾಲೀಕ ಎಫ್‍ಐಆರ್ ದಾಖಲಿಸಿದ್ದಾರೆ. ಈ ಅವಘಡದಿಂದ ಸುಮಾರು 15 ಲಕ್ಷ ಕ್ಕಿಂತ ಹೆಚ್ಚಾಗಿ ಡ್ಯಾಮೇಜ್ ಆಗಿದೆ. ಆ ನಷ್ಟವನ್ನು ಕೆಎಸ್‍ಆರ್ ಟಿಸಿ ಕೊಡಬೇಕೆಂದು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.