ಸಾರಿಗೆ ಸಚಿವರ ಕ್ಷೇತ್ರದಲ್ಲಿ ಎಲ್ಲಿ ನೋಡಿದರೂ ಡಕೋಟಾ ಬಸ್‍ಗಳ ದರ್ಶನ

Public TV
1 Min Read

ಬೆಳಗಾವಿ/ಚಿಕ್ಕೋಡಿ: ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ ಸವದಿ ಅವರ ಕ್ಷೇತ್ರದಲ್ಲೇ ಸಾರಿಗೆ ಬಸ್‍ಗಳು ದುಸ್ಥಿತಿ ತಲುಪಿದ್ದು, ಪ್ರಯಾಣಿಕರೇ ತಳ್ಳಿ ಸ್ಟಾರ್ಟ್ ಮಾಡುವ ಹಂತವನ್ನು ತಲುಪಿವೆ.

ಸಾರಿಗೆ ಸಚಿವರ ಅಥಣಿ ಕ್ಷೇತ್ರದಲ್ಲಿ ಎಲ್ಲಿ ನೋಡಿದರೂ ಡಕೋಟಾ ಬಸ್‍ಗಳ ದರ್ಶನವಾಗುತ್ತದೆ. ಶಿರಹಟ್ಟಿ, ದರೂರು, ಕಾತ್ರಾಳ ಮೋಳೆ, ಅನಂತಪುರ ಸೇರಿದಂತೆ ವಿವಿಧ ಗ್ರಾಮಗಳಿಗೆ ಈ ಬಸ್‍ಗಳು ಸಂಚರಿಸುತ್ತವೆ. ಈ ಡಕೋಟಾ ಬಸ್‍ಗಳಿಂದ ಪ್ರಯಾಣಿಕರು ಹೈರಾಣಾಗಿ ಹೋಗಿದ್ದು, ಎಲ್ಲಿ ಈ ಬಸ್ ಕೆಟ್ಟು ನಿಲ್ಲುತ್ತದೆಯೋ ಎಂದು ಅಂದುಕೊಳ್ಳುತ್ತಲೇ ಬಸ್‍ನ್ನು ಹತ್ತುತ್ತಾರೆ.

ಈ ಡಕೋಟಾ ಬಸ್‍ಗಳು ಬಹಳಷ್ಟು ಸಲ ರಸ್ತೆ ಮಧ್ಯದಲ್ಲೇ ಕೆಟ್ಟು ನಿಲ್ಲುತ್ತವೆ. ಅಲ್ಲದೆ ಬಹುತೇಕ ಕಡೆ ಪ್ರಯಾಣಿಕರೇ ಬಸ್‍ಗಳನ್ನು ತಳ್ಳಿ ಸ್ಟಾರ್ಟ್ ಮಾಡುವ ಪರಿಸ್ಥಿತಿ ಇದೆ. ಬಸ್ ಸ್ಟಾರ್ಟ್ ಆಗದಿದ್ದಲ್ಲಿ ಅಥವಾ ಕೆಟ್ಟು ನಿಂತಲ್ಲಿ ಬೇರೆ ಬಸ್ ಬರುವವರೆಗೂ ಕಾದು ನಂತರ ಆ ಬಸ್ಸಿನಲ್ಲಿ ಪ್ರಯಾಣ ಬೆಳೆಸುವ ದುರ್ಗತಿ ಅಥಣಿ ತಾಲೂಕಿನ ಜನರಿಗೆ ಬಂದಿದೆ. ಹೀಗಾಗಿ ಹತ್ತಿರದ ಬಸ್ ಎಷ್ಟೊತ್ತಿಗೆ ನಮ್ಮನ್ನು ಊರಿಗೆ ಮುಟ್ಟಿಸುತ್ತದೆಯೋ, ಎಲ್ಲಿ ಕತ್ತಲಾಗುತ್ತದೆಯೋ ಎಂದು ಚಿಂತಿಸುತ್ತಲೇ ಪ್ರಯಾಣಿಕರು ಸರ್ಕಾರಿ ಬಸ್‍ಗಳನ್ನು ಹತ್ತಬೇಕಿದೆ.

ಬ್ಯಾಟರಿ ಇಲ್ಲದ ಕೆಲ ಬಸ್‍ಗಳನ್ನು ಪ್ರತಿ ನಿತ್ಯ ಪ್ರಯಾಣಿಕರೇ ತಳ್ಳಿ ಸ್ಟಾರ್ಟ್ ಮಾಡಿ ನಂತರ ಪ್ರಯಾಣ ಬೆಳೆಸುತ್ತಿದ್ದಾರೆ. ನಿರ್ವಾಹಕರು ಹಾಗೂ ಚಾಲಕರು ಪ್ರಯಾಣಿಕರಲ್ಲಿ ವಿನಂತಿಸಿಕೊಂಡು ಬಸ್ ತಳ್ಳಿಸಿಕೊಳ್ಳುವ ದೃಶ್ಯಗಳು ಇಲ್ಲಿ ಕಾಮನ್ ಆಗಿದೆ. ಸರ್ಕಾರಿ ಬಸ್ಸುಗಳು ಸರಿ ಇಲ್ಲದ ಕಾರಣಕ್ಕೆ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.

ಇದೀಗ ಉಪಮುಖ್ಯಮಂತ್ರಿಯೂ ನಮ್ಮ ಕ್ಷೇತ್ರದವರೇ, ಸಾರಿಗೆ ಸಚಿವರೂ ಅವರೇ ಇನ್ನಾದರೂ ಈ ಭಾಗಕ್ಕೆ ಉತ್ತಮ ಗುಣಮಟ್ಟದ ಬಸ್‍ಗಳನ್ನ ಕಲ್ಪಿಸಿ ಪ್ರಯಾಣಿಕರಿಗೆ ಅನಕೂಲ ಮಾಡಿ ಕೊಡಬೇಕು ಎಂಬುವುದು ಪ್ರಯಾಣಿಕರ ಅಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *