KSRTC, BMTC ಬಸ್ ಸಂಚಾರಕ್ಕೆ ಸಿಗುತ್ತಾ ಗ್ರೀನ್ ಸಿಗ್ನಲ್?

Public TV
2 Min Read

ಬೆಂಗಳೂರು: ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ಉಳಿದ ಪ್ರದೇಶದಲ್ಲಿ ರಾಜ್ಯ ಸರ್ಕಾರದ ಅನುಮತಿ ಮೇರೆಗೆ ಬಸ್ ಸಂಚಾರಕ್ಕೆ ಅನುಮತಿ ನೀಡಬಹುದು ಎಂದು ಕೇಂದ್ರ ಸರ್ಕಾರ ಲಾಕ್‍ಡೌನ್ 4.0ರ ಮಾರ್ಗಸೂಚಿಯಲ್ಲಿ ತಿಳಿಸಿದೆ. ಇದೀಗ ಕೆಎಸ್‍ಆರ್ ಟಿಸಿ ಮತ್ತು ಬಿಎಂಟಿಸಿ ಸಂಚಾರಕ್ಕೆ ಸಿಎಂ ಯಡಿಯೂರಪ್ಪ ಸರ್ಕಾರ ಅನುಮತಿ ನೀಡುತ್ತಾ ಅನ್ನೋ ಪ್ರಶ್ನೆಗೆ ಸೋಮವಾರ ಸ್ಪಷ್ಟ ಉತ್ತರ ಸಿಗಲಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಇದ್ದರೂ ರಾಜ್ಯ ಸರ್ಕಾರ ನಾಳೆಯೇ ನಿರ್ಧಾರ ಮಾಡಲಿದೆ. ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಡುವ ಮುನ್ನ ಕೆಲ ಷರತ್ತುಗಳನ್ನು ಹಾಕಬೇಕಾಗುತ್ತೆ. ಅಷ್ಟೇ ಅಲ್ಲ ಎಷ್ಟು ಪ್ರಮಾಣದ ಬಸ್ ಗಳನ್ನು ರಸ್ತೆಗೆ ಇಳಿಸಬೇಕು. ಒಂದು ಬಸ್ ನಲ್ಲಿ ಪ್ರಯಾಣಿಕರ ಸಂಖ್ಯೆ ಎಷ್ಟಿರಬೇಕು? ನಿಯಾಮವಳಿಗಳು ಹೇಗಿರಬೇಕು? ಅನ್ನೋದು ನಾಳೆ ನಿರ್ಧಾರ ಆಗಲಿದೆ.

ಅಷ್ಟೇ ಅಲ್ಲ ಅಂತರ್ ಜಿಲ್ಲಾ ಪ್ರಯಾಣಿಕರಿಗೆ ಕ್ವಾರಂಟೈನ್ ಅಗತ್ಯತೆ ಇಲ್ಲ ಅನ್ನೋ ಸಲಹೆಗಳನ್ನು ಕೆಲ ಅಧಿಕಾರಿಗಳು ಪ್ರಸ್ರಾಪ ಮಾಡಿದರೂ ನಾಳಿನ ಸಭೆಯಲ್ಲಿ ಕ್ವಾರಂಟೈನ್ ನಿರ್ಧಾರ ಆಗಲಿದೆ. ಇನ್ನುಳಿದಂತೆ ಉಭಯ ರಾಜ್ಯಗಳ ಒಪ್ಪಿಗೆ ಮೇರೆಗೆ ಅಂತರ ರಾಜ್ಯ ಬಸ್ ಸಂಚಾರಕ್ಕೆ ಕೇಂದ್ರ ಅನುಮತಿ ನೀಡಿದ್ದರೂ, ರಾಜ್ಯ ಸರ್ಕಾರ ಮೇ 31ರ ತನಕ ನಿರ್ಬಂಧ ಹೇರುವ ಸಾಧ್ಯತೆ ಇದೆ. ಒಂದು ವೇಳೆ ಸೀಮಿತ ಪ್ರಮಾಣದ ಅಂತರರಾಜ್ಯ ಬಸ್ ಸಂಚಾರಕ್ಕೆ ಅನುಮತಿ ಕೊಟ್ಟು, ಎಲ್ಲ ಅಂತರರಾಜ್ಯ ಪ್ರಯಾಣಿಕರನ್ನ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತೆ ಅಂತಾ ಸರ್ಕಾರದ ಮೂಲಗಳು ತಿಳಿಸಿವೆ.

ಲಾಕ್ ಡೌನ್ 4.0 ರ ಕುರಿತು ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಮೇ 18 ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ.

ಈ ಸಭೆಯಲ್ಲಿ ಮುಂದಿನ ಹಂತದ ಲಾಕ್ ಡೌನ್ ಅವಧಿಯಲ್ಲಿ ರಾಜ್ಯದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಕರ್ನಾಟಕದಲ್ಲಿ ಸರ್ಕಾರಿ ಸಾರಿಗೆ ಬಸ್ಸುಗಳ ಸಂಚಾರ ಪುನರ್ ಪ್ರಾರಂಭದ ಬಗ್ಗೆ ನಾಳೆ ಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *