KSRTCಗೂ ಕಾಲಿಟ್ಟ ಕೊರೊನಾ- ಯಲ್ಲಾಪುರದಿಂದ ಬೆಂಗ್ಳೂರಿಗೆ ಬಂದ ಕಂಡಕ್ಟರ್‌ಗೆ ಪಾಸಿಟಿವ್

Public TV
1 Min Read

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಷ್ಟು ದಿನ ಹೊರ ದೇಶ ಹಾಗೂ ರಾಜ್ಯದಿಂದ ಬಂದವರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗುತ್ತಿತ್ತು. ಆದರೆ ಇದೀಗ ಅಂತರ್ ಜಿಲ್ಲಾ ಪ್ರಯಾಣ ಮಾಡಿದ ಬಸ್ ಕಂಡಕ್ಟರ್‌ಗೆ ಪಾಸಿಟಿವ್ ದೃಢವಾಗಿದ್ದು ಜಿಲ್ಲೆಯ ಜನತೆಯನ್ನು ಆತಂಕಕ್ಕೀಡು ಮಾಡಿದೆ.

ಬೆಂಗಳೂರಿನ ಬಿಎಂಟಿಸಿ ಬಸ್ಸಿನಲ್ಲಿ ಸವಾರಿ ಮಾಡುತ್ತಿರುವ ಚೀನಾ ಮಾರಿ ಈಗ ಕೆಎಸ್‌ಆರ್‌ಟಿಸಿ ಬಸ್ಸಿಗೂ ಕಾಲಿಟ್ಟಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಬೆಂಗಳೂರಿಗೆ ಪ್ರಯಾಣಿಸಿದ್ದ ನಿರ್ವಾಹಕನಿಗೆ ಕೊರೊನಾ ಸೋಂಕು ದೃಢವಾಗಿದೆ. ಈತನ ಸಂಪರ್ಕದಲ್ಲಿದ್ದ ಸಹೋದ್ಯೋಗಿಗಳು, ಸ್ನೇಹಿತರು ಜೊತೆಗೆ ಬಸ್ಸಿನಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರಿಗೂ ಈಗ ಆತಂಕ ಶುರುವಾಗಿದೆ.

ಜೂನ್ 11ರಂದು ಯಲ್ಲಾಪುರದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಕರೆದೊಯ್ದು, ಬಳಿಕ ಜೂ.13ಕ್ಕೆ ವಾಪಸ್ಸಾಗಿದ್ದ ಇವರಿಗೆ ಸೋಂಕಿನ ಲಕ್ಷಣ ಕಂಡು ಬಂದಿತ್ತು. ಹೀಗಾಗಿ ಕಂಡಕ್ಟರಿಗೆ ಕ್ವಾರಂಟೈನ್ ವಿಧಿಸಲಾಗಿತ್ತು. ಜೂ.16ಕ್ಕೆ ತಾಲೂಕು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದ ಇವರ ಗಂಟಲು ದ್ರವವನ್ನು ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಯಲ್ಲಾಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಇವರ ರೂಮಿನಲ್ಲಿ ಸಾರಿಗೆ ನಿಗಮದ 6 ಮಂದಿ ಸಿಬ್ಬಂದಿ ಕೂಡ ಇದ್ದರು. ಹೀಗಾಗಿ ಈ 6 ಮಂದಿಯನ್ನ ಕೂಡ ಕ್ವಾರಂಟೈನ್ ಮಾಡಲಾಗಿದ್ದು, ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲದೇ ಇನ್ನೆಷ್ಟು ಮಂದಿ ಈತನ ಸಂಪರ್ಕದಲ್ಲಿದ್ದರು ಅನ್ನೋ ಬಗ್ಗೆ ಮಾಹಿತಿ ಕಲೆ ಹಾಕಲಾಗ್ತಿದೆ. ಇದರ ಜೊತೆ ಯಲ್ಲಾಪುರ ಘಟಕದ ಎಲ್ಲಾ ಸಿಬ್ಬಂದಿಯನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದ್ದು ಕೋವಿಡ್ ತಪಾಸಣೆಗೆ ಜಿಲ್ಲಾಡಳಿತ ಮುಂದಾಗಿದೆ. ಸದ್ಯ ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಅಂತ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಹೇಳಿದ್ದಾರೆ.

ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಅಂತರ್ ಜಿಲ್ಲಾ ಪ್ರಯಾಣ ಮಾಡಿದ ಕಂಡಕ್ಟರ್ ನಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಒಂದುವೇಳೆ ಇವರೊಂದೊಗೆ ಸಂಪರ್ಕ ಮಾಡಿದ ಯಾವುದೇ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದರೆ ಇಡೀ ಸಮುದಾಯಕ್ಕೆ ಹರಡುವ ಭೀತಿ ಶುರುವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *