ಏಯ್ ಇದು ಯಾವ ಪ್ರಾರ್ಥನೆ! – ತಮಿಳು ನಾಡಗೀತೆ ನಿಲ್ಲಿಸಿ ಕನ್ನಡದ ನಾಡಗೀತೆ ಹಾಕಿಸಿದ ಈಶ್ವರಪ್ಪ

Public TV
2 Min Read

ಶಿವಮೊಗ್ಗ: ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆ ತಮಿಳು (Tamil) ಭಾಷಿಗ ಮತದಾರರ ಮೇಲೆ ಬಿಜೆಪಿ (BJP) ಕಣ್ಣಿಟ್ಟಿದೆ. ಶಿವಮೊಗ್ಗದಲ್ಲಿ (Shivamogga) ತಮಿಳು ಭಾಷಿಗರ ಸಮಾವೇಶ ಆಯೋಜನೆ ಮಾಡಿದ್ದಾಗ ಕಾರ್ಯಕರ್ತರೊಬ್ಬರು ತಮಿಳಿನ ನಾಡಗೀತೆ ಹಾಕಿದ್ದರು. ಈ ವೇಳೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಅದನ್ನು ನಿಲ್ಲಿಸಿ ಕನ್ನಡದ ನಾಡಗೀತೆಯನ್ನು (Kannada Nada Geete) ಹಾಕಿಸಿದ ಪ್ರಸಂಗ ನಡೆಯಿತು.

ಶಿವಮೊಗ್ಗ ನಗರ ಹಾಗೂ ಭದ್ರಾವತಿ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಮಿಳು ಮತದಾರರಿದ್ದಾರೆ. ಈ ಹಿನ್ನೆಲೆ ಶಿವಮೊಗ್ಗದ ಎನ್‌ಇಎಸ್ ಮೈದಾನದಲ್ಲಿ ಬಿಜೆಪಿ ತಮಿಳು ಭಾಷಿಗರ ಸಮಾವೇಶ ಆಯೋಜನೆ ಮಾಡಿತ್ತು. ಸಮಾವೇಶದಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಮಾಜಿ ಸಚಿವ ಈಶ್ವರಪ್ಪ, ಅಭ್ಯರ್ಥಿ ಚನ್ನಬಸಪ್ಪ ಭಾಗಿಯಾಗಿದ್ದರು.

ಈ ವೇಳೆ ಸಮಾವೇಶದಲ್ಲಿ ತಮಿಳು ಪ್ರಾರ್ಥನೆ ಪ್ಲೇ ಆಗಿದೆ. ತಕ್ಷಣವೇ ಎಚ್ಚೆತ್ತ ಮಾಜಿ ಸಚಿವ ಈಶ್ವರಪ್ಪ, ಏಯ್ ಇದು ಯಾವ ಪ್ರಾರ್ಥನೆ? ನಾಡಗೀತೆ ಹಾಕಪ್ಪ. ನಿಮ್ಮಲ್ಲಿ ಯಾರಾದರೂ ನಾಡಗೀತೆ ಹಾಡುತ್ತೀರಾ ಎಂದು ನೆರೆದಿದ್ದವರನ್ನು ಈಶ್ವರಪ್ಪ ಕೇಳಿದ್ದಾರೆ. ಬಳಿಕ ಆಯೋಜಕರು ತಮಿಳಿನ ಪ್ರಾರ್ಥನೆಯನ್ನು ನಿಲ್ಲಿಸಿ ಕನ್ನಡದ ನಾಡಗೀತೆಯನ್ನು ಪ್ಲೇ ಮಾಡಿದರು.

ಬಳಿಕ ಮಾತನಾಡಿದ ಈಶ್ವರಪ್ಪ, ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಬೇಕಾದರೆ ರಾಜ್ಯದಲ್ಲಿ 25 ಸ್ಥಾನ ಗೆಲ್ಲಿಸಿದ್ದೇವೆ. ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ಒಂದೇ ಒಂದು ಸೀಟ್ ಗೆಲ್ಲಲ್ಲ ಎಂದು ಹೇಳುತ್ತಿದ್ದರು. ಅವರ ಹಣೆಬರಹಕ್ಕೆ ಒಂದು ಸ್ಥಾನ ಗೆದ್ದರು. ಮುಂದಿನ ಬಾರಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲಬೇಕು. ಈ ದೇಶವನ್ನು ಉಳಿಸುವ, ಧರ್ಮವನ್ನು ಉಳಿಸುವ ಪಕ್ಷ ಬಿಜೆಪಿ ಎಂದರು. ಇದನ್ನೂ ಓದಿ: `ಕೈ’ ಹಿಡಿದ ನಾರಾಯಣ ಗೌಡ, ಪ್ರಭಾಕರ ರೆಡ್ಡಿ – ಹೆಚ್‌ಡಿಕೆಗೆ ಡಿಕೆ ಬ್ರದರ್ಸ್ ಟಕ್ಕರ್

ತಮಿಳುನಾಡಿನಲ್ಲಿ ಒಂದೇ ಒಂದು ಬಿಜೆಪಿ ಶಾಸಕರಿರಲಿಲ್ಲ. ಅಣ್ಣಾಮಲೈ ಬಿಜೆಪಿ ಸೇರಿ, ಬಿಜೆಪಿ ಅಧ್ಯಕ್ಷರಾದ ಬಳಿಕ 4 ಬಿಜೆಪಿ ಶಾಸಕರು ಗೆದ್ದರು. ಕರ್ನಾಟಕ, ತಮಿಳುನಾಡು ಭಾವೈಕ್ಯತೆ ಬೆಸೆಯುವ ಸಲುವಾಗಿ ಸರ್ವಜ್ಞ, ತಿರುವಣ್ಣಾಮಲೈ ಪ್ರತಿಮೆ ನಿರ್ಮಿಸಿದ ಕೀರ್ತಿ ಯಡಿಯೂರಪ್ಪ ಅವರದ್ದು. ಚನ್ನಬಸಪ್ಪ ಗೆಲ್ಲಿಸು ತಾಯಿ ಅಂತಾ ಓಂ ಶಕ್ತಿ ದೇವಿಯಲ್ಲಿ ಪ್ರಾರ್ಥನೆ ಮಾಡಿ. ಈ ಹಿಂದೆ ಹಿಂದೂ ಧರ್ಮಕ್ಕೋಸ್ಕರ ನನ್ನನ್ನು ಗೆಲ್ಲಿಸಿದ್ದೀರಾ. ನನ್ನ ಎದುರು ದೊಡ್ಡ ದೊಡ್ಡ ಜಾತಿಯವರು ಸ್ಪರ್ಧೆ ಮಾಡಿದಾಗಲೂ ನನ್ನ ಬೆಂಬಲಿಸಿದ್ದೀರಾ. ಚನ್ನಬಸಪ್ಪ ಗೆದ್ದರೆ ನಾನೇ ಗೆದ್ದಂತೆ ಎಂದು ನುಡಿದರು. ಇದನ್ನೂ ಓದಿ: ಹಾಸನದಲ್ಲಿ ಅಭ್ಯರ್ಥಿ ಹೆಸರು ಗೊತ್ತಿಲ್ಲ ಎಂದಿದ್ದವರು ಈಗ ಮಗ ಎನ್ನುತ್ತಿದ್ದಾರೆ: ಭವಾನಿಗೆ ಪ್ರೀತಂ ಗೌಡ ಟಾಂಗ್

Share This Article