ನಾವು ತಂದೆ, ತಾಯಿಗೆ ಹುಟ್ಟಿದ ಜನ. ನಾವು ಪಕ್ಷ ಬಿಡಲ್ಲ, ಬೇರೆ ಪಕ್ಷ ಕಟ್ಟಲ್ಲ: ಬಿಎಸ್‍ವೈ ವಿರುದ್ಧ ಈಶ್ವರಪ್ಪ ಗುಡುಗು

Public TV
2 Min Read

ಬೆಂಗಳೂರು: ನಾವು ತಂದೆ, ತಾಯಿಗೆ ಹುಟ್ಟಿದ ಜನ. ನಾವು ಪಕ್ಷ ಬಿಡಲ್ಲ, ಬೇರೆ ಪಕ್ಷ ಕಟ್ಟಲ್ಲ. ಇನ್ನು ಮುಂದೆ ಸರ್ವಾಧಿಕಾರಿ ಧೋರಣೆ ನಡೆಯಲ್ಲ ಎಂದು ಬಿಎಸ್ ಯಡಿಯೂರಪ್ಪನವರಿಗೆ ನೇರವಾಗಿ  ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ತುಮಕೂರು ಜಿಲ್ಲೆಯ ಬಿಜೆಪಿ ಪಕ್ಷದ ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜನೆಗೊಂಡಿದ್ದ ‘ಸಂಘಟನೆ ಉಳಿಸಿ ಸಮಾವೇಶ’ ದಲ್ಲಿ ಮಾತನಾಡಿದ ಅವರು, ಬೇಡ ಬೇಡ ಎಂದರೂ ಬಿಎಸ್‍ವೈ ಕೆಜೆಪಿ ಕಟ್ಟಿದ್ದರು. ಇದರಿಂದ ಬಿಜೆಪಿ ಸೋಲು ಕಾಣಬೇಕಾಯಿತು. ಆದರೆ ಈ ಬಾರಿ ಬಿಜೆಪಿ ಒಡೆಯಲು ಬಿಡಲ್ಲ. ಬಿಜೆಪಿ ಸರ್ಕಾರ ಬರಬೇಕು ಅನ್ನೋದು ನಮ್ಮ ಆಸೆ. ಆದರೆ ಎಂತಾ ಸರ್ಕಾರ ಬೇಕು ಎನ್ನುವುದು ನಮ್ಮ ಪ್ರಶ್ನೆ. ಯಾರೋ ಹಣ ಕೊಟ್ಟು ಎಂಎಲ್‍ಎ ಆದವರಿಂದ ಸರ್ಕಾರ ಬೇಡ. ನಿಷ್ಠಾವಂತ ಕಾರ್ಯಕರ್ತರ ಸರ್ಕಾರ ಬರಬೇಕು. ಯಾವುದೋ ಸರ್ಕಾರ ನಮ್ಮದಾಗಬಾರದು ಎಂದು ಹೇಳಿದರು.

ಯಡಿಯೂರಪ್ಪ ಅವರು ಕೆಜೆಪಿಯನ್ನು ಯಾಕೆ ಕಟ್ಟಿದರು? ಅವರು ಕೆಜೆಪಿ ಕಟ್ಟಿದ್ದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಸಿದ್ದರಾಮಯ್ಯ ಲಾಟರಿ ಹೊಡೆದು ಸಿಎಂ ಆದರು. ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅನ್ನುವುದನ್ನು ನಾವೆಲ್ಲ ಒಪ್ಪಿದ್ದೇವೆ. ಆದರೆ ನೀವು ಮಾಡುತ್ತಿರುವುದೇನು? ನಿಷ್ಠಾವಂತರ ಕಡೆಗಣಿಸಿ ಮೋರ್ಚಾಗಳಿಗೆ ಬೇರೆಯವರನ್ನು ನೇಮಕ ಮಾಡಿದ್ದೀರಿ. ಇವರು ಜೈಲಿಗೆ ಹೋಗಿದ್ರಾ, ಹೋರಾಟ ಮಾಡಿದ್ರಾ ಎಂದು ಪ್ರಶ್ನಿಸಿ ಬಿಎಸ್ ವೈ ವಿರುದ್ಧ ಕಿಡಿಕಾರಿದರು.

ಕಾರ್ಯಕರ್ತರನ್ನು ಕಡೆಗಣಿಸದಿರಿ: ಪಕ್ಷ ಹಾಳಗುತ್ತಿದ್ದಾಗ ಸುಮ್ಮನೆ ಕೂರಲು ಸಾಧ್ಯವಿಲ್ಲ. ನಾವು ಒಂದಾಗಲು ಇಲ್ಲಿ ಸೇರಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಕೂಡ ಇಲ್ಲಿ ಬಿಜೆಪಿ ಗೆದ್ದಿದೆ. ಕಾರ್ಯಕರ್ತರ ಶಕ್ತಿಯಿಂದ ನರೇಂದ್ರ ಮೋದಿ ಪ್ರಧಾನಿಯಾದರು. ಹೀಗಾಗಿ ಕಾರ್ಯಕರ್ತರನ್ನು ಯಾವತ್ತೂ ಕಡೆಗಣಿಸಬೇಡಿ ಎಂದು ಹೇಳಿದರು.

ಹೊಗಳುವವರನ್ನು ದೂರ ಇಡಿ: ಪ್ರಾಮಾಣಿಕ ಕಾರ್ಯಕರ್ತರನ್ನು ನೀವು ಅಮಾನತು ಮಾಡುತ್ತೀರಿ. ಮೊದಲು ನಿಮ್ಮ ಸುತ್ತಮುತ್ತಲು ಇರುವ ವ್ಯಕ್ತಿಗಳನ್ನು ದೂರ ಇಡಿ. ನಿಮ್ಮನ್ನ ಇಂದ್ರ, ಚಂದ್ರ, ದೇವೇಂದ್ರ ಅಂತಾ ಹೊಗಳುತ್ತಾರೆ. ಹೀಗೆ ಹೊಗಳಿ ಕೆಜೆಪಿ ಕಟ್ಟಿಸಿ ಮಣ್ಣು ಮುಕ್ಕಿಸಿದ್ರು. ಆದರೆ ಇಗ ನಾವು ಎಲ್ಲವನ್ನೂ ನೋಡಿಕೊಂಡು ಸುಮ್ಮನೆ ಕೂರಲ್ಲ. ನೀವು ಏನಾದ್ರೂ ಮಾಡಿ, ನಾವು ಪಕ್ಷವನ್ನು ಉಳಿಸುತ್ತೇವೆ ಎಂದರು.

ನಮ್ ಸುದ್ದಿಗೆ ಬಂದ್ರೆ ಹುಷಾರ್: ಇವತ್ತು ಪಕ್ಷದ ಸಮಸ್ಯೆಯನ್ನು ಪರಿಹರಿಸಲು ನಾಲ್ಕು ಗೋಡೆ ಮಧ್ಯೆ ಮಾತಾಡೋಣ ಅಂತೀರಾ. ಇಷ್ಟು ದಿನ ಎಲ್ಲಿ ಹೋಗಿದ್ರಿ ಯಡಿಯೂರಪ್ಪನವರೇ? ಇವತ್ತಿನ ಸಭೆಯಲ್ಲಿ ಭಾಗವಹಿಸಿದ್ರೆ ಎಚ್ಚರಿಕೆ ಅಂತೀರಾ. ಆದರೆ ನಾವು ಇಲ್ಲಿ ಭಾಗವಹಿಸಿದವ್ರು ನಿಷ್ಠಾವಂತರು. ನಮ್ಮ ಸುದ್ದಿಗೆ ಬಂದ್ರೆ ಹುಷಾರ್. ಪಕ್ಷ ಬಿಟ್ಟು ಹೋಗಿ ಬಂದವರು ನಮಗೆ ಹುಷಾರ್ ಅಂತೀರಾ ಎಂದು ಪ್ರಶ್ನಿಸಿ ಈಶ್ವರಪ್ಪ ಗುಡುಗಿದರು.

ನಾವು ಹುಲಿಗಳು: ಈಗಲೂ ಕಾಲ ಮಿಂಚಿಲ್ಲ ಯಡಿಯೂರಪ್ಪನವರೇ ಒಟ್ಟಾಗಿ ಹೋಗೋಣ ಬನ್ನಿ. ಇಲ್ಲಿ ಕುಳಿತವರು ನಾಯಿ ನರಿಗಳಲ್ಲ ಹುಲಿಗಳು. ಪಕ್ಷ ಸಂಘಟನೆಗೆ ಯಾರನ್ನು ತೆಗೆದುಕೊಳ್ಳಬೇಕು ಅದನ್ನು ಚರ್ಚೆ ಮಾಡಿ. ನಿಮಗಿಷ್ಟ ಬಂದವರನ್ನು ನೇಮಕ ಮಾಡಲು ಸಾಧ್ಯವಿಲ್ಲ. ಇದು ಸಂಗೊಳ್ಳಿರಾಯಣ್ಣ ಬ್ರಿಗೇಡ್ ಸಭೆ ಅಲ್ಲ. ಈ ಸಭೆ ಕರೆದವನು ನಾನಂತೂ ಅಲ್ಲ. ಇದು ಬಿಜೆಪಿ ನಿಷ್ಠಾವಂತರು ಕರೆದ ಸಭೆ. ಮೊದಲು ದೇಶ, ನಂತರ ಪಕ್ಷ ನಂತರ ವ್ಯಕ್ತಿ ಇದು ಬಿಜೆಪಿ ಸಿದ್ಧಾಂತ. ಈ ಸಿದ್ಧಾಂತಕ್ಕೆ ಅನುಗುಣವಾಗಿ ನಾವು ನಡೆದುಕೊಳ್ಳುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಬಿಜೆಪಿ ಸಂಘಟನಾ ಸಮಾವೇಶದಲ್ಲಿ ಬಿಎಸ್‍ವೈ-ಈಶ್ವರಪ್ಪ ಬೆಂಬಲಿಗರ ಮಾರಾಮಾರಿ: ವಿಡಿಯೋ ನೋಡಿ

Share This Article
Leave a Comment

Leave a Reply

Your email address will not be published. Required fields are marked *