ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಈಶ್ವರಪ್ಪ

Public TV
1 Min Read

ಬೆಂಗಳೂರು: ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ಒತ್ತಾಯಕ್ಕೆ ಮಣಿದು ಹೈಕಮಾಂಡ್ ತೀರ್ಮಾನದಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಇಂದು ರಾತ್ರಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ನಿನ್ನೆ ನೀಡಿದ್ದ ಹೇಳಿಕೆಯಂತೆ ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾದ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ ನಾನಲ್ಲ ಅಪರಾಧ ಎಸಗಿಲ್ಲ ಎನ್ನುವ ಮಾತನ್ನು ಪುನರುಚ್ಚರಿಸುತ್ತಿರುವ ಈಶ್ವರಪ್ಪ ಹೈಕಮಾಂಡ್ ಸೂಚನೆಯ ಮೇರೆಗೆ ಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಮುನ್ನ, ಈಶ್ವರಪ್ಪ ಸಚಿವರಾಗಿ ಶಿವಮೊಗ್ಗದ ಶುಭಶ್ರೀ ಸಮುದಾಯ ಭವನವನ್ನು ಉದ್ಘಾಟಿಸಿದರು. ಈ ವೇಳೆ ಈಶ್ವರಪ್ಪ ಬೆಂಬಲಿಗರು, ಯಾವುದೇ ಕಾರಣಕ್ಕೂ ನೀವು ರಾಜೀನಾಮೆ ಕೊಡಬಾರದು ಎಂದು ಒತ್ತಾಯಿಸಿದರು. ಕೆಲವರು ಕಣ್ಣೀರು ಇಟ್ಟರು. ಬಳಿಕ ಶಿವಮೊಗ್ಗದಿಂದ ಬೆಂಬಲಿಗರೊಂದಿಗೆ ಬೆಂಗಳೂರಿಗೆ ಹೊರಟ ಈಶ್ವರಪ್ಪ ಸಂಚರಿಸಿದ ಮಾರ್ಗ ಮಧ್ಯೆ ಅಪಾರ ಪ್ರಮಾಣದಲ್ಲಿ ಬೆಂಬಲಿಗರು ಸೇರಿದ್ದರು. ಶಿವಮೊಗ್ಗದಿಂದ ಕಡೂರು – ಅರಸೀಕೆರೆ – ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಆಗಿಮಿಸಿದ ಈಶ್ವರಪ್ಪ ಜೊತೆ ರಾಜೀನಾಮೆ ಪಡೀಬೇಡಿ ಎಂದು ಸಿಎಂಗೆ ಒತ್ತಾಯ ಮಾಡಲು ಶಿವಮೊಗ್ಗದಿಂದ ನೂರಾರು ಕಾರುಗಳಲ್ಲಿ ಬೆಂಬಲಿಗರು ಆಗಮಿಸಿದ್ದರು. ಬಳಿಕ ಸಿಎಂ ಭೇಟಿಯಾಗಿ ರಾಜೀನಾಮೆ ಸಲ್ಲಿಸಿ ಸರ್ಕಾರದ ನೀಡಿದ ಕಾರನ್ನು ಬಿಟ್ಟು ಶಿವಮೊಗ್ಗಕ್ಕೆ ಹೊರಟರು.

ಈ ಮೂಲಕ 40% ಕಮಿಷನ್ ಆರೋಪಕ್ಕೆ ಈಶ್ವರಪ್ಪ ತಲೆದಂಡವಾಗಿದ್ದು, ವಿಪಕ್ಷಗಳ ಒತ್ತಡದ ನಡುವೆ ಬಿಜೆಪಿ ಹೈಕಮಾಂಡ್ ಗಟ್ಟಿ ನಿರ್ಧಾರದ ಮೂಲಕ ವಾತಾವರಣವನ್ನು ತಿಳಿಗೊಳಿಸುವ ಕೆಲಸಕ್ಕೆ ಕೈ ಹಾಕಿದೆ. ಇದೆಲ್ಲದರ ಜೊತೆ ಸಂತೋಷ್ ಆತ್ಮಹತ್ಯೆ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆದು ಸತ್ಯಾಸತ್ಯತೆ ಹೊರ ಬರುವ ವರೆಗೆ ಈ ಪ್ರಕರಣ ಸದ್ದು ಮಾಡುವ ಸಾಧ್ಯತೆ ಹೆಚ್ಚಿದೆ.

 

Share This Article
Leave a Comment

Leave a Reply

Your email address will not be published. Required fields are marked *