ಸುಮಲತಾ ಬೆಂಬಲಿಸೋದಕ್ಕೆ ನಾವೇನು ಕಾಂಗ್ರೆಸ್‍ನವರೇ – ಮಂಡ್ಯ ಅಭ್ಯರ್ಥಿ ಸ್ಪರ್ಧೆ ಖಚಿತ ಎಂದ್ರು ಈಶ್ವರಪ್ಪ

Public TV
2 Min Read

ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಬಿಡುಗಡೆ ಆಗಲಿದ್ದು ಮಂಡ್ಯದಲ್ಲಿಯೂ ಕೂಡ ಪಕ್ಷ ಅಭ್ಯರ್ಥಿ ಹಾಕುತ್ತೇವೆ ಎಂದು ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧೆ ಮಾಡಲಿದೆ. ನಮಗೂ ರಾಜಕೀಯ ತಂತ್ರಗಾರಿಕೆ ಗೊತ್ತು. ಮಂಡ್ಯದಲ್ಲೂ ಸ್ಪರ್ಧೆ ಮಾಡುತ್ತೇವೆ ಎಂದರು.

ಈ ಹಿಂದೆ ಮಂಡ್ಯ ಎಂದ ಕ್ಷಣ ಬಿಜೆಪಿ ಅಭ್ಯರ್ಥಿಗಳು ಠೇವಣಿ ಸಿಗಲ್ಲ ಎಂದು ಓಡಿ ಹೋಗುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈಗ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಓಡಿ ಹೋಗ್ತಿದ್ದಾರೆ. ಸಿದ್ದರಾಮಯ್ಯ, ದೇವೇಗೌಡರು ಇಬ್ಬರು ಸೇರಿ ಎರಡಂಕಿ ದಾಟಲಿ ಎಂದು ಸವಾಲು ಎಸೆದರು.

ಮಾಜಿ ಪ್ರಧಾನಿಗಳಾದ ದೇವೇಗೌಡರು ಬಿಜೆಪಿ ಎರಡಂಕಿ ದಾಟೋದಕ್ಕೆ ಬಿಡಲ್ಲ ಎಂದು ಹೇಳಿ ಹಗುರವಾಗಿ ಮಾತನಾಡಿದ್ದಾರೆ. ಮೊದಲು ಅವರು ಇದ್ದ ಎರಡನ್ನು ಉಳಿಸಿಕೊಳ್ಳಲಿ ನೋಡೋಣ. ದೇವೇಗೌಡರು ಮತ್ತು ರಾಹುಲ್ ಗಾಂಧಿ ಒಟ್ಟಾಗಿರುವುದು ಕುರುಡನ ಮೇಲೆ ಕುಂಟ ಕೂತಂತೆ ಆಗಿದೆ. ಸ್ವಂತ ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್-ಕಾಂಗ್ರೆಸ್ ಒಟ್ಟಾಗಿದ್ದಾರೆ. ಈಗ ಕರ್ನಾಟಕದಲ್ಲಿ ರಾಹುಲ್ ಗಾಂಧಿ ಅವರಲ್ಲ ಸ್ವರ್ಗದಲ್ಲಿರುವ ಇಂದಿರಾಗಾಂಧಿಯವರು ಬಂದು ನಿಂತರೂ ಗೆಲ್ಲೋದು ಬಿಜೆಪಿಯೇ. ಪ್ರಧಾನಿಯಾಗೋದು ನರೇಂದ್ರಮೋದಿಯೇ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರಿಗೆ ಮಾನ ಮರ್ಯಾದೆ ಇಲ್ಲ ನಾನು ಅದನ್ನು ನೇರವಾಗಿ ಹೇಳುತ್ತಿದ್ದೇನೆ. ಚಾಮುಂಡೇಶ್ವರಿಯಲ್ಲಿ 35 ಸಾವಿರದಿಂದ ಸೋತವರು ಸಿದ್ದರಾಮಯ್ಯ. ಈಗ ಯಾರಿಗೆ ಮಾನ ಮರ್ಯಾದೆ ಇಲ್ಲ ಅಂತೇಳಿ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಒಂದು ಹೆಣ್ಣು ನೋಡಲು ಹೋದಾಗಲೇ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಬರುತ್ತದೆ. ಅಂದ ಮೇಲೆ ಬಿಜೆಪಿ ರಾಷ್ಟ್ರೀಯ ಪಕ್ಷವಾಗಿರುವುದರಿಂದ ಇಲ್ಲಿಗೆ ಯಾರನ್ನಾದರೂ ಸೇರಿಸಿಕೊಳ್ಳುವ ಸಂದರ್ಭದಲ್ಲಿ ವಿಭಿನ್ನ ಅಭಿಪ್ರಾಯ ಬರುವುದು ಸಹಜ. ಅಂತೆಯೇ ಎ.ಮಂಜು ಸೇರ್ಪಡೆ ವಿಷಯದಲ್ಲೂ ಆಗಿದೆ. ಯೋಗಾ ರಮೇಶ್ ಸಿದ್ದರಾಮಯ್ಯ ಮನೆಗೆ ಊಟಕ್ಕೆ ಹೋಗಿರಬಹುದು. ಹಾಗಿದ್ದೂ ನಾವು ಯೋಗ ರಮೇಶ್ ರನ್ನು ಕೇಳುತ್ತೇವೆ. ಪಕ್ಷ ಬಿಟ್ಟು ಹೋಗುತ್ತೇವೆ ಎಂದರೆ ಸಂತೋಷ, ಇಲ್ಲ ಮೋದಿಯವರನ್ನು ಪ್ರಧಾನಿ ಮಾಡಲು ಇಲ್ಲೇ ಉಳಿಯುತ್ತೇನೆ ಎಂದು ನಿರ್ಧರಿಸಿದರೆ ಮತ್ತಷ್ಟು ಸಂತೋಷ ಎಂದರು.

ಇದೇ ವೇಳೆ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಕಾನೂನು ತಜ್ಞರು, ವಿಧಾನಸಭೆಯಲ್ಲಿ ವಾಲ್ಮೀಕಿ ಬಿಟ್ಟರೆ ಇವರೇ ಎಂಬಂತೆ ಮಾತನಾಡುತ್ತಾರೆ. ಆದರೆ ಅವರು ಇಲ್ಲಿಯವರಗೆ ಏಕೆ? ಉಮೇಶ್ ಜಾದವ್ ಅವರ ರಾಜೀನಾಮೆ ಪತ್ರ ಅಂಗೀಕರಿಸಿಲ್ಲ ಎಂದು ಗೊತ್ತಿಲ್ಲ. ನಾನು ಕಾನೂನು ತಜ್ಞ ಅಲ್ಲ. ಆದ್ರು ರಾಜೀನಾಮೆ ಅಂಗೀಕಾರಕ್ಕೆ ಅವರಿಗೆ ಇನ್ನೂ ಎಷ್ಟು ಸಮಯ ಬೇಕು ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದರು.

Share This Article
Leave a Comment

Leave a Reply

Your email address will not be published. Required fields are marked *