ವಿದ್ಯಾರ್ಥಿಗಳಿಗೆ ಕೊರೊನಾ ಹರಡದಂತೆ ತಡೆಯಲು ನಿಗಾ ವಹಿಸಿ: ಕೆ.ಎಸ್.ಈಶ್ವರಪ್ಪ

Public TV
2 Min Read

ಶಿವಮೊಗ್ಗ: ಕೊರೊನಾ ಹರಡದಂತೆ ತಡೆಯಲು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮೇಲೆ ನಿಗಾ ಇರಿಸಬೇಕು ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಭಾನುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣ ಕುರಿತು ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ತಜ್ಞ ವೈದ್ಯರ ಸಭೆ ನಡೆಸಿ ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿ ಪ್ರಕಾರ ಶಾಲಾ ಕಾಲೇಜುಗಳನ್ನು ನಡೆಸಬೇಕು. ಪಾಸಿಟಿವ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಅವರ ಅನುಮತಿ ಪಡೆದ ಬಳಿಕ ರಜೆ ನೀಡಬಹುದಾಗಿದೆ. ಅನಾರೋಗ್ಯದಿಂದ ಗೈರು ಹಾಜರಾಗುವ ವಿದ್ಯಾರ್ಥಿಗಳಿಗೆ ಹಾಜರಾತಿಯನ್ನು ಕಡ್ಡಾಯಗೊಳಿಸಬಾರದು. ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ನಿರಂತರ ನಿಗಾ ವಹಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: NDRF ಟ್ವಿಟ್ಟರ್ ಖಾತೆ ಹ್ಯಾಕ್

ಜಿಲ್ಲೆಯಲ್ಲಿ ಲಸಿಕೆ ಪಡೆದವರ ಪ್ರಮಾಣ ರಾಜ್ಯಮಟ್ಟಕ್ಕೆ ಹೋಲಿಸಿದರೆ ಕಡಿಮೆಯಿದೆ. ಅಭಿಯಾನದ ರೀತಿಯಲ್ಲಿ ಲಸಿಕೆಯನ್ನು ಪ್ರತಿಯೊಬ್ಬರಿಗೂ ನೀಡಬೇಕು. ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಮೂರನೇ ಡೋಸ್ ನೀಡುವ ಕಾರ್ಯವನ್ನು ಚುರುಕುಗೊಳಿಸಬೇಕು. ಜಿಲ್ಲೆಯಲ್ಲಿ ಪ್ರಸ್ತುತ ಪಾಸಿಟಿವ್ ವ್ಯಕ್ತಿಗಳ ಹೋಂ ಕ್ವಾರಂಟೈನ್ ಪ್ರಮಾಣ ಶೇ.95ರಷ್ಟಿದ್ದು, ಪ್ರಾಥಮಿಕ ಸಂಪರ್ಕಿತರಿಗೆ ಕನಿಷ್ಟ 3 ದಿನ ಹೋಂ ಕ್ವಾರಂಟೈನ್ ಖಾತ್ರಿಪಡಿಸಬೇಕು. ಹೋಂ ಕ್ವಾರಂಟೈನ್‍ನಲ್ಲಿ ಇರುವವರಿಗೆ ಅಗತ್ಯ ಔಷಧಿಗಳನ್ನು ಒಳಗೊಂಡ ಕಿಟ್ ಕಡ್ಡಾಯವಾಗಿ ಒದಗಿಸಬೇಕು ಎಂದರು.

ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದರೆ ಅಂತಹ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸದೆ, ವಸತಿ ನಿಲಯವನ್ನು ಸೀಲ್‍ಡೌನ್ ಮಾಡಿ ವಿದ್ಯಾರ್ಥಿಗಳನ್ನು ಅಲ್ಲಿಯೇ ಇರಿಸಿಕೊಳ್ಳಬೇಕು ಎಂದು ಸೂಚಿಸಿದರು. ಇದನ್ನೂ ಓದಿ: UP Election: ಭಾರತದ ಅತಿ ಎತ್ತರದ ಮನುಷ್ಯ ಸಮಾಜವಾದಿ ಪಕ್ಷ ಸೇರ್ಪಡೆ

ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿ ಅವರು ಮಾತನಾಡಿ, ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದರೆ ಗಾಬರಿಯಾಗುವ ಅಗತ್ಯವಿಲ್ಲ. ಮೂರನೇ ಅಲೆಯಲ್ಲಿ ಕೊರೊನಾ ವೈರಸ್ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಕೊರೊನಾ ಪಾಸಿಟಿವ್ ಬಂದ ಯಾವುದೇ ಮಕ್ಕಳು ಇದುವರೆಗೆ ಜಿಲ್ಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವ ಅಗತ್ಯ ಬಿದ್ದಿಲ್ಲ. ಮಕ್ಕಳ ಮೂಲಕ ಕೊರೊನಾ ಹಿರಿಯರಿಗೆ ಹರಡಿದರೆ ಸಾಮುದಾಯಿಕ ಪ್ರತಿರೋಧ ಶಕ್ತಿ (ಹರ್ಡ್ ಇಮ್ಯೂನಿಟಿ) ಬಹು ಬೇಗನೇ ಬರಲು ಸಾಧ್ಯವಿದೆ. ಕೊರೊನಾ ನಿಯಂತ್ರಣದ ನಿಟ್ಟಿನಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ. ಆದ್ದರಿಂದ ಕೊರೊನಾ ಪಾಸಿಟಿವ್ ಕಾರಣಕ್ಕಾಗಿ ಶಾಲಾ ಕಾಲೇಜುಗಳಿಗೆ ರಜೆ ನೀಡುವುದು ಸಮಂಜಸವಲ್ಲ. ಅಗತ್ಯ ಬಿದ್ದರೆ ಕೊರೊನಾ ಪಾಸಿಟಿವ್ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವ ತರಗತಿಗಳಿಗೆ ರಜೆ ನೀಡಬಹುದಾಗಿದೆ ಎಂದು ಹೇಳಿದರು. ಇದನ್ನೂ ಓದಿ: UP Election – ಅಮಿತ್ ಶಾ ಮನೆ-ಮನೆ ಪ್ರಚಾರ

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್, ಜಿ.ಪಂ. ಸಿಇಒ ಎಂ.ಎಲ್.ವೈಶಾಲಿ, ಡಿಎಚ್ ಒ ಡಾ.ರಾಜೇಶ್ ಸುರಗಿಹಳ್ಳಿ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ತಜ್ಞ ವೈದ್ಯರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *