ಕೆಆರ್‌ಎಸ್ ಡ್ಯಾಂ ಒಳಹರಿವಿನ ಸ್ಥಳದಲ್ಲಿ ತಡೆಗೋಡೆ ಕುಸಿತ

Public TV
1 Min Read

ಮಂಡ್ಯ: ಕಳೆದ 10 ದಿನಗಳಿಂದ ಕಾವೇರಿ ಜಲಾನಯನ (Cauvery River) ಪ್ರದೇಶದಲ್ಲಿ ಮಳೆರಾಯನ ಅಬ್ಬರ ಹೆಚ್ಚಿದೆ. ಇದರ ಪರಿಣಾಮ ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನ (KRS Dam) ಕಾವೇರಿ ಒಡಲಾದ ಕೆಆರ್‌ಎಸ್ ಡ್ಯಾಂ ಭರ್ತಿಯ ಅಂಚಿಗೆ ತಲುಪಿದೆ.

ಡ್ಯಾಂನಿಂದ ಹೆಚ್ಚಿನ ಪ್ರಮಾಣದಲ್ಲಿ ಹೊರಹರಿವು ಬಿಡಲಾಗುತ್ತಿದೆ. ಇದರಿಂದ ಕಾವೇರಿ ನದಿ ಸೌಂದರ್ಯದ ರಾಶಿಯಿಂದ ಕಂಗೊಳಿಸುತ್ತಿದೆ. ಖುಷಿಯ ನಡುವೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೊರಹರಿವು ಹರಿವ ಜಾಗದಲ್ಲಿ ತಡೆಗೋಡೆ ಕುಸಿದಿದೆ. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂ ಭರ್ತಿಗೆ ಕೇವಲ 2 ಅಡಿಯಷ್ಟೇ ಬಾಕಿ

ಇತ್ತೀಚೆಗೆ ಕೆಆರ್‌ಎಸ್ ಡ್ಯಾಂನ ನಗುವನ ತೋಟದ ಮುಂದೆ ಇರುವ ಗೇಟ್‌ ಬಳಿಯ ತಡೆಗೋಡೆಯನ್ನು ತೋಟಕ್ಕೆ ತೊಂದರೆಯಾಗದಿರಲಿ ಎಂದು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾಗಿತ್ತು. ಇದೀಗ ಅಧಿಕಾರಿಗಳು ಹಿಂದೆ ಮುಂದೆ ನೋಡದೇ ಆ ಗೇಟ್‌ಗಳಿಂದ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟ ಕಾರಣ ತಡೆಗೋಡೆ ಕುಸಿದೆ.

ಪರ್ಯಾಯವಾಗಿ ಬೇರೆ ಬೇರೆ ಗೇಟ್‌ಗಳಲ್ಲಿ ನೀರು ಬಿಟ್ಟಿದ್ದರೆ ಈ ಘಟನೆ ಜರುಗುತ್ತಿರಲಿಲ್ಲ. ಈ ತಡೆಗೋಡೆ ಕುಸಿದಿರುವುದರಿಂದ ಸದ್ಯ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಕಾಮಗಾರಿ ನೀರು ಪಾಲಾಗಿದೆ. ಒಂದು ಕಡೆ ಕಾವೇರಿ ಒಡಲು ಭರ್ತಿಯಾಗುತ್ತಿರುವುದು ಸಂತಸ ತಂದರೆ, ಇನ್ನೊಂದೆಡೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಡೆಗೋಡೆ ಕುಸಿದಿರುವುದು ಬೇಸರದ ಸಂಗತಿ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇದನ್ನೂ ಓದಿ: ಭಾನುವಾರ ಸಂಜೆಯೊಳಗೆ KRS ಸಂಪೂರ್ಣ ಭರ್ತಿ ಸಾಧ್ಯತೆ

Share This Article