ಜಲ ವಿವಾದದಲ್ಲಿ ಬಿಜೆಪಿ ರಾಜಕೀಯ: 8 ವಕೀಲರನ್ನು ಕೈಬಿಟ್ಟು ಬೆಂಗ್ಳೂರಿನಿಂದ ಇಬ್ಬರ ನೇಮಕ

Public TV
2 Min Read

– ಕೃಷ್ಣಾ ವ್ಯಾಜ್ಯದ ಅಂತಿಮ ವಿಚಾರಣೆಯಲ್ಲಿ ಬದಲಾವಣೆ
– ಹಿರಿಯ ವಕೀಲರಿಂದ ಅಸಮಾಧಾನ

ನವದೆಹಲಿ: ರಾಜ್ಯ ಬಿಜೆಪಿ ಸರ್ಕಾರಕ್ಕೆ ನದಿ ನೀರಿನ ವಿಚಾರದಲ್ಲೂ ರಾಜಕೀಯ ಬೇಕಿತ್ತಾ? ನೆಲ-ಜಲಕ್ಕಿಂತ ಬಿಜೆಪಿ ಸರ್ಕಾರಕ್ಕೆ ರಾಜಕೀಯ ಮುಖ್ಯವಾಯಿತೇ ಎನ್ನುವ ಪ್ರಶ್ನೆ ಈಗ ಎದ್ದಿದೆ.

ಹೌದು. ಜಲ ವಿವಾದ ಸಂಬಂಧ ಹಲವು ವರ್ಷಗಳಿಂದ ಕರ್ನಾಟಕ ಪರ ವಾದ ಮಂಡಿಸುತ್ತಿದ್ದ 8 ವಕೀಲರನ್ನು ರಾಜ್ಯ ಸರ್ಕಾರ ಕೈಬಿಟ್ಟಿರುವ ನಡೆಯಿಂದಾಗಿ ಈ ಪ್ರಶ್ನೆ ಎದ್ದಿದೆ.

ಕೃಷ್ಣಾ, ಮಹದಾಯಿ ಹಾಗೂ ಕಾವೇರಿ ವಿವಾದದಲ್ಲಿ ರಾಜ್ಯದ ಪರ ವರ್ಷಗಳಿಂದ ವಾದ ಮಂಡಿಸುತ್ತಿದ್ದ ವಕೀಲರನ್ನು ಎತ್ತಂಗಡಿ ಮಾಡಲಾಗಿದೆ. ಯಾವುದೇ ಚರ್ಚೆ ನಡೆಸದೇ 8 ಜನ ವಕೀಲರನ್ನು ಕೈಬಿಟ್ಟು ಬೆಂಗಳೂರಿಂದ ಇಬ್ಬರು ವಕೀಲರ ನೇಮಕ ಮಾಡಲಾಗಿದೆ. ರಾಜ್ಯದ ಸರ್ಕಾರದ ಈ ನಡೆ ಈಗ ಚರ್ಚೆಗೆ ಗ್ರಾಸವಾಗಿದೆ.

ಹಿರಿಯ ಸುಪ್ರೀಂ ಕೋರ್ಟ್ ವಕೀಲರಾದ ಶಾಮ್ ದಿವಾನ್, ಮೋಹನ್ ಕಾತರಕಿ ಹಾಗೂ ಫಾಲಿ ನಾರಿಮನ್ ಅವರನ್ನು ಮಾತ್ರ ಮುಂದುವರಿಸಲಾಗಿದೆ. ಆದರೆ ಸರ್ಕಾರ ದೀಢಿರ್ ಎಂಬಂತೆ ವಕೀಲರನ್ನು ಬದಲಿಸಿ, ಬೆಂಗಳೂರಿನ ಅಶ್ವಿನ್ ಚಿಕ್ಕಮಠ, ರಾಜೇಶ್ವರ್ ಅವರಿಗೆ ಹೊಸ ಜವಾಬ್ದಾರಿ ನೀಡಿದೆ.

ಈ ಹಂತದಲ್ಲಿ ವಕೀಲರ ಬದಲಾವಣೆ ಬೇಕಿತ್ತಾ? ಜಲ ವಿವಾದದಲ್ಲಿ ವಕೀಲರ ಬದಲಾವಣೆ ಪ್ರಯೋಗ ಬೇಕಿತ್ತಾ? ಹಾಗೂ ಯಾರೊಂದಿಗೂ ಚರ್ಚಿಸದೇ ಸರ್ಕಾರ ನಿರ್ಧಾರ ಸರೀನಾ ಎನ್ನುವ ಪ್ರಶ್ನೆ ಶುರುವಾಗಿದೆ.

ಯಾರಿಗೆ ಕೊಕ್?:
ಕೃಷ್ಣಾ ನದಿ ವ್ಯಾಜ್ಯದಲ್ಲಿ ವಾದ ಮಂಡಿಸುತ್ತಿದ್ದ ವಕೀಲರಾದ ಕನ್ನಡಿಗರಾದ ಶರತ್ ಜವಳಿ, ಉತ್ತರ ಭಾರತ ಮೂಲದ ಅಂಕೋಲೆಕರ್, ಅಜೀಂ ಕಾಳೆಬುದ್ದಿ ಹಾಗೂ ರಣವೀರ್ ಸಿಂಗ್ ಅವರಿಗೆ ಕೊಕ್ ನೀಡಲಾಗಿದೆ. ಮಹದಾಯಿ ವ್ಯಾಜ್ಯದಲ್ಲಿ ರಾಜ್ಯದ ಪರ ವಾದ ಮಂಡಿಸುತ್ತಿದ್ದ ವಕೀಲರಾದ ಬೆಳಗಾವಿ ಮೂಲದ ಎಂ.ಬಿ ಜಿರಳಿ, ಮಂಗಳೂರು ಮೂಲದ ಅನಿತಾ ಶಣೈ ಮತ್ತು ಉತ್ತರ ಭಾರತ ಮೂಲದ ಥಾಸಿ ವಿಶ್ವೇಶ್ವರ್ ಅವರಿಗೆ ಗೇಟ್‍ಪಾಸ್ ನೀಡಲಾಗಿದೆ.

ಕಾವೇರಿ ವ್ಯಾಜ್ಯದಲ್ಲಿ ವಾದ ಮಂಡಿಸುತ್ತಿದ್ದ ಕೊಡಗು ಮೂಲದ ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ, ವಕೀಲರಾದ ಕನ್ನಡಿಗ ಶರತ್ ಜವಳಿ, ಉತ್ತರಭಾರತ ಮೂಲದ ಅಜೀಂ ಕಾಳೆಬುದ್ದಿ ಅವರನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ.

ರಾಜ್ಯ ಸರ್ಕಾರದ ನಿರ್ಧಾರಕ್ಕೆ ವಕೀಲರು ಬೇಸರ ವ್ಯಕ್ತಪಡಿಸಿದ್ದಾರೆ. ಕೃಷ್ಣಾ ವ್ಯಾಜ್ಯದ ಅಂತಿಮ ವಿಚಾರಣೆ ವೇಳೆ ರಾಜ್ಯ ಸರ್ಕಾರ ನಿರ್ಧಾರ ಸರಿಯಲ್ಲ. ಕೃಷ್ಣಾ ನದಿ ನೀರು ಹಂಚಿಕೆ ವಿವಾದದ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನವೆಂಬರ್ 15ಕ್ಕೆ ನಡೆಯಲಿದೆ. ಹಲವು ವರ್ಷಗಳಿಂದ ಕೆಲಸ ಮಾಡಿದರೂ ಏಕಾಏಕಿ ತೆಗೆದರೆ ಅಂತಿಮ ವಿಚಾರಣೆಗೆ ತೊಂದರೆ ಆಗಬಹುದು. ಮುಖ್ಯಮಂತ್ರಿ, ಜಲ ಸಂಪನ್ಮೂಲ ಇಲಾಖೆಯಿಂದ ಯಾವುದೇ ಸಭೆಗಳನ್ನು ಮಾಡುತ್ತಿಲ್ಲ. ಹೀಗಾಗಿ ಪೂರ್ಣ ಬೆಂಬಲ ಸಿಗುತ್ತಿಲ್ಲ ಎಂದು ಹಿರಿಯ ವಕೀಲರು ಅಸಮಾಧಾನ ಹೊರ ಹಾಕಿದ್ದಾರೆ.

ಕಿರಿಯ ವಕೀಲರ ಕೈಬಿಟ್ಟ ವಿಚಾರವಾಗಿ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಪ್ರತಿಕ್ರಿಯಿಸಿ, ಜಲವಾದಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ. ಹಿರಿಯ ವಕೀಲರಾದ ಶಾಮ್ ದಿವಾನ್, ಮೋಹನ್ ಕಾತರಕಿ ಹಾಗೂ ಫಾಲಿ ನಾರಿಮನ್ ಮುಂದುವರಿಯಲಿದ್ದಾರೆ. ಹಾಗಾಗಿ ಯಾವುದೇ ಸಮಸ್ಯೆ ಆಗುವುದಿಲ್ಲ. ನದಿ ವಿಚಾರಕ್ಕೆ ಸಂಬಂಧಿಸಿದಂತೆ ಎಂದಿನಂತೆ ಕರ್ನಾಟಕದ ವಾದ ಮುಂದುವರಿಯಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *