ಬಂಡಾಯ ಶಮನಕ್ಕೆ ಡಿಕೆಶಿ ಗಿಮಿಕ್? – ಕೆಪಿಸಿಸಿ ಅಧ್ಯಕ್ಷ ಹಾಕಿದ್ದ ಪೋಸ್ಟ್‌ ಸುಳ್ಳೆಂದ ಟಿಕೆಟ್‌ ವಂಚಿತ

By
2 Min Read

ಚಿತ್ರದುರ್ಗ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆ ಟಿಕೆಟ್‌ ಕೈತಪ್ಪಿದ ಆಕಾಂಕ್ಷಿಗಳಿಂದ ಮೂರು ಪ್ರಮುಖ ಪಕ್ಷಗಳಿಗೆ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್‌ (Congress) ಪಾಳಯದಲ್ಲಿ ಬಂಡಾಯ ಶಮನಕ್ಕೆ ಕಾರ್ಯತಂತ್ರ ರೂಪಿಸಲಾಗಿದೆ. ಬಂಡಾಯಗಾರರನ್ನು ತಣ್ಣಗಾಗಿಸುವ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (D.K.Shivakumar) ಗಿಮಿಕ್‌ ಮಾಡ್ತಿದ್ದಾರಾ ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ ಘಟನೆಯೊಂದು ನಡೆದಿದೆ.

ಹೌದು, ಮೊಳಕಾಲ್ಮೂರು ಬಂಡಾಯ ಶಮನ ಯಶಸ್ವಿಯಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಹಾಕಿದ್ದ ಪೋಸ್ಟ್‌ ಸುಳ್ಳೆಂದು ಟಿಕೆಟ್‌ ಆಕಾಂಕ್ಷಿಯಾಗಿದ್ದ ಯೋಗೇಶ್‌ ಬಾಬು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಡಿಕೆಶಿ ಅವರು ಗಿಮಿಕ್‌ ಮಾಡ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ: ನಾಮಪತ್ರ ಸಲ್ಲಿಕೆ ವೇಳೆ ನಿಯಮ ಉಲ್ಲಂಘನೆ – AAP ಅಭ್ಯರ್ಥಿ ವಿರುದ್ಧ ಮೊಕದ್ದಮೆ ದಾಖಲು

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ವಿಧಾನಸಭೆ ಕ್ಷೇತ್ರಕ್ಕೆ ಕಾಂಗ್ರೆಸ್‌ ಮಾಜಿ ಶಾಸಕ ಎನ್‌.ವೈ.ಗೋಪಾಲಕೃಷ್ಣ ಅವರಿಗೆ ಟಿಕೆಟ್‌ ನೀಡಲಾಗಿದೆ. ಟಿಕೆಟ್ ಸಿಗದೆ ನೊಂದಿದ್ದ ಯೋಗೇಶ್ ಬಾಬು ಪಕ್ಷದ ವಿರುದ್ಧ ಬಂಡಾಯ ಎದ್ದಿದ್ದಾರೆ. ಬಂಡಾಯ ಶಮನಕ್ಕೆ ಮುಂದಾಗಿರುವ ಡಿಕೆಶಿ ಪೋಸ್ಟ್‌ವೊಂದನ್ನು ಹಾಕಿದ್ದರು.

ಟಿಕೆಟ್‌ ಸಿಗದೆ ನೊಂದಿದ್ದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಯೋಗೇಶ್‌ ಬಾಬು ಅವರೊಂದಿಗೆ ಯಶಸ್ವಿ ಸಂಧಾನ ಮಾತುಕತೆ ನಡೆಸಲಾಯಿತು. ಅವರ ರಾಜಕೀಯ ಬೆಳವಣಿಗೆಗೆ ಪಕ್ಷವು ಬೆನ್ನಾಗಿ ನಿಲ್ಲುವುದಾಗಿ ಭರವಸೆ ನೀಡಿ ಅವರನ್ನು ಸಂತೈಸಲಾಯಿತು ಎಂದು ಡಿಕೆಶಿ ಪೋಸ್ಟ್‌ ಹಾಕಿದ್ದರು. ಜೊತೆಗೆ ಬಾಬು ಅವರೊಂದಿಗಿನ ಫೋಟೋ ಕೂಡ ಹಂಚಿಕೊಂಡಿದ್ದರು. ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಗೂಳಿಹಟ್ಟಿ ಶೇಖರ್- ಪಕ್ಷೇತರನಾಗಿ ಸ್ಪರ್ಧೆ

ಆದರೆ ಇದು ಸುಳ್ಳು ಎಂದು ಯೋಗೇಶ್‌ ಬಾಬು ಹೇಳಿದ್ದಾರೆ. ಬೇರೊಂದು ವಿಚಾರದ ಚರ್ಚೆಗೆಂದು ಡಿಕೆಶಿ ಕರೆದಿದ್ದರು. ಸಂಧಾನ ಯಶಸ್ವಿ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿದ್ದಾರೆ. ಇದೆಲ್ಲ ಸುಳ್ಳು. ಗ್ರಾಮ ಪಂಚಾಯಿತಿವಾರು ಅಭಿಪ್ರಾಯ ಕೇಳುತ್ತಿದ್ದೇನೆ. ಮೊಳಕಾಲ್ಮೂರಿಂದ ಸ್ಪರ್ಧೆ ಮಾಡುವುದು ಖಚಿತ ಎಂದು ಬಾಬು ಸ್ಪಷ್ಟಪಡಿಸಿದ್ದಾರೆ.

ಮೊಳಕಾಲ್ಮೂರು ಕಾಂಗ್ರೆಸ್ ಟಿಕೆಟ್ ʼಕೈʼ ತಪ್ಪಿದ ಹಿನ್ನೆಲೆ ಕಾಂಗ್ರೆಸ್ ವಿರುದ್ಧ ಡಾ.ಯೋಗೇಶ್‌ ಬಾಬು ಬಂಡಾಯ ಎದ್ದಿದ್ದಾರೆ. ಮಾಜಿ ಶಾಸಕ ಎನ್.ವೈ.ಗೋಪಾಲಕೃಷ್ಣಗೆ ‘ಕೈ’ ಈ ಬಾರಿ ಟಿಕೆಟ್‌ ನೀಡಿದೆ. ಗೋಪಾಲಕೃಷ್ಣ ಅವರು ಕೂಡ್ಲಿಗಿ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಟಿಕೆಟ್ ತಪ್ಪಿದ ಹಿನ್ನೆಲೆ ಯೋಗೇಶ್‌ ಬಾಬು ಬಂಡಾಯ ಸಾರಿದ್ದಾರೆ.

Share This Article