ಕೊಟ್ಟಿಗೆಹಾರದಲ್ಲಿ ಹೊತ್ತಿ ಉರಿದ ಅರಣ್ಯ – ಬೆಂಕಿ ನಂದಿಸಲು ಅರಣ್ಯಾಧಿಕಾರಿಗಳ ಹರಸಾಹಸ

Public TV
2 Min Read

ಚಿಕ್ಕಮಗಳೂರು: ಗುಡ್ಡಕ್ಕೆ ಬೆಂಕಿ ತಗುಲಿ ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗೂಲ್ ಎಂಬ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಮಳೆಗಾಲದಲ್ಲಿ ಕೊಟ್ಟಿಗೆಹಾರ ಸುತ್ತಮುತ್ತ ಭಾರೀ ಮಳೆ ಸುರಿದಿತ್ತು. ಈಗ ಅಷ್ಟೇ ಪ್ರಮಾಣದ ರಣಬಿಸಿಲು ಕೂಡಾ ಇದೆ. ಭಾರೀ ಬಿಸಿಲಿಗೆ ಬೆಟ್ಟಗುಡ್ಡಗಳೆಲ್ಲಾ ಒಣಗಿ ನಿಂತಿದೆ. ಕಿಡಿ ಬೆಂಕಿ ಸಿಕ್ಕರೂ ಇಡೀ ಕಾಡೇ ಹೊತ್ತಿ ಉರಿಯುವ ಸ್ಥಿತಿಯಲ್ಲಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಕಾಡನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ವೆಲ್ ಕಮ್ ಬ್ಯಾಕ್! ನಿಮ್ಮ ಕುಟುಂಬಗಳು ನಿಮಗಾಗಿ ಉಸಿರು ಬಿಗಿಹಿಡಿದು ಕಾಯುತ್ತಿವೆ: ಸ್ಮೃತಿ ಇರಾನಿ

ಫೈರ್ ಲೈನ್, ಸ್ಥಳಿಯರಿಗೆ ಅರಣ್ಯದ ಬಗ್ಗೆ ಮಾಹಿತಿ, ಬೀದಿನಾಟಕ, ಕರಪತ್ರ, ಭಿತ್ತಿಪತ್ರಗಳ ಮೂಲಕ ಕಾಡಿನ ಮಹತ್ವ ಸಾರುತ್ತ ಕಾಡನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ, ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ದೇವನಗೂಲ್ ಸಮೀಪ ಹತ್ತಾರು ಎಕರೆ ಅರಣ್ಯ ಸಂಪೂರ್ಣ ಸುಟ್ಟು ಕರಕಲಾಗಿದೆ. ದಟ್ಟ ಕಾನನದ ಈ ಭಾಗದಲ್ಲಿ ಅಪಾರ ಪ್ರಮಾಣದ ಅಪರೂಪದ ಸಸ್ಯ ಸಂಪತ್ತು ಕೂಡ ಇದೆ. ಆದರೆ, ಬೆಂಕಿಯ ಕೆನ್ನಾಲಿಗೆ ಹತ್ತಾರು ಎಕರೆ ಅರಣ್ಯ ಸಂಪೂರ್ಣ ಸುಟ್ಟು ಕರಕಲಾಗಿರುವುದರಿಂದ ಅಪರೂಪದ ಸಸ್ಯ ಸಂಪತ್ತು ಕೂಡ ನಾಶವಾಗಿದೆ.

ವಿಷಯ ತಿಳಿದ ಕೂಡಲೇ ಅರಣ್ಯ ಪ್ರದೇಶಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳು ಕೂಡ ಸ್ಥಳಕ್ಕಾಗಮಿಸಿ ಬೆಂಕಿಯನ್ನ ನಂದಿಸಿದ್ದಾರೆ. ಅರಣ್ಯ ಅಧಿಕಾರಿಗಳು ಮರದ ಟೊಂಗೆಗಳ ಮೂಲಕ ಬೆಂಕಿಯನ್ನು ನಂದಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಸಮಯಪ್ರಜ್ಞೆಯಿಂದ ಅರಣ್ಯದ ಜೊತೆ ಸಾವಿರಾರು ಜೀವಸಂಕುಲ ಕೂಡ ಅಪಾಯದಿಂದ ಪಾರಾಗಿವೆ.

ಮೂಡಿಗೆರೆ ಸಂಪೂರ್ಣ ಮಲೆನಾಡದರೂ ಮಾರ್ಚ್-ಏಪ್ರಿಲ್ ಬಿರುಬಿಸಲು ಕಾಲ. ಈ ವೇಳೆ ಅರಣ್ಯ ಅಧಿಕಾರಿಗಳು ಕಾಡನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೂ ದೊಡ್ಡ ಅನಾಹುತ ಕಟ್ಟಿಟ್ಟಬುತ್ತಿ. ಜಿಲ್ಲೆಯ ಅರಣ್ಯ ಇಲಾಖೆ ಕೂಡ ಕಾಡನ್ನ ರಕ್ಷಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಇದನ್ನೂ ಓದಿ: ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ – ರಷ್ಯನ್ ಉದ್ಯಮಿ ಘೋಷಣೆ!

ಆದರೂ ಕೂಡ ಕೆಲ ಕಿಡಿಗೇಡಿಗಳಿಂದ ಪ್ರತಿ ವರ್ಷ ಅಲ್ಲಲ್ಲೇ ಅರಣ್ಯಕ್ಕೆ ಬೆಂಕಿ ಬಿದ್ದು ನೂರಾರು ಎಕರೆ ಅರಣ್ಯ ಸಂಪೂರ್ಣ ನಾಶವಾಗುತ್ತಿದೆ. ಜನಸಾಮಾನ್ಯರಲ್ಲಿ ಅರಣ್ಯದ ಮಹತ್ವದ ಅರಿವಾಗುವವರೆಗೂ ಈ ಅನಾಹುತ ತಪ್ಪಿದ್ದಲ್ಲ. ಅರಣ್ಯಕ್ಕೆ ಬೆಂಕಿ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯರು ಕೂಡ ಬೆಂಕಿ ನಂದಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾಥ್ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *