ನಾಳೆ ಕೋಟಿಗೊಬ್ಬ-3 ಸಿನಿಮಾ ರಿಲೀಸ್

Public TV
2 Min Read

ಬೆಂಗಳೂರು: ಕಾರಣಾಂತರಗಳಿಂದ ರದ್ದುಗೊಳಿಸಲಾಗಿದ್ದ ಕಿಚ್ಚ ಸುದಿಪ್ ಅಭಿನಯದ ಬಹು ನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾ ನಾಳೆ ರಾಜ್ಯಾದ್ಯಂತ ತೆರೆಕಾಣಲಿದೆ.

2 ವರ್ಷಗಳ ನಂತರ ಸ್ಕ್ರೀನ್ ಮೇಲೆ ಕಿಚ್ಚನನ್ನು ನೋಡಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದ್ದು, ಹಲವಾರು ಚಿತ್ರಮಂದಿರ ಬಳಿ ಜಮಾಯಿಸಿದ್ದ ಅಭಿಮಾನಿಗಳು ಸಿನಿಮಾ ವೀಕ್ಷಿಸಲು ಆಗದೇ ಗಲಾಟೆ ಮಾಡಲು ಶುರುಮಾಡಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಕಿಚ್ಚ ಟ್ವೀಟ್ ಮಾಡುವ ಮೂಲಕ ಶಾಂತಿಯನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.  ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿಳಂಬ- ಅಭಿಮಾನಿಗಳಲ್ಲಿ ಕಿಚ್ಚ ಕ್ಷಮೆ

ಈ ವಿಚಾರವಾಗಿ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಕೋಟಿಗೊಬ್ಬ-3 ವೀಕ್ಷಿಸಲು ಚಿತ್ರಮಂದಿರಗಳಿಗೆ ಬಂದಿರುವವರಿಗೆ, ಬರುತ್ತಿರುವವರಿಗೆ, ಚಿತ್ರದ ಪ್ರದರ್ಶನ ತಡವಾಗುತ್ತಿರುವ ಬಗ್ಗೆ ತಿಳಿಸಲು ವಿಷಾದಿಸುತ್ತೇನೆ. ಈ ಸಮಸ್ಯೆಗೆ ಕಾರಣಕರ್ತರಾದವರ ಪರವಾಗಿ ನಾನು ವೈಯಕ್ತಿಕವಾಗಿ ಕ್ಷಮೆ ಯಾಚಿಸುತ್ತೇನೆ. ಇದರಲ್ಲಿ ಚಿತ್ರಮಂದಿರಗಳಿಂದ ಯಾವುದೇ ರೀತಿಯ ತಪ್ಪು ನಡೆದಿಲ್ಲ. ನಾನೂ ಕೂಡ ನನ್ನ ಚಿತ್ರವೊಂದು ಎರಡು ವರ್ಷಗಳ ನಂತರ ಬಿಡುಗಡೆ ಆಗುತ್ತಿರುವ ಬಗ್ಗೆ ನಿಮ್ಮಷ್ಟೇ ಉತ್ಸುಕನಾಗಿದ್ದೆ. ನಿಮ್ಮೆಲ್ಲರ ಪ್ರೀತಿ ಹಾಗೂ ತಾಳ್ಮೆಯೇ ನನ್ನ ಅತಿ ದೊಡ್ಡ ಶಕ್ತಿ. ಆದಷ್ಟು ಬೇಗ ಚಿತ್ರದ ಪ್ರದರ್ಶನದ ಬಗ್ಗೆ ಮಾಹಿತಿ ಕೊಡುತ್ತೇನೆ ಹಾಗೂ ಮುಂದಿನ ನನ್ನ ಚಿತ್ರಗಳಿಗೆ ಹೀಗಾಗದ ಹಾಗೇ ನೋಡಿಕೊಳ್ಳುತ್ತೇನೆ. ಅಲ್ಲಿಯವರೆಗೂ ಯಾವುದೇ ರೀತಿಯ ಹಾನಿಗೆ ಕಾರಣರಾಗದೆ, ಶಾಂತಿಯನ್ನು ಕಾಪಾಡಿಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕಿಚ್ಚನ ಅಭಿಮಾನಿಗಳಲ್ಲಿ ಸೂರಪ್ಪ ಬಾಬು ಕ್ಷಮೆ

ಕೋಟಿಗೊಬ್ಬ-3 ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ಕಿಚ್ಚ ಧೈರ್ಯ ತುಂಬಿದ್ದು, ಈ ಸಂಬಂಧ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಬಾಬು ಅವರು ಅಪ್ಲೋಡ್ ಮಾಡಿದ ವೀಡಿಯೋ ನಾನು ನೋಡಿದೆ. ನೀವೊಬ್ಬರೇ ಅಲ್ಲ ನಿಮ್ಮ ಜೊತೆ ನಾವಿದ್ದೇವೆ. ಯಾರಿಂದ ತೊಂದರೆ ಆಗಿದೆ, ಯಾರು ಮಾಡಿದ್ದಾರೆ ಅನ್ನೋದು ನಮಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಕಾಲವೇ ಉತ್ತರ ಕೊಡುತ್ತದೆ. ನಾಳೆಯಿಂದ ಪ್ರದರ್ಶನ ಕಾಣುತ್ತದೆ. ಭರ್ಜರಿಯಾಗಿ ಹೋಗುತ್ತದೆ ಅನ್ನೋದ್ರಲ್ಲಿ ಅನುಮಾನ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ನಿಮ್ಮ ಜೊತೆ ನಾವಿದ್ದೇವೆ – ಸೂರಪ್ಪ ಬಾಬುಗೆ ಧೈರ್ಯ ತುಂಬಿದ ಕಿಚ್ಚ

ರಾಜ್ಯಾದ್ಯಂತ ಇಂದು 300 ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ- 3 ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ತಾಂತ್ರಿಕ ದೋಷದಿಂದ ಶೋ ರದ್ದಾಗಿದ್ದು, ರಾಜ್ಯಾದ್ಯಂತ ಕಿಚ್ಚನ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ತಮ್ಮ ನೆಚ್ಚಿನ ನಟನ ಚಿತ್ರಕ್ಕಾಗಿ ಕಾದು ಕುಳಿತಿದ್ದ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ.

Share This Article
Leave a Comment

Leave a Reply

Your email address will not be published. Required fields are marked *