ಕೋಲಾರ: ಲೋಕಸಭಾ ಚುನಾವಾಣೆಯಲ್ಲಿ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡದ ಕಾಂಗ್ರೆಸಿಗರಿಗೆ ಡೆಡ್ ಲೈನ್ ನೀಡಿದ್ದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಮಾಲೂರು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮತನಾಡಿದ ಅವರು, ನನಗೆ ಡೆಡ್ ಲೈನ್ ಕೊಡುವುದಕ್ಕೆ ವೇಣುಗೋಪಾಲ್ ನನ್ನ ಅಣ್ಣನಾ, ಇಲ್ಲ ನಮ್ಮ ಅಪ್ಪನಾ? ಪಕ್ಷದಿಂದ ಉಚ್ಚಾಟನೆ ಮಾಡುವುದಾದರೆ ಮಾಡಲಿ, ನಮಗೇನು ಬೇರೆ ಪಕ್ಷಗಳೇ ಇಲ್ಲವೇ ಎಂದು ಮಂಜುನಾಥ್ ಪ್ರಶ್ನೆ ಮಾಡಿದ್ದಾರೆ.
ನಮ್ಮ ಸ್ವಂತ ಬಲದಿಂದ ನಾವು ಶಾಸಕರಾಗಿರುವುದು, ಪ್ರಜಾಪ್ರಭುತ್ವದಲ್ಲಿ ಭಾರತ ದೇಶದಲ್ಲಿ ಸಾವಿರಾರು ಪಕ್ಷಗಳಿವೆ. ಪಕ್ಷದಿಂದ ಉಚ್ಚಾಟನೆ ಮಾಡುವ ಹಾಗಿದ್ದರೆ ಮಾಡಲಿ ಬಿಡಿ ಎಂದು ಸವಾಲು ಎಸೆದರು.
ಡೆಡ್ ಲೈನ್ ಕೊಟ್ಟರು ಅಂದಾಕ್ಷಣ ಅವರೇನು ನಮ್ಮ ಮನೆಯವರೇ? ಮೊದಲು ಉಚ್ಚಾಟನೆ ಮಾಡುವುದಕ್ಕೆ ಹೇಳಿ, ಯಾರೇ ಹೇಳಿದರೂ ರಾಜಿ ಆಗುವ ಪ್ರಶ್ನೆಯೇ ಇಲ್ಲ. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕೆ.ಎಚ್ ಮುನಿಯಪ್ಪ ಸೋಲಿಸುವುದು ಒಂದೇ ನಮ್ಮ ಗುರಿ ಎಂದರು.
ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್ ಮುನಿಯಪ್ಪ ಅವರಿಗೂ ನೇರ ಸವಾಲ್ ಎಸೆದ ಅವರು, ನನಗೆ ತೊಂದರೆ ಮಾಡಿದ ಮುನಿಯಪ್ಪ ಅವರಿಗೆ ನಾನು ಏಕೆ ಸಹಾಯ ಮಾಡಬೇಕು. ನನ್ನಿಂದ ಅವರಿಗೆ ಬೇರೆ ರೀತಿ ತೊಂದರೆ ಮಾಡುವುದಕ್ಕೆ ಆಗುವುದಿಲ್ಲ. ಕೋರ್ಟ್, ಪೊಲೀಸ್ ಸ್ಟೇಷನ್, ರೌಡಿಯಿಸಂ ಮಾಡುವುದು ನನ್ನ ಕೈಯಲ್ಲಿ ಆಗುವುದಿಲ್ಲ. ಹೀಗಾಗಿ ಜನಗಳ ಹತ್ತಿರ ಹೋಗಿ ಅವರ ವಿರುದ್ಧ ಮತ ಕೇಳುತ್ತಿದ್ದೇನೆ ಎಂದರು.
ಕೆ.ಎಚ್ ಮುನಿಯಪ್ಪ ವಿರುದ್ಧ ಮಾತನಾಡೋದ್ರಿಂದ ಬೆದರಿಕೆ ಬಂದಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಅಂತಹ ಯಾವುದೇ ಕರೆಗಳು ಬಂದಿಲ್ಲ. ಇವತ್ತಿಗೂ ನನ್ನನ್ನು ಬೆದರಿಸುವಷ್ಟು ಧೈರ್ಯ ಯಾರಿಗೂ ಇಲ್ಲ. ನನಗೆ ಬೆದರಿಕೆ ಹಾಕಿದ್ರೆ ಮುಂದಿನ ದಿನ ಗೊತ್ತಾಗುತ್ತದೆ ಎಂದು ನೇರವಾಗಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹೈಕಮಾಂಡ್‍ಗೆ ಸವಾಲು ಹಾಕಿದರು.