ಡೆಡ್ ಸ್ಟೋರೇಜ್ ತಲುಪಿದ ತುಂಗಭದ್ರಾ ಜಲಾಶಯ!

Public TV
1 Min Read

ಕೊಪ್ಪಳ: ತಾಲೂಕಿನ ಮುನಿರಾಬಾದ್ ಬಳಿ ತುಂಗಭದ್ರಾ ನದಿಗೆ (TungaBhadra River) ಅಡ್ಡಲಾಗಿ ತುಂಗಭದ್ರಾ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ಇದೀಗ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಡೆಡ್ ಸ್ಟೋರೇಜ್ ತಲುಪಿದೆ.

ತುಂಗಭದ್ರಾ ಜಲಾಶಯದ ನೀರಿನ ಮೇಲೆಯೇ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಹಕ್ಕಿದ್ದು, ಈ ಡ್ಯಾಂನಲ್ಲಿರುವ ನೀರು, ರಾಜ್ಯದ ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳು ಮತ್ತು ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ಅನೇಕ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ಕೃಷಿಗೆ ಪ್ರಮುಖ ನೀರಿನ ಮೂಲವಾಗಿದೆ. ಆದರೆ 105.79 ಟಿಎಂಸಿ ನೀರು ಸಾಮಾರ್ಥ್ಯದ ಈ ಡ್ಯಾಂ ನಲ್ಲಿ ಸದ್ಯ ಇರೋ ನೀರಿನ ಪ್ರಮಾಣ ಕೇವಲ 3.40 TMC ಮಾತ್ರ. ಅಂದ್ರೆ ಡ್ಯಾಂನ ಒಟ್ಟು ನೀರು ಸಂಗ್ರಹ ಸಾಮಾರ್ಥ್ಯದ 3% ರಷ್ಟು ಮಾತ್ರ ನೀರು ಸದ್ಯ ಡ್ಯಾಂನಲ್ಲಿದೆ.

ಒಂದು ಡ್ಯಾಂನಲ್ಲಿ ಕನಿಷ್ಟ 4 ಟಿಎಂಸಿ ನೀರು ಸಂಗ್ರಹವಿರಬೇಕು ಅನ್ನೋ ನಿಯಮವಿದೆ. ಯಾಕಂದ್ರೆ ಡ್ಯಾಂ ನಲ್ಲಿರುವ ಜಲಚರಗಳು ಮತ್ತು ನದಿಯಲ್ಲಿರುವ ಜಲಚರಗಳು ಬದುಕಬೇಕಾದ್ರೆ ಇಷ್ಟೊಂದು ಪ್ರಮಾಣದ ನೀರನ್ನು ಇಟ್ಟುಕೊಳ್ಳಲೇಬೇಕು. ಆದರೆ ತುಂಗಭದ್ರಾ ಜಲಾಶಯದಲ್ಲಿ ಸದ್ಯ ಇರೋದು ಕೇವಲ 3.40 ಟಿಎಂಸಿ ನೀರು ಮಾತ್ರ.

ಕಳೆದ ವರ್ಷ ಇದೇ ಸಮಯದಲ್ಲಿ ಡ್ಯಾಂನಲ್ಲಿ 3.72 ಟಿಎಂಸಿ ನೀರು ಇತ್ತು. ಅಲ್ಲದೇ ಇದೇ ಸಮಯದಲ್ಲಿ ಡ್ಯಾಂ ಗೆ ನೀರಿನ ಒಳಹರಿವು ಆರಂಭವಾಗಿತ್ತು. ಹೀಗಾಗಿ ಡ್ಯಾಂ ನಲ್ಲಿ ನೀರಿನ ಸಂಗ್ರಹ ಆರಂಭವಾಗಿತ್ತು. ಈ ವರ್ಷ ಡ್ಯಾಂಗೆ ಕಳೆದ ಏಳು ತಿಂಗಳಿಂದ ಒಳ ಹರಿವು ಬಂದಾಗಿದೆ. ಡ್ಯಾಂ ನಲ್ಲಿರುವ ನೀರನ್ನು ಈಗಾಗಲೇ ಕೃಷಿ ಸೇರಿದಂತೆ ಕುಡಿಯುವ ನೀರಿಗೆ ಬಿಟ್ಟಿದ್ದರಿಂದ ಸದ್ಯ ಡ್ಯಾಂನಲ್ಲಿ ಕೇವಲ 3.40 ಟಿಎಂಸಿ ನೀರು ಮಾತ್ರ ಇದೆ. ಅದರಲ್ಲಿ ಡೆಡ್ ಸ್ಟೋರೆಜ್ ಇರೋದು ಎರಡು ಟಿಎಂಸಿ ನೀರು. ಬಳಕೆಗೆ ಬರೋದು ಕೇವಲ 1.40 ಟಿಎಂಸಿ ನೀರು ಮಾತ್ರವಾಗಿದೆ.

Share This Article