ಪಾಳುಬಿದ್ದ ತಾ.ಪಂಚಾಯತ್ ಆವರಣ ಈಗ ಸ್ವಚ್ಛ, ಸುಂದರ ವನ

Public TV
2 Min Read

ಕೊಪ್ಪಳ: ಪ್ರಧಾನಮಂತ್ರಿ ನರೇಂದ್ರ ಮೋದಿ ಅನುಷ್ಠಾನಗೊಳಿಸಿರುವ ಸ್ವಚ್ಛ ಭಾರತ ಯೋಜನೆ ಇಂದು ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಸಾರ್ವಜನಿಕರ ಮನ ಪರಿವರ್ತನೆಗೆ ಪ್ರಮುಖ ಕಾರಣವಾಗಿದೆ. ಅದರಲ್ಲೂ ಕ್ರೀಯಾಶೀಲ ಅಧಿಕಾರಿಗಳಿದ್ದಲ್ಲಿ ಆಯಾ ಇಲಾಖೆಯ ಕೆಲಸ ಕಾರ್ಯಗಳು ಸ್ವಚ್ಛತೆಯೆಡೆಗೆ ಹೆಜ್ಜೆ ಹಾಕುತ್ತದೆ. ಇದಕ್ಕೆ ಪ್ರಮುಖ ಉದಾರಹಣೆ ಕ್ರೀಯಾಶೀಲ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಮೋಹನ್ ಪರಿಕಲ್ಪನೆಯಿಂದ ಹತ್ತಾರು ವರ್ಷಗಳಿಂದ ಪಾಳು ಬಿದ್ದಿದ್ದ ತಾಲೂಕು ಪಂಚಾಯತ್ ಆವರಣ ಈಗ ಸ್ವಚ್ಛ ಮತ್ತು ಸುಂದರ ವನವಾಗುತ್ತಿದೆ.

4 ತಿಂಗಳ ಹಿಂದೆ ಪುನಃ ಕೊಪ್ಪಳದ ಗಂಗಾವತಿ ತಾ.ಪಂಗೆ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ವರ್ಗವಾಗಿ ಬಂದಿರುವ ಡಾ. ಮೋಹನ್ ಅವರು ತಾ.ಪಂ ಕಚೇರಿ ಸುತ್ತಲೂ ಇರುವ ಸಿಬ್ಬಂದಿ ವಸತಿ ಗೃಹ ಮತ್ತು ಇನ್ನಿತರ ಕಟ್ಟಡಗಳ ಸುತ್ತಲು ಸ್ವಚ್ಚತೆ ಮಾಡಿ ಸುಂದರ ವನವನ್ನಾಗಿಸುವಲ್ಲಿ ಕಳೆದ ಒಂದು ತಿಂಗಳಿಂದ ಕ್ರೀಯಾಶೀಲರಾಗಿ ಕೆಲಸ ಮಾಡಿಸುತ್ತಿದ್ದಾರೆ. ಮತ್ತು ಸ್ವತಃ ಇಓ ಡಾ. ಮೋಹನ್ ಬೆಳ್ಳಂಬೆಳಗ್ಗೆ ಸ್ವಚ್ಛತೆಯಲ್ಲಿ ನಿರತರಾಗುತ್ತಾರೆ. ತಮ್ಮ ಮೇಲಾಧಿಕಾರಿಯ ಕ್ರೀಯಾಶೀಲತೆಗೆ ಮನಸೋತ ತಾ.ಪಂ ವ್ಯಾಪ್ತಿಯ ಎಲ್ಲಾ ಗ್ರಾ.ಪಂ ಪಿಡಿಓಗಳು, ಇನ್ನಿತರ ಸಿಬ್ಬಂದಿ ಪ್ರತಿ ನಿತ್ಯ ಒಂದು ಗಂಟೆ ಇಲ್ಲಿಗೆ ಬಂದು ಸ್ವಚ್ಛತೆಯ ಕಾಯಕ ಕೈಗೊಂಡು ಇಓ ಕ್ರೀಯಾಶೀಲತೆಗೆ ಕೈ ಜೋಡಿಸಿದ್ದಾರೆ.

ಸುಂದರ ವನ: ಗಂಗಾವತಿ ಹೃದಯ ಭಾಗ ಮತ್ತು ಬಸ್ ನಿಲ್ದಾಣದ ಎದುರಿಗೆ ಪಂಚಾಯತ್ ರಾಜ್ ಇಲಾಖೆಯ ತಾ.ಪಂ ಕಚೇರಿ ಇದೆ. ಸುಮಾರು ಹತ್ತು ಎಕರೆ ವಿಸ್ತೀರ್ಣ ಹೊಂದಿರುವ ಈ ಕಚೇರಿ ಆವರಣದಲ್ಲಿ ಸಿಬ್ಬಂದಿ ವಸತಿ ಗೃಹಗಳು, ಸುಸಜ್ಜಿತ ಮಂಥನ ಸಭಾಂಗಣ, ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನ, ಸಾರ್ವಜನಿಕ ಗ್ರಂಥಾಲಯ, ಪಂಚಾಯತ್ ರಾಜ್ ಇಲಾಖೆ ನೌಕರ ಸಂಘದ ಕಚೇರಿ ಕಟ್ಟಡ, ಸಾಹಿತ್ಯ ಭವನ, ಶ್ರೀಕೃಷ್ಣದೇವರಾಯ ಸಮುದಾಯ ಭವನ, ತರಬೇತಿ ಕೇಂದ್ರ ಹೀಗೆ ಹತ್ತಾರು ಕಟ್ಟಡಗಳು ಇಲ್ಲಿ ತಲೆ ಎತ್ತಿ ನಿಂತಿವೆ. ಆದರೆ ಈ ಕಟ್ಟಡ ಸುತ್ತಲೂ ಅನೈರ್ಮಲ್ಯದಿಂದಾಗಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿತ್ತು. ತಮ್ಮ ಇಲಾಖೆಯಿಂದ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಸ್ವಚ್ಛ ಭಾರತ ಯೋಜನೆ ಕೈಗೊಂಡಿದ್ದರೂ ಇಲಾಖೆಯ ಕಚೇರಿ ಬುಡದಲ್ಲಿ ಮಾತ್ರ ಸ್ವಚ್ಛತೆ ಕೊರತೆ ಇರುವುದು ಪಂಚಾಯತ್ ರಾಜ್ ಇಲಾಖೆಗೆ ಕಪ್ಪು ಚುಕ್ಕೆ ಎಂಬುದನ್ನು ಮನಗಂಡು ಈಗ ತಾಪಂ ಆವರಣ ಸಂಪೂರ್ಣ ಸುತ್ತಲೂ ಸ್ವಚ್ಛತೆಗೆ ಮುಂದಾಗಿದ್ದಾರೆ.

ಅತ್ಯುತ್ತಮ ಕಾರ್ಯ: ತಾ.ಪಂ ಆವರಣದಲ್ಲಿ ಸಾಕಷ್ಟು ಸ್ಥಳವಿದ್ದರೂ ಕೇವಲ ಮರಗಳು ಬಿಟ್ಟರೆ ಇಲ್ಲಿ ಸ್ವಚ್ಛತೆಗೆ ಗಮನ ಕೊಡುವ ಮನಸ್ಸು ಯಾರು ಮಾಡಿದ್ದಿಲ್ಲ. ರಾತ್ರಿಯಾದರೆ ಆವರಣ ಪುಂಡ-ಪೊಕರಿಗಳ ತಾಣವಾಗಿ, ಕುಡಕರ ಅಡ್ಡೆಯಾಗಿ ಹಂದಿಗಳ ವಿಶ್ರಾಂತಿ ತಾಣವಾಗುತ್ತಿತ್ತು. ಆದರೆ ಈಗ ಡಾ. ಮೋಹನ್ ಅವರ ಪರಿಕಲ್ಪನೆಯಿಂದಾಗಿ ಆವರಣ ಸಂಪೂರ್ಣ ಬದಲಾಗುತ್ತಿದೆ. ತಾಪಂ ಕಚೇರಿ ಹಿಂದೆ ಸಿಬ್ಬಂದಿ ಕುಟುಂಬಸ್ಥರಿಗೆ ವಿಶ್ರಾಂತಿ ಪಡೆಯುವುದಕ್ಕಾಗಿ ಸುಂದರವಾದ ಚಿಕ್ಕ ಮತ್ತು ಚೊಕ್ಕದಾದ ಪಾರ್ಕ್ ಆಗುತ್ತಿದೆ. ಜೊತೆಗೆ ಸಭಾಂಗಣ, ಪತ್ರಿಕಾ ಭವನ ಸೇರಿದಂತೆ ಸುತ್ತಲೂ ಎಲ್ಲಾ ಕಸ, ಮುಳ್ಳು, ಕಂಟಿಗಳನ್ನು ತೆಗೆದು ಮಣ್ಣು ಹಾಕಿ ಸ್ವಚ್ಚತೆ ಮಾಡಲಾಗಿದೆ. ಇದರಿಂದ ಈಗ ಸಿಬ್ಬಂದಿಯಲ್ಲಿ ತಮ್ಮ ಮೇಲಾಧಿಕಾರಿಗಳ ಕ್ರೀಯಾಶೀಲತೆಯಿಂದಾಗಿ ಮತ್ತಷ್ಟು ವಿಶ್ವಾಸ ಮೂಡಿದೆ. ಒಬ್ಬ ಅಧಿಕಾರಿ ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಇಂದು ತಾ.ಪಂ ಆವರಣ ಗಮನಿಸಿದ ಪ್ರತಿಯೊಬ್ಬ ನಾಗರಿಕರನ ಮನಸ್ಸಿನಲ್ಲಿ ಈ ಭಾವನೆ ಮೂಡುತ್ತದೆ. ಕ್ರೀಯಾಶೀಲ ಅಧಿಕಾರಿಗಳಿಗೆ ಪಿಡಿಓ ಮತ್ತು ಸಿಬ್ಬಂದಿ ಸಾಥ್ ನೀಡಿದ್ದು, ಸ್ವಚ್ಛತೆಯ ಕಡೆ ಹೆಜ್ಜೆ ಹಾಕಿರುವ ತಾ.ಪಂ ಆವರಣಕ್ಕೆ ಬರುವ ಸಾರ್ವಜನಿಕರು ಕೂಡ ನೈರ್ಮಲ್ಯ ಕಾಪಾಡುವಲ್ಲಿ ಮುಂದಾಗಬೇಕೆಂಬುದು ಆಶಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *