ರಥದ ಚಕ್ರ ಇರಿಸು ಮುರಿದು ಸ್ವಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ

Public TV
1 Min Read

ಕೊಪ್ಪಳ: ರಥದ ಚಕ್ರ ಮಧ್ಯದ ಕಟ್ಟಿಗೆಯ ಇರಿಸು ಮುರಿದು ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದ ಘಟನೆ ಕೊಪ್ಪಳದಲ್ಲಿ ನೆಡದಿದೆ.

ಐತಿಹಾಸಿ ರಥೋತ್ಸವ ಎಂದೇ ಪ್ರಖ್ಯಾತಿ ಪಡೆದ ಕನಕಗಿರಿ ಕನಕರಾಯನ ರಥೋತ್ಸವದಲ್ಲಿ ಇಂದು ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ತಕ್ಷಣವೇ ಎಚ್ಚೆತ್ತುಕೊಂಡ ಕೆಲವರು ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.

ಆಗಿದ್ದೇನು?:
ಕನಕರಾಯನ ಜಾತ್ರೆ ನಿಮ್ಮಿತ್ತ ಅದ್ಧೂರಿ ರಥೋತ್ಸವ ನಡೆದಿತ್ತು. ದಾರಿಯ ಮಧ್ಯದಲ್ಲಿ ರಥದ ಒಂದು ಗಾಲಿಯ ಕಟ್ಟಿಗೆ ಇರಿಸು ಮುರಿದಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಕೆಲವರು ರಥಕ್ಕೆ ಭಾರೀ ಅನಾಹುತವನ್ನು ತಡೆದಿದ್ದಾರೆ. ಬಳಿಕ ರಥದಲ್ಲಿದ್ದ ಪೂಜಾರಿಗಳನ್ನು ಕೆಳಗೆ ಇಳಿಸಿ, ರಥಕ್ಕೆ ಆಸರೆಯಾಗಿ ಕಂಬಗಳನ್ನು ಇಟ್ಟು ಯಾವುದೇ ದುರಂತ ನಡೆಯದಂತೆ ಕ್ರಮಕೈಗೊಂಡಿದ್ದಾರೆ. ಆದರೆ ರಥೋತ್ಸವ ನೋಡಲು ಬಂದ ಸಾವಿರಾರು ಭಕ್ತರಿಗೆ ಘಟನೆ ನಿರಾಶೆ ಮೂಡಿಸಿದೆ.

ಅರ್ಧ ದಾರಿಯಲ್ಲೇ ನಿಂತ ರಥಕ್ಕೆ ನಾಳೆ ಬೆಳಗ್ಗೆ ಹೋಮ ಹವನ ಮಾಡಿಸಲಾಗುವುದು. ನಂತರ ಭಕ್ತರು ರಥವನ್ನು ಎಳೆದು ಪಾದಗಟ್ಟಿ ಮುಟ್ಟಿಸಲಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಅನಾಹುತದ ಬಗ್ಗೆ ಮೊದಲೇ ತಿಳಿದಿತ್ತು?:
ಕನಕರಾಯನ ರಥವು ಬಹಳ ವರ್ಷಗಳದ್ದಾಗಿದೆ. ಹೀಗಾಗಿ ಕಳೆದ ಎರಡು ವರ್ಷಗಳಿಂದ ರಥೋತ್ಸವದ ವೇಳೆ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಆದರೂ ಜಿಲ್ಲಾಡಳಿತ ಸಮಸ್ಯೆ ಬಗೆಹರಿಸುವ ಬಗ್ಗೆ ನಿರ್ಲಕ್ಷ್ಯವಹಿಸಿದ್ದರು. ರಥ ಬಹಳ ಹಳೆಯದಾಗಿದ್ದರಿಂದ ಅವಘಡ ಸಂಭವಿಸುತ್ತದೆ ಎಂದು ದೇವಸ್ಥಾನದ ಆಡಳಿತಕ್ಕೆ ಮೊದಲೇ ಗೊತ್ತಿತ್ತು. ಹೀಗಾಗಿ ರಥಕ್ಕೆ ಇನ್ಸೂರೆನ್ಸ್ ಮಾಡಿಸುವ ಚಿಂತನೆ ಕೂಡ ನಡೆಸಿದ್ದರಂತೆ.

ಘಟನೆ ಬಗ್ಗೆ ಗೊತ್ತಿದ್ದರೂ ರಥೋತ್ಸವ ನಡೆಸಿದ್ದಾರೆ. ದೇವಸ್ಥಾನ ಆಡಳಿತ ಮಂಡಳಿ ನಿರ್ಲಕ್ಷ್ಯೆ ತೋರಿದ್ದಾರೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *