ಗುಂಡಿಗಳಾದ ರಸ್ತೆಗಳು- ಶಾಸಕರು ಮಾತ್ರ ಮೌನ

Public TV
2 Min Read

ಕೊಪ್ಪಳ: ಕನಕಗಿರಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಹಾಳಾಗಿದ್ದು, ರಸ್ತೆ ದುಸ್ಥಿತಿ ಕಂಡು ಜನರು ಹೈರಾಣಾಗಿದ್ದಾರೆ.

ಕನಕಗಿರಿ ಸಮೀಪದ ಹಿರೇಖೇಡ, ಚಿಕ್ಕಖೇಡ, ನಿರಲೂಟಿ, ಗುಡದೂರು, ಮಲ್ಲಿಗೆವಾಡ, ಹುಲಿಹೈದರ್, ಗೋಡಿನಾಳ, ಹೊಸಗುಡ್ಡ, ಹುಲಿಹೈದರ್, ಕಲಕೇರಿ ಗ್ರಾಮದಿಂದ ಜೀರಾಳ, ಚಿಕ್ಕಡಂಕನಕಲ್, ನವಲಿ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲದಂತೆ ಗ್ರಾಮಗಳ ಹದಗೆಟ್ಟ ರಸ್ತೆಗಳ ಪಟ್ಟಿ ದೊರೆಯುತ್ತದೆ. ಬಿಜೆಪಿಯ ಬಸವರಾಜ ದಡೇಸುಗೂರು ಶಾಸಕರಾಗಿ ಆಯ್ಕೆಯಾಗಿ 2 ವರ್ಷ ಸಮೀಪಿಸುತ್ತಾ ಬಂದರೂ ರಸ್ತೆಗಳ ಅಭಿವೃದ್ಧಿಗೆ ನಯಾ ಪೈಸೆ ಅನುದಾನ ಬಿಡುಗಡೆಗೊಳಿಸಿಲ್ಲ.

ಈ ಹಿಂದೆ ಜೆಡಿಎಸ್, ಕಾಂಗ್ರೆಸ್ ದೋಸ್ತಿ ಸರ್ಕಾರದಲ್ಲಿ ಲೋಕೋಪಯೋಗಿ, ನೀರಾವರಿ, ಸಾರಿಗೆ ಸೇರಿದಂತೆ ನಾನಾ ಇಲಾಖೆಯ ಸಚಿವರನ್ನು ಭೇಟಿ ಮಾಡಿ ಸನ್ಮಾನಿಸಿದ್ದು ಬಿಟ್ಟರೆ ಶಾಸಕರಿಂದ ನಯಾ ಪೈಸೆ ಬಿಡುಗಡೆಗೊಳಿಸುವ ಕೆಲಸ ಮಾತ್ರ ಆಗಿಲ್ಲ. ಈಗ ತಮ್ಮ ಆಡಳಿತ ಪಕ್ಷ ಇದ್ದರೂ ಸಹ ಆಡಳಿತಕ್ಕೆ ಚುರುಕು ಮುಟ್ಟಿಸುತ್ತಿಲ್ಲ. ಶಾಸಕರು ಹೊರ ಯೋಜನೆ, ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸಿಕೊಂಡು ಬರುತ್ತಿಲ್ಲ ಬದಲಾಗಿ ಈ ಹಿಂದೆ ಇದ್ದ ಸರ್ಕಾರದ ಕೆಲಸವನ್ನೇ ಮುಂದುವರೆಸಿಕೊಂಡು ಬರುತ್ತಿದ್ದಾರೆ ಎನ್ನುವ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.

ಕನಕಗಿರಿ ಭಾಗದ ಹಲವು ಗ್ರಾಮಗಳ ಮುಖ್ಯ ರಸ್ತೆಗಳ ಸಂಪೂರ್ಣ ಹದಗೆಟ್ಟಿದ್ದರೂ ದುರಸ್ಥಿಗೆ ಕ್ರಮಕೈಗೊಳ್ಳುತ್ತಿಲ್ಲ. ಹಿರೇಖೇಡ, ಗುಡದೂರು ಗ್ರಾಮದಿಂದ ಹುಲಿಹೈದರ್, ಗೋಡಿನಾಳ, ಜೀರಾಳ, ನವಲಿ, ಚಿಕ್ಕಡಂಕನಕಲ್, ಉಮಳಿಕಾಟಾಪುರ, ವಡಕಿ, ಚರ್ಚಿನಗುಡ್ಡತಾಂಡ ಸೇರಿದಂತೆ ಹಲವು ರಸ್ತೆಗಳಲ್ಲಿ ದೊಡ್ಡ, ದೊಡ್ಡ ಕಂದಕ ಬಿದ್ದು ರಸ್ತೆ ಸಂಪೂರ್ಣ ಹದಗೆಟ್ಟಿವೆ ಮಳೆಗಾಲದಲ್ಲಿ ರಸ್ತೆಯ ಪರಿಸ್ಥಿತಿ ಹೇಳತಿರದಂತಾಗಿದೆ. ಶಾಸಕ ಬಸವರಾಜ ದಡೇಸುಗೂರು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ದುರಸ್ಥಿಗೆ ಕ್ರಮಕೈಗೊಳ್ಳುತ್ತಿಲ್ಲ.

ಇತ್ತ ಹಿರೇಖೇಡ, ನಿರರ್ಲೂಟಿ, ಚಿಕ್ಕಖೇಡ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಅಕ್ರಮ ಮರಳು ಲಾರಿ, ಟ್ರ್ಯಾಕ್ಟರ್ ಸಂಚಾರದಿಂದ ರಸ್ತೆ ಮತ್ತಷ್ಟು ಹಳ್ಳ ಹಿಡಿದಿದೆ. ಹಾಳಾಗಿರುವ ರಸ್ತೆಗಳಿಂದ ಕ್ಷೇತ್ರದ ನಾನಾ ಗ್ರಾಮೀಣ ಭಾಗಕ್ಕೆ ಬಸ್‍ಗಳ ಸಂಚಾರ ಸ್ಥಗಿತಗೊಂಡಿವೆ.

ಕಾಟಾಪುರದಿಂದ ಮಲ್ಲಿಗೆವಾಡಕ್ಕೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಗುಡದೂರು ಗ್ರಾಮದಿಂದ ಗೋಡಿನಾಳ ಗ್ರಾಮಕ್ಕೆ ಬರುತ್ತಿದ್ದ ಬಸ್ ಮಾರ್ಗ ಬದಲಿಸಿದೆ. ಗುಡದೂರು ಗ್ರಾಮದಿಂದ ಹೊಸಗುಡ್ಡಕ್ಕೆ ಹಾಗೂ ಲಾಯದುಣಿಸಿ, ಕರಡಿಗುಡ್ಡ ಗ್ರಾಮದ ಬಸ್ ಸಂಚಾರ ಸ್ಥಗಿತಗೊಂಡಿದೆ. ಬಹುತೇಕ ಗ್ರಾಮೀಣ ಭಾಗದ ಜನರು, ವಿದ್ಯಾರ್ಥಿಗಳು ಗಂಗಾವತಿ, ಕನಕಗಿರಿಯ ಶಾಲಾ ಕಾಲೇಜಿಗೆ ತೆರಳಬೇಕಿರುವ ಕಾರಣ ಕಾಲ್ನಡಿಗೆ ಅಥವಾ ಖಾಸಗಿ ವಾಹನವನ್ನು ಅವಲಂಬಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *