11 ತಿಂಗಳ ಪೋರಿಗೆ ಸಕ್ಕರೆ ಕಾಯಿಲೆ- 3 ವರ್ಷದ ಮಗನಿಗೆ ಹೃದಯದ ಸಮಸ್ಯೆ

Public TV
2 Min Read

-ಫ್ರಿಡ್ಜ್ ಇಲ್ಲದೇ ಮಡಿಕೆಯಲ್ಲಿ ಔಷಧಿ ಇರಿಸೋ ತಂದೆ
-ಸಹಾಯದ ನಿರೀಕ್ಷೆಯಲ್ಲಿ ಬಡ ದಂಪತಿ

ಕೊಪ್ಪಳ: ಹೊಟ್ಟೆ ತುಂಬ ಬೇಕಾದ್ರೆ ಪ್ರತಿದಿನ ದುಡಿಯಲೇ ಬೇಕು. ಅಂತಹ ಬಡಕುಟುಂಬದ ದಂಪತಿಗೆ ಮುದ್ದಾದ ಎರಡು ಕಂದಮ್ಮಗಳಿವೆ. ಬಡತನವಿದ್ದರೆ ಪರವಾಗಿಲ್ಲ ಹೇಗೋ ಜೀವನ ನಡೆಸಬಹುದಿತ್ತು. ಆದರೆ ದಂಪತಿಯ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದು, ಕುಟುಂಬ ಸಹಾಯದ ನಿರೀಕ್ಷೆಯಲ್ಲಿದೆ.

ದುರ್ಗಪ್ಪ ಮತ್ತು ಸಣ್ಣ ಮರೆಕ್ಕ ದಂಪತಿ ಜಿಲ್ಲೆಯ ಗಂಗಾವತಿ ನಗರದಲ್ಲಿರುವ ಪುಟ್ಟ ಗುಡಿಸಲಲ್ಲಿ ವಾಸವಾಗಿದ್ದಾರೆ. ದುರ್ಗಪ್ಪ ಮೀನು ಮಾರಾಟದ ವ್ಯಾಪಾರ ನಡೆಸುತ್ತಿದ್ದಾರೆ. ಈ ವ್ಯಾಪಾರದಿಂದಲೇ ಬಂದ ಹಣದಿಂದ ಕುಟುಂಬದ ನಿರ್ವಹಣೆ ನಡೆಯುತ್ತಿತ್ತು. ದಂಪತಿಯ ಇಬ್ಬರು ಮಕ್ಕಳು ಆನಾರೋಗ್ಯದಿಂದ ಬಳಲುತ್ತಿದ್ದಾರೆ. ಮೂರು ವರ್ಷದ ಮಗ ಹನುಮೇಶ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೆ, 11 ತಿಂಗಳ ದೀಪಿಕಾಗೆ ಸಕ್ಕರೆ ಅಂಶ ಕಡಿಮೆ ಆಗುತ್ತಿರುತ್ತದೆ.

11 ತಿಂಗಳ ಪುಟಾಣಿ ದೀಪಿಕಾಗೆ ದಿನಕ್ಕೆ ನಾಲ್ಕು ಬಾರಿ ರಕ್ತ ಪರೀಕ್ಷೆ ನಡೆಸಿ ಸಕ್ಕರೆ ಅಂಶವನ್ನು ಪರಿಶೀಲಿಸಬೇಕು. ಹಾಗೆಯೇ ಪ್ರತಿದಿನ ಇನ್ಸುಲಿನ್ ಇಂಜೆಕ್ಷನ್ ನೀಡಬೇಕು. ರಕ್ತ ಪರೀಕ್ಷೆ ಮತ್ತು ಇಂಜೆಕ್ಷನ್ ನೀಡಲು ಆಸ್ಪತ್ರೆಗೆ ಹೋದರೆ ನೂರಾರು ರೂಪಾಯಿ ಹಣ ನೀಡಬೇಕು. ಆದ್ದರಿಂದ ತಂದೆ ಮನೆಯಲ್ಲಿ ಮಗಳಿಗೆ ಇಂಜೆಕ್ಷನ್ ಮತ್ತು ರಕ್ತ ಪರೀಕ್ಷೆ ನಡೆಸುತ್ತಾರೆ. ಸಕ್ಕರೆ ಅಂಶ ಕಡಿಮೆ ಆದಾಗ ದೀಪಿಕಾಗೆ ಇಂಜೆಕ್ಷನ್ ನೀಡೋದು ಅನಿವಾರ್ಯವಾಗಿದೆ.

ದೀಪಿಕಾಗೆ ಸಕ್ಕರೆ ಅಂಶ ಕಡಿಮೆಯಾದ್ರೆ ಪಿಟ್ಸ್ ಬರುತ್ತೆ. ಹಾಗಾಗಿ ಆಕೆಯ ಸಕ್ಕರೆ ಅಂಶದ ಬಗ್ಗೆ ಪೋಷಕರು ಗಮನ ನೀಡಲೇಬೇಕು. ಮಕ್ಕಳ ಆರೋಗ್ಯ ನೋಡುತ್ತಾ ದುರ್ಗಪ್ಪ ಮನೆಯಲ್ಲಿ ಕುಳಿತರೆ ಹೊಟ್ಟೆ ತುಂಬಲ್ಲ. ಈಗಾಗಲೇ ಮಗಳ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ವ್ಯಯ ಮಾಡಿ ಸಾಲಗಾರರಾಗಿದ್ದಾರೆ. ಪ್ರತಿದಿನ ದೀಪಿಕಾಗೆ ಇಂಜೆಕ್ಷನ್ ನೀಡಬೇಕಾಗಿದ್ದರಿಂದ ನೂರಾರು ರೂಪಾಯಿ ಹಣ ಖರ್ಚು ಮಾಡಬೇಕು. ವೈದ್ಯರು ನೀಡಿರುವ ಇಂಜೆಕ್ಷನ್ ಗಳನ್ನು ಫ್ರಿಡ್ಜ್ ನಲ್ಲಿ ಇರಿಸುವಂತೆ ಹೇಳಿದ್ದಾರೆ. ವಿದ್ಯುತ್ ಸಂಪರ್ಕವೇ ಇಲ್ಲದ ಈ ಜೋಪಡಿಯಲ್ಲಿ ಫ್ರಿಡ್ಜ್ ಕನಸಿನ ಮಾತು. ಹಾಗಾಗಿ ಇಂಜೆಕ್ಷನ್ ಗಳನ್ನು ಮಡಿಕೆಯಲ್ಲಿ ಇಡುತ್ತೇವೆ ಎಂದು ದುರ್ಗಪ್ಪ ಹೇಳುತ್ತಾರೆ.

ಇದೊಂದು ಅನುವಂಶಿಕ ಕಾಯಿಲೆಯಾಗಿದ್ದು, ಸಕ್ಕರೆ ಅಂಶ ಕಡಿಮೆ ಆಯ್ತು ಅಂದ್ರೆ ಮಕ್ಕಳಿಗೆ ಪಿಟ್ಸ್ ಬರುವ ಸಾದ್ಯತೆ ಇದೆ. ಈ ಕಾಯಿಲೆ ಲಕ್ಷ ಮಕ್ಕಳಿಗೆ ಒಂದರಿಂದ ಇಬ್ಬರಲ್ಲಿ ಮಾತ್ರ ಕಾಣಿಸುತ್ತದೆ. ನಾವು ಪ್ರಾಥಮಿಕ ಚಿಕಿತ್ಸೆ ನೀಡಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ಸೂಚಿಸಲಾಗಿತ್ತು. ದಂಪತಿ ಮಗಳನ್ನು ಕರೆದುಕೊಂಡು ಹೋದಾಗ ದೀಪಿಕಾಗೆ ಸಕ್ಕರೆ ಅಂಶ ಕಡಿಮೆ ಇರೋದು ಗೊತ್ತಾಗಿದೆ. ಪ್ರತಿದಿನ ದೀಪಿಕಾಗೆ ಚಿಕಿತ್ಸೆ ನೀಡಬೇಕು. ಇಲ್ಲವಾದ್ರೆ ಅದು ಆಕೆಯ ಪ್ರಾಣಕ್ಕೆ ಅಪಾಯ ಎಂದು ಡಾ.ಅಮರೇಶ್ ಪಾಟೀಲ್ ಹೇಳುತ್ತಾರೆ.

ಇಬ್ಬರು ಮಕ್ಕಳಿಗೂ ಪ್ರತಿದಿನ ಔಷಧಿಯ ಉಪಚಾರ ಬೇಕಿದೆ. ಈಗಾಗಲೇ ಮಗಳ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿರುವ ದುರ್ಗಪ್ಪ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *