ಭೂ ಸೇನಾ ನಿಗಮದಿಂದ ರುದ್ರಭೂಮಿಯಲ್ಲಿ ಪಶು ಆಸ್ಪತ್ರೆ – ಗ್ರಾಮಸ್ಥರ ವಿರೋಧ

Public TV
2 Min Read

ಕೊಪ್ಪಳ: ಇಡೀ ಗ್ರಾಮಕ್ಕೆ ಇರುವ ಏಕೈಕ ರುದ್ರಭೂಮಿಯಲ್ಲಿಯೇ ಸರ್ಕಾರಿ ಕಟ್ಟಡವೊಂದು ಅನಧಿಕೃತವಾಗಿ ನಿರ್ಮಾಣವಾಗುತ್ತಿದ್ದು ಅಂತ್ಯಸಂಸ್ಕಾರವನ್ನು ಎಲ್ಲಿ ಮಾಡಬೇಕೆಂಬ ಆತಂಕದಲ್ಲಿ ತಾಲೂಕಿನ ಹಗೇದಾಳ ಗ್ರಾಮಸ್ಥರು ಚಿಂತೆಗೀಡಾಗಿದ್ದಾರೆ.

ಪಕ್ಕದ ಚೆಳ್ಳೂರು ಗ್ರಾಮಕ್ಕೆ ಮಂಜೂರಾದ ಪಶು ಆಸ್ಪತ್ರೆ ಹಗೇದಾಳ ಗ್ರಾಮದ ಸ್ಮಶಾನ ಭೂಮಿಯಲ್ಲಿ ನಿರ್ಮಾಣವಾಗುತ್ತಿರುವುದರಿಂದ ಈ ಸಮಸ್ಯೆ ಉದ್ಭವವಾಗಿದೆ. ಗ್ರಾಮದಲ್ಲಿರುವ ಏಕೈಕ ಸ್ಮಶಾನವನ್ನು ಅತಿಕ್ರಮಣವಾಗಿ ಸರ್ಕಾರವೇ ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿರುವುದರಿಂದ ಕೊಪ್ಪಳದ ಕಾರಟಗಿ ತಾಲೂಕಿನ ಹುಳ್ಕಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಗೇದಾಳ ಗ್ರಾಮಸ್ಥರು ಅಧಿಕಾರಿಗಳ ದೌರ್ಜನ್ಯ ವಿರೋಧಿಸಿ ಹೋರಾಟಕ್ಕೆ ಸಿದ್ಧವಾಗಿದ್ದಾರೆ.

ಹಗೇದಾಳ ಗ್ರಾಮ ಸ್ಮಶಾನ ಭೂಮಿಯಲ್ಲಿ ಇದೀಗ ತಲೆ ಎತ್ತುತ್ತಿರುವ ಕಟ್ಟಡ ಪಶು ಆಸ್ಪತ್ರೆ ಎಂದು ಹೇಳಲಾಗಿದೆ. ಹಗೇದಾಳ ಗ್ರಾಮಕ್ಕೆ ಯಾವುದೇ ಸರ್ಕಾರಿ ಯೋಜನೆ ಮಂಜೂರಾಗಿಲ್ಲ. ಚೆಳ್ಳೂರು ಗ್ರಾಮಕ್ಕೆ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸರ್ಕಾರ 38 ಲಕ್ಷ ರೂ. ಅನುದಾನ ನೀಡಿದೆ. ಕಳೆದ ನವೆಂಬರ್‍ನಲ್ಲಿ ಕನಕಗಿರಿ ಕ್ಷೇತ್ರ ಶಾಸಕ ಬಸವರಾಜ್ ದಢೇಸ್ಗೂರು ಸೇರಿದಂತೆ ಅಧಿಕಾರಿಗಳು ಎಲ್ಲರೂ ಪಶು ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.

ಒಂದು ಊರಿನ ಯೋಜನೆಯನ್ನು ಅಧಿಕಾರಿಗಳು ಮತ್ತೊಂದೂರಿನಲ್ಲಿ ಅನುಷ್ಠಾನ ಮಾಡುತ್ತಿದ್ದು ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಈಗ ಕಟ್ಟುತ್ತಿರುವ ಕಟ್ಟಡ ಹಗೇದಾಳದಲ್ಲಿ ಇರುವುದರಿಂದ ಚೆಳ್ಳೂರು ಗ್ರಾಮಕ್ಕೆ ಈ ಆಸ್ಪತ್ರೆ ಅತೀ ದೂರವಾಗುತ್ತಿದೆ. ಹಗೇದಾಳ ಗ್ರಾಮದ ಸರ್ವೇ ನಂ.71/1ರಲ್ಲಿ 3 ಎಕರೆ 22 ಗುಂಟೆ ಭೂಮಿ ಸ್ಮಶಾನಕ್ಕೆ ಸೇರಿದೆ. ಸುತ್ತಲಿನ ಪ್ರದೇಶ ಒತ್ತುವರಿಯಾಗಿದ್ದು ಇರುವ ಸ್ವಲ್ಪ ಭೂಮಿಯಲ್ಲಿಯೇ ಗ್ರಾಮಸ್ಥರ ಅಂತ್ಯ ಸಂಸ್ಕಾರಗಳು ನಡೆಯುತ್ತವೆ. ಇಂಥ ಅಲ್ಪಸ್ವಲ್ಪ ಭೂಮಿಯಲ್ಲಿಯೇ ಭೂಸೇನಾ ನಿಗಮದ ಅಧಿಕಾರಿಗಳೇ ಅಕ್ರಮವಾಗಿ ಒತ್ತುವರಿ ಮಾಡಿ ಕಟ್ಟಡ ಕಟ್ಟುವುದು ಯಾವ ನ್ಯಾಯ ಎಂದು ಗ್ರಾಮಸ್ಥರ ಪ್ರಶ್ನೆ.

ನಮ್ಮೂರಿನ ಸುಡುಗಾಡಿಯಲ್ಲಿ ಭೂ ಸೇನೆ ನಿಗಮದ ಎಂಜಿನಿಯರ್ ಚಿಂಚೊಳ್ಳಿಕರ್ ಮತ್ತು ದೇವರಾಜ್ ದೌರ್ಜನ್ಯದಿಂದ ಈ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಹಲವು ಬಾರಿ ಮಾತನಾಡಿದರೂ ಸರಿಯಾಗಿ ಉತ್ತರಿಸುತ್ತಿಲ್ಲ. ಸರ್ಕಾರಿ ಕೆಲಸ ಅಡ್ಡಿ ಪಡಿಸಿದರೆ ನಿಮ್ಮ ಮೇಲೆ ಕೇಸ್ ಹಾಕಬೇಕಾಗುತ್ತೆ. ಹೋಗಿ ಎಂಎಲ್‍ಎ ನಾ ಕೇಳ್ರಿ ಎಂದು ಅವಾಜ್ ಹಾಕ್ತಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಕಂದಾಯ ಅಧಿಕಾರಿಗಳು ಹೇಳೋದು ಏನು?
ಹಗೇದಾಳ ಗ್ರಾಮದ ಸ್ಮಶಾನಕ್ಕಾಗಿ ಉಪಯೋಗಿಸುತ್ತಿರುವ ಜಮೀನಿನಲ್ಲಿ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಭೂಮಿಯನ್ನು ಮಂಜೂರು ಮಾಡಿಲ್ಲ ಎಂದು ಕಾರಟಗಿ ತಹಶೀಲ್ದಾರ್ ದೃಢೀಕರಿಸಿದ್ದಾರೆ. ಅಲ್ಲದೇ ಹಗೇದಾಳ ಗ್ರಾಮದಲ್ಲಿ ಪಶು ವೈದ್ಯಕೀಯ ಕೇಂದ್ರಕ್ಕೆ ಯಾವುದೇ ಸರ್ಕಾರಿ ಜಮೀನನ್ನು ಮಂಜೂರಿ ಮಾಡಿಲ್ಲವೆಂದು ತಮ್ಮ ಹಿಂಬರಹದಲ್ಲಿ ಸ್ಪಷ್ಟಪಡಿಸಿದ್ದಾರೆ.

ಈ ಎಲ್ಲ ವಿರೋಧದ ನಡುವೆ ಚೆಳ್ಳೂರು ಪಶು ಆಸ್ಪತ್ರೆಯ ವೈದ್ಯರು ಈ ನಿರ್ಮಾಣ ಹಂತದ ಕಟ್ಟಡ ಅವೈಜ್ಞಾನದಿಂದ ಕೂಡಿದೆ ಎಂದು ಹಿರಿಯ ಅಧಿಕಾರಿಗಳಿಗೆ ಆಕ್ಷೇಪಣಾ ಪತ್ರ ಬರೆದಿದ್ದಾರೆಂದು ತಿಳಿದು ಬಂದಿದೆ. ರಸ್ತೆ ಪಕ್ಕದಲ್ಲಿಯೇ ನಿರ್ಮಾಣ ಮಾಡುತ್ತಿದ್ದು, ಜಾನುವಾರುಗಳ ಚಿಕಿತ್ಸೆಗೆ ಮುಂದೆ ತೊಂದರೆಯಾಗಲಿದೆ. ಇದರ ಜೊತಗೆ ಪಶು ಆಸ್ಪತ್ರೆಗೆ ಇರಬೇಕಾದ ಎಲ್ಲ ಮಾನದಂಡಗಳನ್ನು ಇಲ್ಲಿ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *