ಸ್ವಾಮೀಜಿಯಾಗಿ ಬದಲಾದ ಮೆಕ್ಯಾನಿಕ್- ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ದೋಖಾ

Public TV
2 Min Read

– ಮಹಿಳೆಗೆ 27 ಕೋಟಿ ರೂ. ವಂಚನೆ
– ನಿಮ್ಮ ಮನೆ ಸ್ಮಶಾನ ಆಗುತ್ತೆ ಅಂತ ಬೆದರಿಕೆ
– ಎಲ್ಲಾ ಆಸ್ತಿ ಮಾರಾಟ ಮಾಡಿಸಿದ ಕುಡುಕ ಸ್ವಾಮೀಜಿ

ಕೋಲಾರ: ಗ್ಯಾರೇಜ್‍ನಲ್ಲಿ ಕೆಲಸ ಮಾಡುತ್ತಿದ್ದ ಮೆಕ್ಯಾನಿಕ್ ಮೈಮೇಲೆ ಅದ್ಯಾವಾಗ ದೇವಿ ಸೊಲ್ಲಾಪುರದಮ್ಮ ಬಂದು ಸೇರಿಕೊಂಡ್ಲೋ ಗೊತ್ತಿಲ್ಲ. ಅಂದಿನಿಂದ ಆತನ ಲಕ್ಕೇ ಬದಲಾಗಿ ಹೋಗಿತ್ತು. ಮೆಕಾನಿಕ್ ಸ್ವಾಮೀಜಿಯಾಗಿ ದೇವರ ಹೆಸರಲ್ಲಿ ಕೋಟಿ ಕೋಟಿ ದೋಖಾ ಮಾಡಿ ಈಗ ತಲೆಮರೆಸಿಕೊಂಡಿರುವ ಸ್ಟೋರಿ ಇಲ್ಲಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೆಂಗನೂರು ಗ್ರಾಮದ ಬಳಿ ಇರುವ ಸೊಲ್ಲಾಪುರಮ್ಮ ದೇವಾಲಯದ ಸ್ವಾಮೀಜಿ ಕಂ ಅರ್ಚಕ ನಾಗರಾಜ್, ದೇವರ ಹೆಸರಲ್ಲಿ ಮಹಿಳೆಗೆ ಬೆದರಿಸಿ ಕೋಟಿ ಕೋಟಿ ನಾಮ ಹಾಕಿರುವ ಘಟನೆ ಈಗ ಬೆಳಕಿಗೆ ಬಂದಿದೆ. ಬಂಗಾರಪೇಟೆ ಪಟ್ಟಣದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ ನಾಗರಾಜ್, ಕಳೆದ 15 ವರ್ಷಗಳ ಹಿಂದೆ ತನ್ನ ಮೈಮೇಲೆ ಸೊಲ್ಲಾಪುರದಮ್ಮ ಬರ್ತಾಳೆ ಎಂದು ಬೆಂಗಳೂರು ಸಮೀಪದ ಬಂಗಾರಪೇಟೆ ಹೊರವಲಯದಲ್ಲಿ ಒಂದು ಬೆಳ್ಳಿ ಪೇಟೆಯನ್ನ ನಿರ್ಮಿಸಿಕೊಂಡು ಪೂಜೆ ಮಾಡುತ್ತಿದ್ದಾನೆ. ಸದ್ಯ ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ವಾಂಟೆಡ್ ಆರೋಪಿಯಾಗಿದ್ದು, ಕುಟುಂಬ ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಗೆ ಸುಮಾರು 27 ಕೋಟಿ ರೂ. ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

ನನ್ನ ಮೈಮೇಲೆ ಸೊಲ್ಲಾಪುರದಮ್ಮ ಬರ್ತಾಳೆ, ಅವಳು ಹೇಳಿದಂತೆ ಕೇಳಬೇಕು. ದೇವಿಗೆ ಸ್ವಲ್ಪ ಅಪಮಾನ ಆದರೂ ಇಡೀ ಕುಟುಂಬದಲ್ಲಿ ಯಾರೂ ಉಳಿಯಲ್ಲ. ನಿಮ್ಮ ಮನೆ ಸ್ಮಶಾನ ಆಗುತ್ತೆ ಎಂದು ಬೆಂಗಳೂರಿನ ರಾಮಮೂರ್ತಿ ನಗರ ನಿವಾಸಿ ಗೀತಾ ಅನ್ನೋರಿಗೆ ಬೆದರಿಸಿ ನಂಬಿಸಿದ್ದಾನೆ. ಅಲ್ಲದೆ ದೇವಿ ಮೈಮೇಲೆ ಬಂದ ಮೊದಲ ದಿನವೇ 5 ಕೆ.ಜಿ ಚಿನ್ನ ಪಡೆದಿದ್ದನಂತೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ವಿರುದ್ಧ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಮಹಿಳೆ ದೂರು ನೀಡಿದ್ದಾರೆ. ಕುಟುಂಬ ಸಮಸ್ಯೆ ಬಗೆಹರಿಸುವ ನೆಪದಲ್ಲಿ ಮಹಿಳೆ ಬಳಿ ಮಕ್ಕಳಿಗೆ ಗೊತ್ತಿಲ್ಲದೆ ನಿವೇಶನ, ನಗ, ನಾಣ್ಯ ಸೇರಿದಂತೆ 27 ಕೋಟಿಯಷ್ಟು ವಂಚನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಪ್ರತಿಬಾರಿ ದೇವಿ ಮೈಮೇಲೆ ಬಂದಾಗಲೆಲ್ಲಾ ಹಂತ ಹಂತವಾಗಿ ಬೆಂಗಳೂರು ಮೂಲದ ಮಹಿಳೆ ಗೀತಾ ಎಲ್ಲಾ ಆಸ್ತಿಗಳನ್ನ ಮಾರಾಟ ಮಾಡಿಸಿರುವ ನಾಗರಾಜ್, ಆ ಹಣವನ್ನೆಲ್ಲಾ ಕೊಲ್ಲಾಪುರ ದೇವಿ ಮುಂದೆ ಇಟ್ಟು ವಿಶೇಷ ಪೂಜೆ ಮಾಡಿ ವಾಪಸ್ ಕೊಡ್ತೀನಿ ಎಂದು ನಂಬಿಸಿದ್ದ. ಆದರೆ ಈಗ ಪೂಜಾರಿ ನಾಟ್ ರೀಚೆಬಲ್ ಆಗಿದ್ದಾನೆ. ಪರಿಣಾಮ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ವಂಚಕ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಬೆಂಗಳೂರಿನ ಸಿಸಿಬಿ ಪೊಲೀಸರು ವಾರೆಂಟ್ ಸಮೇತವಾಗಿ ದೇವಾಲಯಕ್ಕೆ ಆಗಮಿಸಿದ್ದಾರೆ. ದೇವಾಲಯ ಹಾಗೂ ಮನೆಯನ್ನ ಹುಡುಕಾಡಿರುವ ಸಿಸಿಬಿ ಪೊಲೀಸರು ಒಂದಷ್ಟು ನಗದು ಹಾಗೂ ಮಹತ್ವದ ದಾಖಲೆಗಳನ್ನ ತೆಗಡದುಕೊಂಡು ಹೋಗಿದ್ದಾರೆ. ಮಾತ್ರವಲ್ಲದೆ ದೇವಾಲಯಕ್ಕೆ ಬೀಗ ಜಡಿದಿರುವ ಸಿಸಿಬಿ ಪೊಲೀಸರು ಸ್ವಾಮೀಜಿ ನಾಗರಾಜ್ ಹಾಗೂ ಪತ್ನಿ ಲಕ್ಷ್ಮಮ್ಮರ ಹುಡುಕಾಟದಲ್ಲಿ ಇದ್ದಾರೆ. ಆದರೆ ಮಗ ಯಾವುದೇ ತಪ್ಪು ಮಾಡಿಲ್ಲ, ಪೊಲೀಸರು ಏಕಾಏಕಿ ಮನೆಗೆ ನುಗ್ಗಿ ದರೋಡೆ ಮಾಡಿದ್ದಾರೆ ಎಂದು ನಾಗರಾಜ್ ತಾಯಿ ಕಣ್ಣೀರು ಹಾಕುತ್ತಾರೆ.

ಒಟ್ಟಿನಲ್ಲಿ ಕುಟುಂಬ ಸಮಸ್ಯೆ ಅಂತ ಬಂದ ಮಹಿಳೆಯ ಸಮಸ್ಯೆ ಬಗೆಹರಿಸಿದನೋ ಇಲ್ಲವೋ ಗೊತ್ತಿಲ್ಲ. ಆದರೆ ತನ್ನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಂಡಿರುವ ಸ್ವಾಮೀಜಿ, ಭರ್ಜರಿಯಾಗಿ ಮನೆ, ದೇವಸ್ಥಾನ ಕಟ್ಟಿಕೊಂಡು ನೆಮ್ಮದಿಯಾಗಿದ್ದಾನೆ. ಸದ್ಯ ತಲೆ ಮರೆಸಿಕೊಂಡಿರುವ ಸ್ವಾಮೀಜಿ ಪೊಲೀಸರಿಗೆ ಸಿಕ್ಕ ನಂತರವಷ್ಟೇ ಇದರ ಸತ್ಯಾಸತ್ಯತೆ ತಿಳಿಯ ಬೇಕಿದೆ..

Share This Article
Leave a Comment

Leave a Reply

Your email address will not be published. Required fields are marked *