ನಮ್ಮವರ‍್ಯಾರೂ ಕುಮಾರಸ್ವಾಮಿ ಸಿಎಂ ಅಲ್ಲ ಅಂದಿಲ್ಲ: ಸಿದ್ದರಾಮಯ್ಯ

Public TV
2 Min Read

ಕೋಲಾರ: ನಮ್ಮ ಶಾಸಕರು ಯಾರೊಬ್ಬರೂ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಅಂತ ಹೇಳಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಶಾಸಕರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ನಗರದಲ್ಲಿ ನಡೆದ ಕ್ಷೀರ ಕ್ರಾಂತಿಯ ಹರಿಕಾರ ಎಂ.ವಿ.ಕೃಷ್ಣಪ್ಪನವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಮೈತ್ರಿ ಸರ್ಕಾರಕ್ಕೆ ಡ್ಯಾಮೇಜ್ ಆಗುವಂತಹ ಯಾವುದೇ ಹೇಳಿಕೆಗಳನ್ನು ನಮ್ಮವರು ನೀಡಿಲ್ಲ. ಮೈತ್ರಿ ಸರ್ಕಾರದ ಬಳಿಕ ನಾನು ಮುಖ್ಯಮಂತ್ರಿ ಆಗಬೇಕು ಎನ್ನುವ ಅರ್ಥದಲ್ಲಿ ಹೇಳಿದ್ದಾರೆ ಅಷ್ಟೇ ಎಂದು ನಮ್ಮ ಬೆಂಬಲಿಗರ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಎಚ್.ಸಿ.ಮಹದೇವಪ್ಪ ಅವರು ಈಗಲೂ ಸಿದ್ದರಾಮಯ್ಯ ಅವರೇ ನಮ್ಮ ಸಿಎಂ ಅಂತ ಅನ್ನಿಸುತ್ತದೆ ಎಂದಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಅಂತ ಮಾಧ್ಯಮಗಳು ಪ್ರಶ್ನಿಸುತ್ತಿದ್ದಂತೆ ಸ್ವಲ್ಪ ಗರಂ ಆದ ಮಾಜಿ ಸಿಎಂ, ಮೊಸರಲ್ಲಿಯೂ ಯಾಕೆ ಕಲ್ಲು ಹುಡುಕುತ್ತಿರಿ ಎಂದರು. ಇದನ್ನು ಓದಿ: ಖಾಲಿ ಕುರ್ಚಿ ಕಂಡು 15 ನಿಮಿಷಕ್ಕೆ ಭಾಷಣ ಮುಗಿಸಿದ ಸಿದ್ದರಾಮಯ್ಯ

ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 22ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಗೆಲ್ಲುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಪ್ರತಿ ದಿನವೂ ಚುನಾವಣೆ ಸಿದ್ಧತೆಯಲ್ಲೇ ಕಾಲ ಕಳೆಯುತ್ತೇವೆ ಎಂದ ಅವರು, ನನ್ನ ಹಾಗೂ ಮಹದೇವಪ್ಪ ನಡುವೆ ಯಾವುದೇ ಮುನಿಸು ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಆಪರೇಷನ್ ಕಮಲದ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ಎಲ್ಲಿದೆ ಆಪರೇಷನ್ ಕಮಲ? ಅದೊಂದು ಭ್ರಮೆ, ಕನಸು. ಬಿಜೆಪಿ ಆಪರೇಷನ್ ಆಗುತ್ತೆ ಅಷ್ಟೇ. ಕಳೆದ 7 ತಿಂಗಳಿನಿಂದ ಹೇಳುತ್ತಿದ್ದಾರೆ. ಇಲ್ಲಿಯವರೆಗೂ ಏನೂ ಆಗಿಲ್ಲ, ಮುಂದೆನೂ ಏನೂ ಆಗಿಲ್ಲ ಎಂದು ವ್ಯಂಗ್ಯವಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಲೋಕಸಭೆ ಚುನಾವಣೆ ಒಳಗಾಗಿ ಸಿಎಂ ಆಗಿಬಿಡಬೇಕು ಎನ್ನುವ ಭ್ರಮೆಯಲ್ಲಿದ್ದಾರೆ. ಸಿಎಂ ಆಗದಿದ್ದರೆ ಪಕ್ಷದ ಅಧ್ಯಕ್ಷ ಪಟ್ಟ ಹೋಗಿಬಿಡುತ್ತದೆ ಎನ್ನುವ ಭಯವಿದೆ. ಅವರ ಭ್ರಮೆ, ಭ್ರಮೆಯಾಗಿಯೇ ಇರುತ್ತದೆ. ಕನಸು ಕನಸಾಗಿಯೇ ಇರುತ್ತೆ ಎಂದ ಸಿದ್ದರಾಮಯ್ಯ ಅವರು, ಕಾಂಗ್ರೆಸ್‍ನಲ್ಲಿ ಅತೃಪ್ತ ಬಣವಿಲ್ಲ, ನಾಲ್ಕು ಜನ ಶಾಸಕರು ಕೂಡ ನಮ್ಮೊಂದಿಗೆ ಇದ್ದಾರೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *