ಕೋಲಾರ: ವಿಪಕ್ಷ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಅವರೇ ಸೂಕ್ತ. ಅವರಗಿಂತ ಯೋಗ್ಯ ನಾಯಕ ಪಕ್ಷದಲ್ಲಿ ನಮಗೆ ಸಿಗೋದಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಇಂದು ಕೋಲಾರದ ಸುಗಟೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಕುಮಾರ್, ನಮ್ಮ ಪಕ್ಷದಲ್ಲಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ವಿಚಾರದಲ್ಲಿ ಯಾವುದೇ ಚರ್ಚೆಯಾಗಿಲ್ಲ. ಇದೆಲ್ಲ ಊಹಾಪೋಹ ಎಂದು ಹೇಳಿದರು.
ನಾನು ಮತ್ತೆ ಕಾಂಗ್ರೆಸ್ ಸದಸ್ಯತ್ವ ಪಡೆದಿರುವೆ, ಪಕ್ಷ ಒಪ್ಪಿಸಿದ ಕೆಲಸ ಮಾಡುವೆ. ಈ ರೀತಿಯ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರೇ ವಿಪಕ್ಷ ನಾಯಕನಾಗಲು ಅತ್ಯಂತ ಯೋಗ್ಯ ವ್ಯಕ್ತಿ. ಪಕ್ಷವನ್ನು ಬಲಪಡಿಸಿ ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡಲು ಅವರ ನಾಯಕತ್ವ ಮುಖ್ಯ. ಉಳಿದ ವಿಚಾರವನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.
ಯಡಿಯೂರಪ್ಪ ಅವರಿಗೆ ಒಬ್ಬರೇ ರಾಜ್ಯವನ್ನು ಅಭಿವೃದ್ಧಿ ಮಾಡುವ ಶಕ್ತಿ ಇದ್ದರೆ ಮಾಡಲಿ, ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ಟಿಪ್ಪು ಜಯಂತಿ ಅವರಿಗೇ ಇಷ್ಟವಾಗಿಲ್ಲ ಅದಕ್ಕೆ ರದ್ದು ಮಾಡಿದ್ದಾರೆ. ಸಂವಿಧಾನಕ್ಕೆ ಬದ್ಧವಾಗಿ ಅವರು ಸರ್ಕಾರ ರಚನೆ ಮಾಡಿದ್ದಾರೆ. ಅವರು ಆಡಳಿತ ಮಾಡಲಿ ನಮಗೆ ಯಾವುದೇ ತೊಂದರೆ ಇಲ್ಲ. ಜನರು ಬುದ್ಧಿವಂತರು ಯಾವ ಕಾಲಕ್ಕೆ ಯಾವ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಅವರಿಗೆ ಗೊತ್ತು ಎಂದು ಹೇಳಿದರು.