7 ವರ್ಷದಿಂದ ಕನ್ನಡಿಗರ ಮೂಗಿಗೆ ತುಪ್ಪ- ಅನುಷ್ಠಾನಕ್ಕೆ ಬರಲೇ ಇಲ್ಲ ಕೋಲಾರ ರೈಲ್ವೇ ಕೋಚ್ ಫ್ಯಾಕ್ಟರಿ

Public TV
2 Min Read

– 1460 ಕೋಟಿ ಕೊಡಬೇಕಾದ ಕಡೆ ಕೇವಲ 1 ಕೋಟಿ
– ಕಾಂಗ್ರೆಸ್ ಸರ್ಕಾರದ ಅವಧಿ ಯೋಜನೆ ಎಂದು ಕಡೆಗಣಿಸಿದ್ರಾ..?

ಕೋಲಾರ: ಕೋಲಾರದಲ್ಲಿ ರೈಲ್ವೇ ಕೋಚ್ ಫ್ಯಾಕ್ಟರಿ ಕೇವಲ ದಾಖಲೆಗಳಲ್ಲಿಯೇ ಉಳಿಯಿತೇ ಎನ್ನುವ ಚರ್ಚೆ ಶುರುವಾಗಿದೆ. 7 ವರ್ಷಗಳ ಹಿಂದೆ ಲೋಕಸಭಾ ಚುನಾವಣೆ ಘೋಷಣೆಗೂ ಕೆಲವೇ ಕ್ಷಣಗಳ ಮೊದಲು ಶಂಕುಸ್ಥಾಪನೆ ಮಾಡಲಾದ ಯೋಜನೆ ಇದಾಗಿದ್ದು, ಅಂದಿನಿಂದ ಇಂದಿನವರೆಗೂ ಯೋಜನೆಗೆ ಮೋಕ್ಷ ಸಿಕ್ಕಿಲ್ಲ. ಆದರೆ ಕೇಂದ್ರ ಸರ್ಕಾರ ಕೋಚ್ ಫ್ಯಾಕ್ಟರಿ ಬದಲಾಗಿ ವರ್ಕ್ ಶಾಪ್ ಮಾಡಲು ಮುಂದಾಗಿರುವುದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹೌದು. 2014ರ ಮಾರ್ಚ್ 5ರಂದು ಲೋಕಸಭೆ ಚುಣಾವಣೆಯ ದಿನಾಂಕ ಘೋಷಣೆ ನಿಗದಿಯಾಗಿತ್ತು. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು ಯಲ್ದೂರು ಬಳಿ 1,118 ಎಕರೆ ಪ್ರದೇಶದಲ್ಲಿ ಅಂದು ಬೆಳ್ಳಂಬೆಳಗ್ಗೆ ಅಂದಿನ ಸಿಎಂ ಸಿದ್ದರಾಮಯ್ಯ ಹಾಗೂ ಕೋಲಾರ ಜಿಲ್ಲೆಯ ಕಾಂಗ್ರೆಸ್ ನಾಯಕರು ತರಾತುರಿಯಲ್ಲಿ ರೈಲ್ವೇ ಕೋಚ್ ಫ್ಯಾಕ್ಟರಿಗೆ ಅಡಿಗಲ್ಲು ಹಾಕಿದ್ದರು. ಯೋಜನೆಯಿಂದ ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ. ಜಿಲ್ಲೆಯ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದೆಲ್ಲಾ ಹೇಳಿದ್ದರು.

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ರೈಲ್ವೇ ಕೋಚ್ ಫ್ಯಾಕ್ಟರಿ ಯೋಜನೆ ನೆನೆಗುದಿಗೆ ಬಿದ್ದಿತ್ತು. ಈ ಯೋಜನೆ ಮತ್ತೆ ಅಂದ್ರೆ 2019ರ ಲೋಕಸಭೆ ಚುಣಾವಣೆಗೆ ಮೋಕ್ಷ ಸಿಗುತ್ತೆ ಎಂದುಕೊಳ್ಳಲಾಗಿತ್ತು. ರೈಲ್ವೇ ಕೋಚ್ ಜೊತೆಗೆ ಮೆಟ್ರೋ ತಯಾರಿ ಮಾಡುವ ಕಾರ್ಖಾನೆ ಮಾಡಲಾಗುವುದು ಎನ್ನುವು ಮೂಲಕ ಸಂಸದ ಮುನಿಯಪ್ಪ ಚುನಾವಣೆ ವೇಳೆ ಭರವಸೆ ನೀಡಿದ್ದರು. ಕೇಂದ್ರ ಒಪ್ಪಿದ್ದೆಯಾದಲ್ಲಿ ರೈಲ್ವೇ ಕೋಚ್ ಫ್ಯಾಕ್ಟರಿಯನ್ನು ಕೇವಲ ಇಪ್ಪತ್ನಾಲ್ಕು ಗಂಟೆಗಳಲ್ಲಿ ಅನುಮೋದನೆ ಮಾಡಿಸಿಕೊಂಡು ಬರುವುದಾಗಿ ಸಂಸದ ಮುನಿಯಪ್ಪ ಅಂದು ಹೇಳಿದ್ದರು. ಈ ಮೂಲಕ ರೈಲ್ವೇ ಕೋಚ್ ಫ್ಯಾಕ್ಟರಿಯನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಂಡು ಅಜೆಂಡಾದಲ್ಲಿ ಸೇರಿಸಿತ್ತು.

2014ರಿಂದಲೂ ಕೇಂದ್ರ ಸರ್ಕಾರ ತನ್ನ ಬಜೆಟ್‍ನಲ್ಲಿ 1 ಕೋಟಿ ರೂಪಾಯಿಯನ್ನ ಮೀಸಲಿರಿಸಿಕೊಂಡೆ ಬರುತ್ತಿದೆ. ಇದಕ್ಕೆ ಬೇಕಾಗಿರುವ ಭೂಮಿ ಹಾಗೂ ಅದರ ಸ್ಥಾಪನೆಗೆ ಬೇಕಾದ 1,460 ಕೋಟಿ ರೂಪಾಯಿಯಲ್ಲಿ ಅರ್ಧದಷ್ಟು ಪಾಲನ್ನು ರಾಜ್ಯ ಸರ್ಕಾರ ನೀಡಬೇಕು ಎನ್ನುವ ಒಪ್ಪಂದ ಕೂಡ ನಡೆದಿತ್ತು. ಅಂದಿನ ಸಿಎಂ ಸಿದ್ದರಾಮಯ್ಯ ಇದಕ್ಕೆ ಒಪ್ಪಿಗೆಯನ್ನು ನೀಡಿ ಕರಾರು ಪತ್ರಕ್ಕೂ ಸಹಿ ಮಾಡಿದ್ದರು. ಆದರೆ ಯೋಜನೆ ಹಳ್ಳಹಿಡಿದಿದ್ದು, ರೈಲ್ವೇ ಕೋಚ್ ಫ್ಯಾಕ್ಟರಿ ಬದಲಾಗಿ ವರ್ಕ್ ಶಾಪ್ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದ ಜಿಲ್ಲೆಗೆ ಸಾಕಷ್ಟು ಹಿನ್ನೆಡೆಯಾಗಿದ್ದು, 3 ಸಾವಿರ ಉದ್ಯೋಗ ಕಡಿತವಾಗಲಿದೆ. ಕಳೆದ 7 ವರ್ಷಗಳಿಂದ ಕೋಚ್ ಫ್ಯಾಕ್ಟರಿ ಆಗುತ್ತೆ, ಉದ್ಯೋಗವಕಾಶಗಳು ಹೆಚ್ಚೆಚ್ಚು ಸಿಗುತ್ತೆ ಎಂದುಕೊಂಡಿದ್ದ ಕೋಲಾರ ಭಾಗದ ಜನರಿಗೆ ನಿರಾಸೆ ಮೂಡಿದೆ. ಸದ್ಯ ವರ್ಕ್ ಶಾಪ್‍ನಿಂದಾಗಿ 2 ಸಾವಿರ ಉದ್ಯೋಗ ಮಾತ್ರ ಸೃಷ್ಟಿಯಾಗಲಿದ್ದು, ಅದು ಕೂಡ ಯಾವಾಗ ಆಗುತ್ತೆ ಎಂಬುದು ಇನ್ನೂ ಕಾದು ನೋಡಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *