ಕೋಲಾರಕ್ಕೆ ಬೆಂಗಳೂರಿನ ಪಾದರಾಯನಪುರ ನಂಟು

Public TV
1 Min Read

ಕೋಲಾರ: ಬೆಂಗಳೂರಿನ ಪಾದರಾಯನಪುರದ ಕೆಲ ಪುಂಡರು ಕೋಲಾರಕ್ಕೆ ತೆರಳಿದ್ದು, ತಾಲೂಕಿನ ಶಿಳ್ಳಂಗೆರೆ ಗ್ರಾಮಕ್ಕೆ ಐವರು ಆಗಮಿಸಿದ್ದಾರೆ.

ಬೆಂಗಳೂರಿನ ಪಾದರಾಯನಪುರದಲ್ಲಿ ಗಲಾಟೆಯಾದ ನಂತರ ಈ ಐವರು ಕೋಲಾರಕ್ಕೆ ಆಗಮಿಸಿದ್ದು, ಆರೋಗ್ಯಾಧಿಕಾರಿಗಳು ಇವರನ್ನು ಹೋಮ್ ಕ್ವಾರಂಟೈನ್‍ನಲ್ಲಿ ಇರಿಸಿದ್ದಾರೆ. ಇದರಿಂದ ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದು, ಹೊರ ಬರುವುದಕ್ಕೂ ಹೆದರುತ್ತಿದ್ದಾರೆ. ಎಲ್ಲಿ ಬೆಂಗಳೂರಿನಿಂದ ಕೊರೊನಾ ತಂದಿದ್ದಾರೋ ಎಂದು ಭಯಭೀತರಾಗಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಸಹ ಕಟ್ಟೆಚ್ಚರ ವಹಿಸಿದ್ದಾರೆ.

ಇತ್ತ ಪಾದರಾಯನಪುರದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಕಠಿಣ ನಿಯಮಗಳು ಇಂದಿನಿಂದ ಅನ್ವಯವಾಗಲಿದ್ದು, ಜನರು ಮನೆಯಿಂದ ಹೊರ ಬರುವಂತಿಲ್ಲ. ಸೀಲ್‍ಡೌನ್ ಆಗಿದ್ರೂ ಯಾವುದೇ ರೀತಿಯ ಭಯವಿಲ್ಲದೇ ಜನ ಆರಾಮವಾಗಿ ಮನೆಯಿಂದ ಹೊರಬಂದು ಕಾಲಹರಣ ಮಾಡುತ್ತಿದ್ದರು. ಭಾನುವಾರ ರಾತ್ರಿ ನಡೆದ ಗಲಭೆಯಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಪುಂಡರನ್ನ ಬಂಧಿಸಿದ್ದಾರೆ. ಇಡೀ ಪಾದರಾಯನಪುರ ಪೊಲೀಸ್ ಸರ್ಪಗಾವಲಿನಲ್ಲಿದೆ. ದಿನ ಬೆಳ್ಳಂ ಬೆಳಗ್ಗೆ ಹಾಲು, ತರಕಾರಿ ನೆಪ ಹೇಳಿಕೊಂಡು ಹೊರಬರುತ್ತಿದ್ದ ಜನ ಈಗ ಮನೆಯಿಂದ ಹೊರಬರುತ್ತಿಲ್ಲ.

ಪಾದರಾಯನಪುರ ಗಲಾಟೆ ಪ್ರಕರಣ ಸಂಬಂಧ ಬಂಧಿಸಲಾಗಿದ್ದ 54 ಆರೋಪಿಗಳನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ರವಾನೆ ಮಾಡಲು ಆದೇಶಿಸಲಾಗಿದೆ. ಆರೋಪಿಗಳನ್ನು ಪರಪ್ಪನ ಅಗ್ರಹಾರದಿಂದ ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಲು ಕಾರಾಗೃಹ ಡಿಜಿಪಿ ಅಲೋಕ್ ಮೋಹನ್ ಆದೇಶಿಸಿದ್ದಾರೆ. ಹಾಗೆಯೇ ರಾಮನಗರ ಜೈಲಿನಲ್ಲಿರುವ 177 ಮಂದಿ ಖೈದಿಗಳು, ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಕೊರೊನಾ ಗ್ರೀನ್ ಜೋನ್‍ನಲ್ಲಿರುವ ರಾಮನಗರ ಜಿಲ್ಲೆಯಲ್ಲಿ ಇಲ್ಲಿಯ ತನಕ ಯಾವುದೇ ಪಾಸಿಟಿವ್ ಕೇಸ್ ಕಾಣಿಸಿಕೊಂಡಿಲ್ಲ. ಹೀಗಾಗಿ ರಾಮನಗರ ಜೈಲಿನಲ್ಲಿನ ಖೈದಿಗಳು, ಆರೋಪಿಗಳು ಸಹ ಪರಪ್ಪನ ಅಗ್ರಹಾರಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದು, ತಮ್ಮನ್ನು ಶಿಫ್ಟ್ ಮಾಡುತ್ತಿರುವುದಕ್ಕೆ ವಿರೋಧಿಸುತ್ತಿದ್ದಾರೆ ಎಂದು ಜೈಲಿನ ಮೂಲಗಳಿಂದ ತಿಳಿದುಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *