ಕೋಲಾರ: ರಾತ್ರಿ ಸ್ನೇಹಿತರು ಕರೆದರು ಅಂತ ಮನೆಯಿಂದ ಹೊರ ಹೋದ ವ್ಯಕ್ತಿ ಅನುಮಾನಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಮುದುವಾಡಿ ಗ್ರಾಮದ ಪ್ರಕಾಶ್ (29) ಅನುಮಾನಸ್ಪದವಾಗಿ ಮೃತಪಟ್ಟ ವ್ಯಕ್ತಿ. ಮುದುವಾಡಿ ಹೊಸಹಳ್ಳಿ ಗ್ರಾಮದ ಬಳಿ ಪ್ರಕಾಶ್ ಶವ ಪತ್ತೆಯಾಗಿದೆ. ಪ್ರಕಾಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಸ್ನೇಹಿತರು ಪೋನ್ ಮಾಡಿ ಕರೆದರು ಎಂದು ಪ್ರಕಾಶ್ ಸೋಮವಾರ ರಾತ್ರಿ ಮನೆಯಿಂದ ಹೊರ ಹೋಗಿದ್ದ. ಆದರೆ ತಡರಾತ್ರಿಯಾದರು ಮನೆಗೆ ಬಂದಿರಲಿಲ್ಲ. ಮನೆಯವರು ಪೋನ್ ಮಾಡಿದರೆ ರಿಸೀವ್ ಮಾಡಲಿಲ್ಲ. ಹೀಗಾಗಿ ಏನೋ ಕೆಲಸದ ಮೇಲೆ ಹೊರ ಹೋಗಿರಬೇಕು ಬರುತ್ತಾನೆ ಎಂದು ಕುಟುಂಬಸ್ಥರು ಸುಮ್ಮನಾಗಿದ್ದರು. ಆದರೆ ಬೆಳ್ಳಂಬೆಳಗ್ಗೆ ಪ್ರಕಾಶ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದನ್ನು ಕಂಡ ಕೆಲವರು ಕುಟುಂಬಸ್ಥರಿಗೆ ತಿಳಿಸಿದ್ದಾರೆ.
ಪ್ರಕಾಶ್‍ನನ್ನು ಯಾರೋ ಹೊಡದು ತಂದು ಇಲ್ಲಿ ಬಿಸಾಡಿದ್ದಾರೆ. ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಪ್ರಕಾಶ್ ಸುತ್ತಮುತ್ತ ಊರುಗಳ ಜನರ ಜೊತೆಗೆ ಉತ್ತಮ ಒಡನಾಟ ಹೊಂದಿದ್ದ. ಕಳೆದ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಪ್ರಕಾಶ್‍ಗೆ ಇಪ್ಪತ್ತು ದಿನದ ಹಿಂದಷ್ಟೇ ಗಂಡು ಮಗುವಾಗಿತ್ತು. ಎರಡು ದಿನದ ಹಿಂದಷ್ಟೇ ಒಂದು ಟೆಂಪೋ ಖರೀದಿ ಮಾಡಿದ್ದ ಪ್ರಕಾಶ್ ಚೆನ್ನಾಗಿ ಬದುಕಬೇಕೆಂದು ಕೊಂಡಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಸ್‍ಪಿ ಕಾರ್ತಿಕ್ ರೆಡ್ಡಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕಾಶ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.