ಕೋಲಾರ ಹಾಲು ಒಕ್ಕೂಟದಲ್ಲಿ ಭ್ರಷ್ಟಾಚಾರ; ಕಾಂಗ್ರೆಸ್ ಶಾಸಕರ ಮಧ್ಯೆಯೇ ಕೋಟ್ಯಂತರ ರೂಪಾಯಿ ಹಗರಣ ಫೈಟ್

Public TV
3 Min Read

ಕೋಲಾರ: ಕೋಲಾರ ಹಾಲು ಒಕ್ಕೂಟದ ವಿಚಾರದಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಪರಿಣಾಮ ಕೋಲಾರ ಹಾಲು ಒಕ್ಕೂದಲ್ಲಿ ನಡೆದಿರುವ ಅಕ್ರಮಗಳು ಒಂದೊಂದಾಗಿ ಹೊರಬರುತ್ತಿವೆ. ಈಗಾಗಲೇ ಗೋಲ್ಡನ್ ಡೈರಿ ನಿರ್ಮಾಣ ಹಾಗೂ ಸೋಲಾರ್ ಪ್ಲಾಂಟ್ ನಿರ್ಮಾಣದ ಅಕ್ರಮದ ಆರೋಪ ಮಾಡಿದ್ದ ಶಾಸಕ ಈಗ ಒಕ್ಕೂಟದಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಡೀಸೆಲ್ ಹಗರಣ ತೆರೆದಿಟ್ಟಿದ್ದಾರೆ.

ಕೋಲಾರ ಹಾಲು ಒಕ್ಕೂಟದಲ್ಲಿ ಕಳೆದ ಐದು ವರ್ಷಗಳಲ್ಲಿ, ಅದು ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿದೆ ಎಂದು ಬಂಗಾರಪೇಟೆ ಕಾಂಗ್ರೆಸ್‌ ಶಾಸಕ ಹೆಸರೇಳದೆ ಆರೋಪಗಳನ್ನು ಮಾಡಿದ್ದರು. ಈ ಕುರಿತು ನಾರಾಯಣಸ್ವಾಮಿ, ಬೆಳಗಾವಿ ಅಧಿವೇಶನದಲ್ಲೂ ಪ್ರಸ್ತಾಪ ಮಾಡಿ ಕೋಲಾರ ಹಾಲು ಒಕ್ಕೂಟದಲ್ಲಿ ನಿರ್ಮಾಣವಾಗುತ್ತಿರುವ ಗೋಲ್ಡನ್ ಡೈರಿ ಹಾಗೂ ಸೋಲಾರ್ ಪ್ಲಾಂಟ್‌ನ್ನು ಅಕ್ರಮ ಎಸಗಲಾಗಿದೆ. ನಿಯಮಗಳನ್ನು ಗಾಳಿಗೆ ತೂರಿ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದ್ದರು.

ಈ ಬೆನ್ನಲ್ಲೇ ಇಂದು ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೋಲಾರ ಹಾಲು ಒಕ್ಕೂಟದಲ್ಲಿ ನಡೆದಿರುವ ನೂರಾರು ಕೋಟಿ ರೂಪಾಯಿ ಡೀಸೆಲ್ ಅವ್ಯವಹಾರವನ್ನು ಬಯಲಿಗೆಳೆದು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಶಾಸಕ ಎಸ್.ಎನ್.ನಾರಾಯಣಸ್ವಾಮಿ ದಾಖಲೆ ಬಿಡುಗಡೆ ಮಾಡಿ ಗಂಭೀರ ಆರೋಪ ಮಾಡಿದ್ದಾರೆ. ಒಕ್ಕೂಟದ ಅಧ್ಯಕ್ಷರು, ನಿರ್ದೇಶಕರು, ಅಧಿಕಾರಿಗಳು ಓಡಾಟಕ್ಕೆ ಹಾಗೂ ಹಾಲು ಸಾಗಾಟದ ಹೆಸರಲ್ಲಿ ನೂರಾರು ಕೋಟಿ ರೂಪಾಯಿ ಡೀಸೆಲ್ ಲೂಟಿ ಮಾಡಲಾಗಿದೆ ಎಂದು ಆರೋಪಿಸಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಶಾಸಕ ನಂಜೇಗೌಡ ಅವರು ಅವಧಿಯಲ್ಲಿ ಅಂದರೆ ಐದು ವರ್ಷಗಳಲ್ಲಿ 239 ಕೋಟಿ ರೂಪಾಯಿ ಕೇವಲ ಡೀಸೆಲ್ ಲೆಕ್ಕ ತೋರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಅಧ್ಯಕ್ಷರ ವಾಹನದ ಡೀಸೆಲ್‌ಗಾಗಿ 20,56,193 ರೂ. ಡೀಸೆಲ್ ಬಳಕೆ, ವ್ಯವಸ್ಥಾಪಕರ ವಾಹನದ ಡೀಸೆಲ್ 8,56,210 ರೂ. ಬಳಕೆ, ಟ್ಯಾಂಕರ್ ಹಾಲು ಸರಬರಾಜಿಗೆ 13,22,98,336 ರೂ. ಡೀಸೆಲ್ ಬಳಕೆ, ಒಕ್ಕೂಟದ ಅಧಿಕಾರಿಗಳ ಗುತ್ತಿಗೆ ವಾಹನಕ್ಕೆ 5,88,25,425 ರೂ. ಡೀಸೆಲ್ ವೆಚ್ಚ, ಗುಡ್ ಲೈಫ್ ಹಾಲು ಸಾಗಾಣಿಕೆಗೆ 79,56,72,86 ರೂ. ಡೀಸೆಲ್‌ಗಾಗಿ ವೆಚ್ಚ ಮಾಡಲಾಗಿದೆ. ಪಶು ವೈದ್ಯರ ವಾಹನದ ಡೀಸೆಲ್‌ಗಾಗಿ 7,69,84,680 ರೂ. ವೆಚ್ಚ, ಮುಖ್ಯ ಡೈರಿಯಿಂದ ಹಾಲಿನ ಉತ್ಪನ್ನಗಳ ಸಾಗಾಣಿಕೆಗೆ ವಾಹನ ಡೀಸೆಲ್ 73,01,12,608 ರೂ., ಬಿಎಂಸಿ ಕೇಂದ್ರಗಳಿಂದ ಕಚ್ಚಾ ಹಾಲು ಸಾಗಾಟಕ್ಕೆ 60,05,94,883 ರೂ. ಡೀಸೆಲ್ ಖರೀದಿ ಮಾಡಿದ್ದಾರೆ. ಒಟ್ಟು 239,76,01,198 ರೂ. ವೆಚ್ಚ ಮಾಡಿದ್ದಾರೆ. ಆದರೆ ಯಾವುದೇ ಲಾಗ್ ಬುಕ್ ಇಟ್ಟಿಲ್ಲ. ಯಾವುದಕ್ಕೂ ಲೆಕ್ಕಾ ಇಲ್ಲ. ಅಲ್ಲಿ ಶಾಸಕರೂ ಶಾಸಕರಾಗಿ ಖರ್ಚು ವೆಚ್ಚ ಪಡೆದು ಇಲ್ಲಿ ಇಷ್ಟೊಂದು ಹಣ ಯಾಕೆ ಪಡೆದಿದ್ದಾರೆ ಎಂದು ಶಾಸಕ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಪ್ರವಾಸದ ಹೆಸರಲ್ಲಿ ಕೋಟ್ಯಂತರ ರೂಪಾಯಿ ಹಣ ಗುಳುಂ ಮಾಡಲಾಗಿದೆ. ರೈತರ ಪ್ರವಾಸದ ಹೆಸರಲ್ಲಿ ಕಳೆದ ಐದು ವರ್ಷಗಳಲ್ಲಿ 4,93,50,000 ರೂ. ವೆಚ್ಚ ಮಾಡಿದ್ದಾರೆ. ಅದರ ಜೊತೆಗೆ ಆಡಳಿತ ಮಂಡಳಿಯ ನಿರ್ದೇಶಕರುಗಳ ಪ್ರವಾಸಕ್ಕಾಗಿ 1,15,55,774 ರೂ. ವೆಚ್ಚ ಮಾಡಲಾಗಿದೆ. ಇದರ ಜೊತೆಗೆ ಗೋಲ್ಡನ್ ಡೈರಿ ನಿರ್ಮಾಣವನ್ನು ತರಾತುರಿಯಲ್ಲಿ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ. ಸಂಬಂಧಪಟ್ಟ ಯಾವುದೇ ಇಲಾಖೆಗಳಿಂದ ಅನುಮತಿ ಪಡೆಯದೇ ಕಾಮಗಾರಿ ಆರಂಭಿಸಿದ್ದಾರೆ.

ಜಿಲ್ಲಾಧಿಕಾರಿಗಳಿಂದ ಮೇವು ಬೆಳೆಯಲು 30 ಎಕರೆ ಭೂಮಿ ಮಂಜೂರು ಮಾಡಿಸಿಕೊಂಡು 50 ಎಕರೆ ಪ್ರದೇಶದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಲಾಗುತ್ತಿದೆ. ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡುವ ಮೊದಲು ಭೂಮಿ ಪೋಡಿ ಆಗಿಲ್ಲ. ಭೂ ಪರಿವರ್ತನೆ ಆಗಿಲ್ಲ. ಸರ್ಕಾರದಿಂದ ಅನುಮತಿ ಪಡೆದಿಲ್ಲ. ಅಕ್ರಮವಾಗಿ ಕಾಮಗಾರಿ ಮಾಡಲಾಗುತ್ತಿದೆ. ಇದರ ಹಿಂದಿನ ಉದ್ದೇಶ ಟೆಂಡರ್ ಮಾಡಿ ತಮ್ಮ ಅವಧಿಯಲ್ಲಿ ಕಾಮಗಾರಿ ಆರಂಭವಾದ್ರೆ ತಮಗೆ ಸೇರಬೇಕಾದ್ದು ಸೇರುತ್ತದೆ ಎಂಬ ಲೆಕ್ಕಾಚಾರ ಅನ್ನೋದು ಶಾಸಕ ನಾರಾಯಣಸ್ವಾಮಿ ಆರೋಪ.

ಈ ಬಗ್ಗೆ ಸಮಗ್ರ ತನಿಖೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದ್ದಾರೆ. ಶಾಸಕ ನಾರಾಯಣಸ್ವಾಮಿ ಆರೋಪಕ್ಕೆ ಶಾಸಕ ಹಾಗೂ ಕೋಲಾರ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ವೈ.ನಂಜೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಗೋಲ್ಡನ್ ಡೈರಿಯನ್ನಾಗಲಿ ಸೋಲಾರ್ ಪ್ಲಾಂಟ್‌ನಾಗಲಿ ನನ್ನ ಮನೆಗೆ ಮಾಡಿಕೊಂಡಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಕೋಲಾರ ಹಾಲು ಒಕ್ಕೂಟದಲ್ಲಿ ಕಳೆದೊಂದು ವರ್ಷದಿಂದ ಹಗರಣಗಳ ಮೇಲೆ ಹಗರಣಗಳ ಆರೋಪ ಕೇಳಿ ಬರುತ್ತಿದೆ. ಅಕ್ರಮ ನೇಮಕಾತಿ ವಿಚಾರವಾಗಿ ಇಡಿ ದಾಳಿಯೂ ನಡೆದಿದೆ. ಹಾಗಾಗಿ ಕೆಎಂಎಫ್‌ನಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಮಗ್ರ ತನಿಖೆಯಾಗಿ ಬಯಲಿಗೆ ಬರುತ್ತವೆ. ಸರ್ಕಾರ ಈ ಬಗ್ಗೆ ತನಿಖೆ ಮಾಡಬೇಕು ಎಂದು ಬಂಗಾರಪೇಟೆ ಶಾಸಕರು ಆಗ್ರಹಿಸಿದ್ದಾರೆ.

Share This Article