ಬಹು ವರ್ಷಗಳ ನಂತರ ತುಂಬಿದ ಕೋಲಾರ ಕೆರೆಗಳು-ಜನತೆಯಲ್ಲಿ ಹೊಸ ಆತಂಕ

Public TV
2 Min Read

ಕೋಲಾರ: ಬಹುವರ್ಷಗಳ ನಂತರ ಬಯಲು ಸೀಮೆ ಪ್ರದೇಶದ ಬಹುತೇಕ ಕೆರೆಗಳು ತುಂಬಿ ಕೋಡಿ ಹರಿದಿವೆ. ಆದರೆ ತುಂಬಿದ ಕೆರೆಗಳಲ್ಲಿನ ನೀರು ಹಸಿರು ಬಣ್ಣ ಪಡೆದಿದ್ದು ಜನರಲ್ಲಿ ಆತಂಕ ಮೂಡಿಸಿದೆ.

ಜಿಲ್ಲೆಯಲ್ಲಿ ಸುಮಾರು 15 ವರ್ಷಗಳ ನಂತರ ಕೆರೆ ತುಂಬಿದ್ದು ಗ್ರಾಮಸ್ಥರಲ್ಲಿ ಮುಗುಳುನಗೆಯನ್ನು ಬೀರುವಂತೆ ಮಾಡಿತ್ತು. ಆದರೆ ಕೋಲಾರದ ತಾಲೂಕಿನ ಪ್ರಮುಖ ಕೈಗಾರಿಕಾ ಪ್ರದೇಶವಾದ ನರಸಾಪುರದ ಸುತ್ತಮುತ್ತಲಿನ ಕೆರೆಗಳ ನೀರು ಒಂದು ವಾರದಿಂದ ಹಸಿರು ಬಣ್ಣದಿಂದ ಕೂಡಿದೆ. ಈ ಭಾಗದಲ್ಲಿ ಸ್ಥಾಪನೆಯಾಗಿರುವ ಹಲವು ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯ ನೀರನ್ನು ಹೊರ ಬಿಟ್ಟಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಜಿಲ್ಲೆಯಾದ್ಯಂತ ಅಪರೂಪಕ್ಕೆ ಮಳೆಯಾಗಿದ್ದರೂ, ಹಸಿರು ಬಣ್ಣದಿಂದಾಗಿ ಕೆರೆಗಳ ನೀರು ಯಾರ ಉಪಯೋಗಕ್ಕೆ ಬರದಂತಾಗಿದೆ.

ನರಸಾಪುರ ಭಾಗದ ಕೆರೆಗಳು ತುಂಬಿ ಕೋಡಿ ಬಿದ್ದಿರುವ ಪರಿಣಾಮದಿಂದ ಇದಕ್ಕೆ ಹೊಂದಿಕೊಂಡಿರುವ ದೊಡ್ಡವಲ್ಲಬ್ಬಿ ಹಾಗೂ ಇನ್ನಿತರ ಕೆರೆಗಳಿಗೂ ನೀರು ಹರಿದು ಹೋಗಿ ಸೇರುತ್ತಿದೆ. ಇದರಿಂದ ಉಳಿದ ಕೆರೆಗಳ ನೀರು ವಿಷಪೂರಿತವಾಗುವ ಆತಂಕ ಉಂಟಾಗಿದೆ.

ರಾಜ್ಯ ಸರ್ಕಾರವು ಇದಕ್ಕೂ ಮುನ್ನ ಬಯಲುಸೀಮೆ ಜನರ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕೆ.ಸಿ.ವ್ಯಾಲಿ ಯೋಜನೆ ರೂಪಿಸಿ ಕೆರೆಗಳಿಗೆ ಹರಿಸುವ ಭರವಸೆಯನ್ನು ನೀಡಿತ್ತು. ಈಗ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿರುವುದರಿಂದ ಈ ಯೋಜನೆಯ ವೇಗವೂ ಕಡಿಮೆಯಾಗಿದೆ. ಅಲ್ಲದೇ ಕಳೆದ ಒಂದು ವಾರದಿಂದ ಗ್ರಾಮದ ಕೆಲವರಿಗೆ ಸಾಂಕ್ರಾಮಿಕ ರೋಗಗಳು ಕಂಡು ಬಂದಿದ್ದು, ಗ್ರಾಮಸ್ಥರನ್ನು ಆತಂಕಕ್ಕೊಳಗಾಗುಂತೆ ಮಾಡಿದೆ. ನರಸಾಪುರ ಗ್ರಾಮ ಪಂಚಾಯತ್ ವತಿಯಿಂದ ಕೆರೆಯ ನೀರಿನ ಮಾದರಿಯನ್ನು ಪ್ರಯೋಗ ಶಾಲೆಯಲ್ಲಿ ಪರೀಕ್ಷೆ ಮಾಡಿಸಲಾಗಿದ್ದು, ಕೆರೆಯ ನೀರು ಕುಡಿಯಲು ಯೋಗ್ಯವಲ್ಲ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಉಸ್ತುವಾರಿ ಸಚಿವ ರಮೇಶ್ ಕುಮಾರ್, ಈ ಭಾಗದಲ್ಲಿ ತುಂಬಾ ವರ್ಷಗಳಿಂದ ನೀರಿಲ್ಲದೆ ಕೆರೆ ಬತ್ತಿದ್ದು, ಈಗ ಮಳೆ ನೀರು ಬಂದಿರುವುದು ಅಲ್ಗೆಯಿಂದಾಗಿ ಈ ರೀತಿಯ ಸಮಸ್ಯೆ ಎದುರಾಗಿರಬಹುದು. ಅಲ್ಲದೇ ಕೆಲ ಕಂಪನಿಗಳು ರಸಾಯನಿಕಗಳನ್ನ ತಂದು ಇಲ್ಲಿ ಸುರಿಯುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದು, ಈ ಭಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಹಲವು ವರ್ಷಗಳಿಂದ ಮಳೆ ಇಲ್ಲದೆ ಬರಗಾಲವನ್ನು ಎದುರಿಸಿದ ಸಂದರ್ಭದಲ್ಲಿ ಖಾಲಿಯಾಗಿದ್ದ ಕೆರೆಗಳನ್ನ ಕಸದ ಗುಂಡಿಗಳನ್ನಾಗಿ ಮಾಡಿದ ಪರಿಣಾಮ ಇಂದು ಹಲವು ಸಮಸ್ಯೆಗಳು ಎದುರಿಸಬೇಕಾಗಿದೆ. ಕೆರೆಗಳ ನೀರು ಮಾಲಿನ್ಯದಿಂದ ವಿಷವಾಗುವ ಮುನ್ನ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಈ ಕುರಿತು ಕ್ರಮವನ್ನು ಕೈಗೊಂಡು ಕೆರೆಗಳನ್ನು ರಕ್ಷಿಸಿಕೊಳ್ಳಬೇಕಿದೆ.

 

 

 

Share This Article
Leave a Comment

Leave a Reply

Your email address will not be published. Required fields are marked *