ಕ್ವಾರಂಟೈನ್ ಮಾಡಿದ್ದಕ್ಕೆ ಕುಟುಂಬದಿಂದ ಆತ್ಮಹತ್ಯೆ ಬೆದರಿಕೆ

Public TV
1 Min Read

ಕೋಲಾರ: ಕೊರೊನಾ ಮಹಾಮಾರಿ ಹರಡುವ ನಿಟ್ಟಿನಲ್ಲಿ ಶಂಕಿತರನ್ನು ಹೋಂ ಕ್ವಾರಂಟೈನ್ ಮಾಡಿದ್ದಕ್ಕೆ ಆಕ್ರೋಶಗೊಂಡ ಕುಟುಂಬವೊಂದು ಪೆಟ್ರೋಲ್ ಬಾಟಲ್ ನೊಂದಿಗೆ ಗ್ರಾಮ ಪಂಚಾಯ್ತಿಯ ಒಳಗೆ ನುಗ್ಗಿ ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಸಂತೆಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಈ ಘಟನೆ ನಡೆದಿದ್ದು, ಪೆಟ್ರೋಲ್ ಬಾಟಲ್ ಹಿಡಿದು ಆತ್ಮಹತ್ಯೆ ಮಾಡುವ ಬೆದರಿಕೆ ಹಾಕಿದ್ದಾರೆ. ಸಂತೇಹಳ್ಳಿ ಗ್ರಾಮದ ಮಂಜುನಾಥ್ ಹಾಗೂ ಕುಟುಂಬದವರನ್ನು ಕಳೆದ ಎರಡು ದಿನದ ಹಿಂದೆ ಹೋಂ ಕ್ವಾರಂಟೈನ್ ಮಾಡಲಾಗಿತ್ತು.

ಬೆಂಗಳೂರಿನಿಂದ ಸಂಬಂಧಿಕರು ತಮ್ಮ ಮನೆಗೆ ಬಂದಿದ್ದರು. ಅದನ್ನೆ ಕೆಲವರು ದೊಡ್ಡ ಸುದ್ದಿಯೆಂದು ಆಶಾ ಕಾರ್ಯಕರ್ತರಿಗೆ ತಿಳಿಸಿ ಕ್ವಾರಂಟೈನ್ ಮಾಡಲು ಸೂಚಿಸಿದ್ದರು. ಜೊತೆಗೆ ಮಂಜುನಾಥ್ ಸೇರಿದಂತೆ ಕುಟುಂಬಸ್ಥರ ಭಾವಚಿತ್ರವನ್ನು ಕೊರೊನಾ ಶಂಕಿತರು ಎಂದು ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಅನಾವಶ್ಯಕವಾಗಿ ಕ್ವಾರಂಟೈನ್ ಮಾಡಿದ್ದಾರೆಂದು ಆರೋಪಿಸಿರುವ ಕುಟುಂಬದ ಸದಸ್ಯರು, ಗ್ರಾಮ ಪಂಚಾಯ್ತಿ ಕಚೇರಿಗೆ ಬಂದು ಆಕ್ರೋಶ ವ್ಯಕ್ತಪಡಿಸಿದರು.

ಇಷ್ಟು ಮಾತ್ರವಲ್ಲದೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿ ಹೈಡ್ರಾಮಾ ಸೃಷ್ಟಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಮಾಲೂರು ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಪೊಲೀಸರು ಮಂಜುನಾಥ್ ಕುಟುಂಬಸ್ಥರನ್ನು ಮನವೊಲಿಸಿದರು.

Share This Article
Leave a Comment

Leave a Reply

Your email address will not be published. Required fields are marked *