ಕೋಲಾರ: ಅನುಮಾನಸ್ಪದವಾಗಿ 50ಕ್ಕೂ ಹೆಚ್ಚು ಅಲ್ಪಸಂಖ್ಯಾತ ಮಕ್ಕಳನ್ನು ಸಾಗಾಟ ಮಾಡುತ್ತಿದ್ದ ಗುಂಪೊಂದನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ರೈಲ್ವೇ ನಿಲ್ದಾಣದ ಬಳಿ ವಶಕ್ಕೆ ಪಡೆದ ಪೊಲೀಸರು ಮಕ್ಕಳ ಸಂಪೂರ್ಣ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಇನ್ನೂ ಮಕ್ಕಳೆಲ್ಲರೂ ಬಿಹಾರದವರಾಗಿದ್ದು, ಬಿಹಾರದಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಬಳಿ ಇರುವ ಮದರಸಕ್ಕೆ ಕರೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾರೆ.
ಪುಟ್ಟ ಮಕ್ಕಳನ್ನು ಯಾವ ಉದ್ದೇಶಕ್ಕಾಗಿ ಕರೆದುಕೊಂಡು ಹೋಗಲಾಗುತ್ತಿದೆ, ಗುಂಪು ಗುಂಪಾಗಿ ಮಕ್ಕಳನ್ನು ಹೀಗೆ ಕರೆದುಕೊಂಡು ಹೋಗುತ್ತಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಅಲ್ಲದೆ ಕಳೆದ 20 ದಿನಗಳ ಹಿಂದೆಯಷ್ಟೇ ಹೀಗೆ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವ ಮೂಲಕ ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಸದ್ಯ ಬಂಗಾರಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.