ಕೋಲಾರ: ಲವ್ ಮಾಡು, ಲವ್ ಮಾಡು ಎಂದು ಯುವತಿ ಹಿಂದೆ ಬಿದ್ದಿದ್ದ ಯುವಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ಮೊಗಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಈತನನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪಿಸಿದ ಯುವಕನ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ.
ಮೊಗಲಹಳ್ಳಿ ಗ್ರಾಮದ ಶ್ರೀನಿವಾಸ್ (20) ಅನುಮಾನಾಸ್ಪದವಾಗಿ ಮೃತಪಟ್ಟ ಯುವಕ. ಶ್ರೀನಿವಾಸ್ ನನ್ನು ಕೆಲ ದುಷ್ಕರ್ಮಿಗಳು ಶನಿವಾರ ತಡರಾತ್ರಿ ಕೊಲೆ ಮಾಡಿ, ಗ್ರಾಮದ ಹೊರಗೆ ನೇಣು ಹಾಕಿದ್ದಾರೆ ಎಂದು ಆರೋಪಿಸಿದ ಕುಟುಂಬಸ್ಥರು ಆರೋಪಿಗಳನ್ನು ಬಂಧಿಸಿಸುವಂತೆ ಪ್ರತಿಭಟಿಸಿದ್ದಾರೆ.
ಪ್ರೀತಿಯೇ ಕೊಲೆಗೆ ಕಾರಣಾನಾ?: ಮೊಗಲಹಳ್ಳಿಯ ಶ್ರೀನಿವಾಸ್ ಇದೇ ಗ್ರಾಮದ ಯುವತಿಯ ಹಿಂದೆ ಬಿದ್ದಿದ್ದ ಎನ್ನಲಾಗಿದೆ. ಆದರೆ ಯುವತಿ ಶ್ರೀನಿವಾಸ್ ಪ್ರೀತಿಯನ್ನು ಒಪ್ಪಿಕೊಂಡಿರಲಿಲ್ಲ. ಆದರೂ ಶ್ರೀನಿವಾಸ್ ಯುವತಿ ಕಾಲೇಜಿಗೆ ಹೋಗುವಾಗ ಬೆನ್ನ ಹಿಂದೆ ಬಿದ್ದು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಈತನ ಕಾಟದಿಂದ ಬೇಸತ್ತ ಯುವತಿ ಕೊನೆಗೆ ಈ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾಳೆ. ಪೋಷಕರು ಕೂಡಾ ಆತನಿಗೆ ಎರಡು ಬಾರಿ ಎಚ್ಚರಿಕೆ ನೀಡಿದ್ದಾರೆ. ಆದರೆ ಈ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದ ಶ್ರೀನಿವಾಸ್ ಮತ್ತೆ ತನ್ನ ಹಳೆ ಚಾಳಿಯನ್ನು ಶುರು ಮಾಡಿದ್ದ. ಈ ಹಿನ್ನೆಲೆಯಲ್ಲೇ ಈ ಘಟನೆ ನಡೆದಿದೆ ಎನ್ನಲಾಗಿದೆ.
ನಿನ್ನೆ ರಾತ್ರಿ ಕಳೆದರೂ ಶ್ರೀನಿವಾಸ್ ಮನೆಗೆ ವಾಪಸ್ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನುಮಾನಗೊಂಡು ಹುಡುಕಾಟ ನಡೆಸುತ್ತಿದ್ದಾಗ ಆತನ ಮೃತದೇಹ ಗ್ರಾಮದ ಹೊರವಲಯದ ಮಾವಿನತೋಪಿನಲ್ಲಿ ಪತ್ತೆಯಾಗಿದೆ. ಘಟನೆ ಶ್ರೀನಿವಾಸಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ಪ್ರತಿಭಟನೆ, ಪರಿಹಾರಕ್ಕೆ ಒತ್ತಾಯ: ಶ್ರೀನಿವಾಸ್ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕು ಹಾಗೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ತಾಲೂಕು ಕಛೇರಿ ಎದುರು ಶವವಿಟ್ಟು ಪ್ರತಿಭಟನೆ ಮಾಡಿದರು. ಯುವತಿಯ ಪೋಷಕರು ಈ ಕೃತ್ಯ ಎಸಗಿದ್ದಾರೆ. ಮಗನನ್ನು ಕೊಲೆ ಮಾಡಿದವರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು. ನಮ್ಮ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಶ್ರೀನಿವಾಸ್ ಪೋಷಕರು ಒತ್ತಾಯಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv