ಜೋಳಿಗೆ ಹಿಡಿದು ಕೋಡಿಶ್ರೀಗಳಿಂದ ಭಿಕ್ಷಾಟನೆ

Public TV
1 Min Read

ಹಾಸನ: ಶ್ರೀ ಮಹದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸಂಪ್ರದಾಯದಂತೆ ಕೋಡಿಶ್ರೀಗಳು ಜೋಳಿಗೆ ಹಿಡಿದು ಭಿಕ್ಷಾಟನೆ ಮಾಡಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದಲ್ಲಿ ಶ್ರೀ ಮಹದೇಶ್ವರ ಜಾತ್ರಾ ಮಹೋತ್ಸವ ಆರಂಭಗೊಂಡಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದ ಸಂಪ್ರದಾಯದಂತೆ ಮಠದ ಉತ್ತರಾಧಿಕಾರಿ ಚೇತನ್ ಮರಿದೇವರೊಂದಿಗೆ ಹಾರನಹಳ್ಳಿ ಗ್ರಾಮ ಪ್ರವೇಶಿಸಿದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ, ಜಾತಿ ಮತ ಭೇದವೆನ್ನದೆ ಗ್ರಾಮದ ಪ್ರತಿ ಮನೆಗಳಿಗೆ ತೆರಳಿ ಭಿಕ್ಷಾಟನೆ ನಡೆಸಿ ಭಕ್ತರನ್ನು ಹರಸಿ ಆಶೀರ್ವದಿಸುವ ಮೂಲಕ ಮುಂದೆ ಸಾಗಿದರು.

ಕೋಡಿಶ್ರೀಗಳು ಗ್ರಾಮಕ್ಕೆ ಭಿಕ್ಷಾಟನೆಗೆ ಬರುವ ಸಂಪ್ರದಾಯವನ್ನು ಅರಿತಿರುವ ಯುವಕರು, ಗ್ರಾಮದ ರಸ್ತೆಗಳನ್ನೆಲ್ಲ ತಳಿರು ತೋರಣಗಳಿಂದ ಶೃಂಗರಿಸಿದರೆ, ಮಹಿಳೆಯರು ತಮ್ಮ ಮನೆಯ ಅಂಗಳವನ್ನು ಸ್ವಚ್ಛಗೊಳಿ ರಂಗೋಲಿ ಬಿಡಿಸಿ ಗುರುವರ್ಯರನ್ನು ಸ್ವಾಗತಿಸಿದರು. ಶ್ರೀಗಳು ಸಾಗುವ ಮಾರ್ಗದುದ್ದಕ್ಕೂ ನಂದಿ ಧ್ವಜದೊಂದಿಗೆ ಮಂಗಳವಾದ್ಯ ನುಡಿಸುತ್ತಾ ಪಾಲ್ಗೊಂಡ ಜಾನಪದ ಕಲಾವಿದರನ್ನು ಕಂಡ ಭಕ್ತರು ಶಿವನೇ ಜೋಳಿಗೆ ಹಿಡಿದು ನಮ್ಮ ಮನೆಗೆ ಭಿಕ್ಷೆಗೆ ಬಂದಿದ್ದಾನೆ ಎಂಬಂತೆ ಭಕ್ತಿ ಭಾವದಿ ತಾವು ಬೆಳೆದ ದವಸ ಧಾನ್ಯಗಳನ್ನು ಜೋಳಿಗೆಗೆ ತುಂಬುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಭಿಕ್ಷಾಟನೆಗೆಂದು ಜೋಳಿಗೆ ಹಿಡಿದು ಮನೆ ಬಾಗಿಲಿಗೆ ಬಂದ ನೆಚ್ಚಿನ ಗುರುಗಳಾದ ಕೋಡಿಶ್ರೀಗಳನ್ನು ಕಂಡ ಭಕ್ತರು, ಶ್ರದ್ಧೆ ಭಕ್ತಿಯೊಂದಿಗೆ ಪಾದ ಪೂಜೆ ಮಾಡಿ ತಮ್ಮ ಮನೆಯೊಳಗೆ ಕರೆದು ದವಸ ಧಾನ್ಯಗಳನ್ನು ಜೋಳಿಗೆಗೆ ತುಂಬುವ ಮೂಲಕ ಗುರುವಿನ ಅನುಗ್ರಹಕ್ಕೆ ಪಾತ್ರರಾದರು.

Share This Article
Leave a Comment

Leave a Reply

Your email address will not be published. Required fields are marked *