ದರ್ಶನ್ ಹೇಳಿಕೆಗೆ ಕೋಡಿಹಳ್ಳಿ ಚಂದ್ರಶೇಖರ್ ಕೆಂಡಾಮಂಡಲ

Public TV
2 Min Read

-ರೈತರ ಕಷ್ಟ ದರ್ಶನ್‍ಗೆ ಏನು ಗೊತ್ತು?
-ಬೆಂಬಲ ಬೆಲೆ ಅನ್ನೋದು ಮೂರ್ಖತನ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಶನಿವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಸಾಲಮನ್ನಾ ಮಾಡದಿದ್ರೆ ಪರವಾಗಿಲ್ಲ. ರೈತರ ಬೆಳೆಗಳಿಗೆ ಬೆಂಬಲ ನೀಡಿದರೆ ಅವರೇ ಸಾಲದಿಂದ ಋಣಮುಕ್ತರಾಗುತ್ತಾರೆ ಎಂದು ಹೇಳಿದ್ದರು. ಸದ್ಯ ದರ್ಶನ್ ಹೇಳಿಕೆಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.

ಇಂದು ರೈತರು ನೇಣು ಬಿಗಿದುಕೊಂಡು ಜೀವ ಬಿಡುತ್ತಿದ್ದಾರೆ. ದರ್ಶನ್ ಅವರಿಗೆ ಆತ್ಮಹತ್ಯೆಗೆ ಶರಣಾಗುತ್ತಿರುವ ಕಷ್ಟ ಗೊತ್ತಿಲ್ಲ. ತಿಳುವಳಿಕೆ ಇಲ್ಲದೆ ದರ್ಶನ್ ಈ ರೀತಿ ಮಾತನಾಡಿದ್ದಾರೆ. ರೈತರ ಬಗ್ಗೆ ವಿಷಯಗಳು ಗೊತ್ತಿಲ್ಲದಿದ್ದರೆ, ನಮ್ಮೊಂದಿಗೆ ಚರ್ಚಿಸಿ ತಮ್ಮ ಪ್ರತಿಕ್ರಿಯೆ ನೀಡಬೇಕು. ರಾಜಕೀಯ ಭರಾಟೆಯಲ್ಲಿ ತಮಗೆ ತೋಚಿದ್ದನ್ನು ಮಾತನಾಡಿರಬಹುದು ಮುಂದಿನ ದಿನಗಳಲ್ಲಿ ತಮ್ಮ ಹೇಳಿಕೆಯನ್ನು ಸರಿ ಮಾಡಿಕೊಳ್ಳಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಸಲಹೆ ನೀಡಿದರು.

ತಿಳಿದು ಮಾತನಾಡಲಿ: ಜೀವದ ಅರಿವಿಲ್ಲದೆ ದರ್ಶನ್ ಮಾತನಾಡುತ್ತಿದ್ದಾರೆ. ಬೆಂಬಲ ಬೆಲೆ ಎನ್ನುವುದೇ ಮೂರ್ಖತನದ ಮಾತು. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಬದಲಾಗಿ ಸರ್ಕಾರ ಯೋಗ್ಯ ಬೆಲೆ ನೀಡಬೇಕು ಎಂಬುವುದು ನಮ್ಮ ವಾದ ಮತ್ತು ಹೋರಾಟ. ಬೆಂಬಲ ಬೆಲೆ ಎಂಬ ಪದವನ್ನು ಮೋಸಗಾರರು ಮತ್ತು ತಂತ್ರಗಾರರು ಬಳಸುತ್ತಾರೆ. ದರ್ಶನ್ ತಮ್ಮ ಸಿನಿಮಾಗೆ ಅರ್ಧ ಸಂಭಾವನೆ ತೆಗೆದುಕೊಳ್ಳುತ್ತೀನಿ ಎಂದು ಹೇಳಲಿ. ಅರ್ಧ ಸಂಭಾವನೆಯಲ್ಲಿ ಐಷಾರಾಮಿ ಕಾರುಗಳಲ್ಲಿ ಓಡಾಡೋಕ್ಕೆ ಆಗುತ್ತಾ ಅಂತಾ ನೋಡುತ್ತೇವೆ. ಚಿತ್ರದಲ್ಲಿ ನಿಮ್ಮ ಯೋಗ್ಯತೆಗೆ ತಕ್ಕ ಸಂಭಾವನೆ ಪಡೆಯುವ ಹಾಗೆ ರೈತರ ಬೆಳೆಗಳಿಗೂ ಯೋಗ್ಯ ಬೆಲೆ ನೀಡಬೇಕು. ರೈತರ ಶ್ರಮಕ್ಕೆ ಗೌರವವಾದ ಯೋಗ್ಯ ಬೆಲೆ ಬಂದಾಗ ಯಾರು ಸಾಲಮನ್ನಾ ಕೇಳುತ್ತಾರೆ. ದರ್ಶನ್ ಚಿಕ್ಕ ವಯಸ್ಸಿನವರಾಗಿದ್ದು, ಮುಂದಿನ ದಿನಗಳಲ್ಲಿ ತಿಳಿದು ಮಾತನಾಡಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.

ದರ್ಶನ್ ಹೇಳಿದ್ದೇನು?: ನಾವೆಲ್ಲ ಇಲ್ಲಿ ನೆಮ್ಮದಿಯಾಗಿ ಇದ್ದೀವಿ ಅಂದರೆ ಅದಕ್ಕೆ ಕಾರಣ ನಮ್ಮನ್ನು ಕಾಯುತ್ತಿರುವ ಸೈನಿಕರು. ಅದೇ ರೀತಿ ತುಂಬಾ ಕಡೆ ಸಾಲಮನ್ನ ಮಾಡಿಲ್ಲ, ಮಾಡಿಲ್ಲ ಎಂದು ಹೇಳುತ್ತಿದ್ದರು. ಆದರೆ ರೈತರ ಸಾಲಮನ್ನಾ ಮಾಡುವುದು ಬೇಡ. ಅವರಿಗೆ ಬೆಂಬಲ ಕೊಟ್ಟರೆ ಸಾಕು ರೈತರೇ ತಮ್ಮ ತಮ್ಮ ಸಾಲವನ್ನು ತೀರಿಸಿಕೊಳ್ಳುತ್ತಾರೆ. ರೈತರಿಗೆ ಸಾಲ ತೀರಿಸುವ ಶಕ್ತಿ ಇದೆ ಎಂದು ದರ್ಶನ್ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *