ಕೊಡಗಿನಾದ್ಯಂತ ಕಳೆಗಟ್ಟಿದ ಪುತ್ತರಿ ಸಂಭ್ರಮ

Public TV
2 Min Read

ಮಡಿಕೇರಿ: ಕೊಡಗಿನಾದ್ಯಂತ ಇಂದು ಪುತ್ತರಿ ಸಂಭ್ರಮ ಕಳೆಗಟ್ಟಿದೆ. ಕೊಡವರ ವಿಶಿಷ್ಟ ಹಬ್ಬ ಪುತ್ತರಿ ಆಚರಣೆಗೆ ಸಂಭ್ರಮ ಸಡಗರದಿಂದ ತಯಾರಿ ನಡೆಯುತ್ತಿದ್ದು, ವರ್ಷಪೂರ್ತಿ ಅನ್ನನೀಡೋ ಧಾನ್ಯಲಕ್ಷ್ಮಿಯನ್ನು ಪೂಜಿಸಿ ಮನೆಗೊಯ್ಯೋ ಸಾಂಪ್ರದಾಯಿಕ ಆಚರಣೆ ಎಲ್ಲರ ಗಮನಸೆಳೆಯುತ್ತಿದೆ. ‘ಪುಲಿ ಪುಲಿ ದೇವಾ ಪೊಲಿಯೇ ದೇವಾ’ ಘೋಷದೊಂದಿಗೆ ಮನೆಮಂದಿಯೆಲ್ಲ ಧಾನ್ಯವನ್ನು ಮನೆಗೊಯ್ದು ಪೂಜಿಸಿ ಸಂಭ್ರಮಿಸುತ್ತಿದ್ದು, ಎಲ್ಲೆಲ್ಲೂ ಹಬ್ಬದ ಸಡಗರ ಮನೆಮಾಡಿದೆ.

ಕೊಡಗು ಎಂದರೆ ವಿಶಿಷ್ಟ ಸಂಸ್ಕøತಿ ಆಚಾರ-ವಿಚಾರಗಳಿಗೆ ಹೆಸರಾದ ಜಿಲ್ಲೆ. ಪ್ರಕೃತಿಯೊಂದಿಗೆ ಬೆಸೆದುಕೊಂಡ ಕೊಡವರ ಒಂದೊಂದು ಹಬ್ಬ ಹರಿದಿನಗಳು ಗಮನ ಸೆಳೆಯುತ್ತವೆ. ಇಂದು ಕೊಡಗಿನಾದ್ಯಂತ ಪುತ್ತರಿ ಹಬ್ಬದ ಸಂಭ್ರಮ ಮನೆಮಾಡಿದೆ. ಕೊಡವರ ಪ್ರಮುಖ ಹಬ್ಬ ಪುತ್ತರಿ ಧಾನ್ಯಲಕ್ಷ್ಮಿಯನ್ನು ಮನೆಗೊಯ್ಯೋ ಜಾನಪದೀಯ ವಿಶಿಷ್ಟ ಹಬ್ಬ ನಿಜಕ್ಕೂ ವೈಶಿಷ್ಟ್ಯಪೂರ್ಣ ನೆಮ್ಮೆ. ಈ ಹಿನ್ನೆಲೆಯಲ್ಲಿ ಕೊಡಗು ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ನಡೆದ ಪುತ್ತರಿ ನಮ್ಮೆ ಎಲ್ಲರ ಗಮನ ಸೆಳೆಯಿತು. ಇದನ್ನೂ ಓದಿ: ಭಾರೀ ಮಳೆಯಿಂದಾಗಿ ಇಂದು ಅಯ್ಯಪ್ಪನ ದರ್ಶನವಿಲ್ಲ

ಏನಿದರ ವಿಶೇಷ?
ಸಾಂಪ್ರದಾಯಿಕ ಉಡುಗೆ ತೊಟ್ಟ ಕೊಡವರು, ಭತ್ತದ ಗದ್ದೆಯಲ್ಲಿ ಇರುವ ಭತ್ತದ ತೇನೆಗೆ ನಮಿಸಿ ನೆರೆಕಟ್ಟುತ್ತಾರೆ. ನಂತರ ದುಡಿಕಟ್ಟು ಪಾಟ್ ಸಮೇತ ಕೋವಿಯೊಂದಿಗೆ ಊರಿನ ಮಂದಿಯೆಲ್ಲಾ ಮೆರವಣಿಗೆ ಮೂಲಕ ಗದ್ದೆಗೆ ತೆರಳುತ್ತಾರೆ. ಅಲ್ಲಿ ಸಂಭ್ರಮದಿಂದ ಒಂದು ಸುತ್ತು ಗುಂಡು ಹಾರಿಸಿ ಕದಿರು ಕುಯ್ಯುತ್ತಾರೆ. ‘ಪುಲಿ ಪುಲಿ ದೇವಾ ಪೊಲಿಯೇ ದೇವಾ’ ಎಂದು ಸಂತಸದಿಂದ ಕೂಗುತ್ತ, ಧಾನ್ಯಲಕ್ಷ್ಮಿಯನ್ನು ಶಾಸ್ತ್ರೋಕ್ತವಾಗಿ ತೆಗೆದು ಸಾಂಪ್ರದಾಯಿಕ ಹಾಡಿನೊಂದಿಗೆ ಸಾಗುತ್ತಾರೆ.

ಅಧಿಕೃತವಾಗಿ ಕೊಡಗಿನಾದ್ಯಂತ ಪುತ್ತರಿ ಇಂದು ರಾತ್ರಿಯಿಂದ, ಕೊಡವರ ಕುಲದೈವ ಇಗ್ಗುತಪ್ಪನ ಸನ್ನಿಧಿಯಲ್ಲಿ ನೆರೆಕಟ್ಟುವ ಮೂಲಕ ಇದಕ್ಕೆ ಚಾಲನೆ ಸಿಗುತ್ತದೆ. ಅಂದರೆ ಪ್ರಕೃತಿಯೊಂದಿಗೆ ಹೊಂದಿಕೊಂಡ ಕೊಡಗಿನ ಜನರ ಆಚಾರದ ಸಂಕೇತವಾಗಿ ಐದು ಬಗೆಯ ಹಸಿರು ಮರದ ಎಲೆಗಳಾದ ಉಂಬಳಿ, ಹಲಸು, ಗೇರು, ಮಾವು ಸೇರಿದಂತೆ ಐದು ಬಗೆಯ ಹಸಿರೆಲೆಗಳನ್ನು ಒಟ್ಟುಗೂಡಿಸಿ ನೆರೆಕಟ್ಟಿ ಗುರುವಿಗೆ, ದೈವಕ್ಕೆ ನಮಿಸಲಾಗುತ್ತೆ.

ಕೊಡವರ ವಿಶಿಷ್ಟ ಸಂಸ್ಕøತಿ ಆಚಾರ ವಿಚಾರ, ಹೀಗೆ ಸಂಭ್ರಮ ಸಡಗರದಿಂದ ಎಲ್ಲರೂ ಒಂದೆಡೆ ಕಲೆತು ವರ್ಷಪೂರ್ತಿ ಮನೆ ಮಂದಿಗೆಲ್ಲಾ ಅನ್ನನೀಡೋ ಧಾನ್ಯಲಕ್ಷ್ಮಿಯನ್ನು ಪೂಜ್ಯಭಾವನೆಯಿಂದ ಮನೆಗೆ ಬರಮಾಡಿಕೊಳ್ಳಲಾಗುತ್ತೆ. ಸಾಂಪ್ರದಾಯಿಕ ಉಡುಗೆಯಲ್ಲಿ ಹಬ್ಬದ ಸಂಭ್ರಮದಲ್ಲಿರೋ ಜನರು ಗದ್ದೆಯಿಂದ ತಂದ ಭತ್ತದ ಪೈರನ್ನು ಕಣದಲ್ಲಿರಿಸಿ ತಮ್ಮ ಜಾನಪದ ನೃತ್ಯಗಳ ಮೂಲಕ ನಲಿಯುತ್ತಾರೆ. ಕಡೆಗೆ ಎಲ್ಲರೂ ಸಾಮೂಹಿಕವಾಗಿ ಕೈಯಲ್ಲಿ ಕತ್ತಿ ಹಿಡಿದು ನೃತ್ಯಮಾಡುತ್ತಾರೆ. ಇದನ್ನೂ ಓದಿ: ಓಟಿಟಿ ಪ್ರವೇಶಿಸಲು ಸಿದ್ಧರಾದ ನಾಗಚೈತನ್ಯ

ಒಟ್ಟಿನಲ್ಲಿ, ಸಾವಿರಾರು ವರ್ಷಗಳಿಂದ ಜಾನಪದ ಹಬ್ಬ ಪುತ್ತರಿಯನ್ನು ಕೊಡಗರು ಆಚರಿಸಲಾಗುತ್ತಿದ್ದು, ಇಂದು ಇದರ ಸಂಭ್ರಮ ಕಡಿಮೆಯಾಗಿದೆ. ಮೊದಲೆಲ್ಲಾ ಒಂದು ವಾರ ಮುಂಚಿತವಾಗಿಯೇ ಎಲ್ಲರೂ ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಿಸುತ್ತಿದ್ದರು. ಅದು ಅಲ್ಲದೇ ನಾನಾ ಕಾರಣಗಳಿಗಾಗಿ ಪ್ರಪಂಚದ ಬೇರೆ ಬೇರೆ ಕಡೆ ನೆಲೆಸಿರೋ ಎಲ್ಲ ಕೊಡವರು ಈ ಹಬ್ಬಕ್ಕೆ ಬಂದೇ ಬರುತ್ತಾರೆ. ನೆಂಟರಿಷ್ಟರೆಲ್ಲಾ ಒಂದೆಡೆ ಕಲೆತು, ಸಂಭ್ರಮಿಸುತ್ತಾರೆ. ಪುತ್ತರಿ ಹಬ್ಬದ ಸಂಭ್ರಮ ಕೇವಲ ಇಂದಿಗೆ ಮಾತ್ರ ಸೀಮಿತವಾಗದೆ ನಾಳೆಯಿಂದ ಕೊಡಗಿನ ಜಾನಪದದ ನೃತ್ಯಲೋಕದ ಅನಾವರಣದ ಜೊತೆಗೆ ಇಡೀ ನಾಡಲ್ಲಿ ಪುತ್ತರಿ ಸಂಭ್ರಮ ಕಳೆಗಟ್ಟಲಿದೆ.

Share This Article
Leave a Comment

Leave a Reply

Your email address will not be published. Required fields are marked *